ಬೆಂಗಳೂರು, ಅಕ್ಟೋಬರ್ 7, 2021 (www.justkannada.in): ಇಂಟೆರ್ ನೆಟ್ ಕ್ರಾಂತಿಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದರೂ ಸಹ ಶಾಲೆಗಳಲ್ಲಿ ಇಂಟೆರ್‌ನೆಟ್ ಸೌಲಭ್ಯ ದೊರೆಯುವಿಕೆ ಪ್ರಮಾಣ ಇಡೀ ದಕ್ಷಿಣ ಭಾರತದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಭಾರತದಲ್ಲಿ ರಾಜ್ಯಗಳ ಶಿಕ್ಷಣದ ಸ್ಥಿತಿಗತಿಯ ಕುರಿತಂತೆ ಯುನೆಸ್ಕೊ ನಡೆಸಿದಂತಹ ‘ಶಿಕ್ಷಕರಿಲ್ಲ, ತರಗತಿಯೂ ಇಲ್ಲ’ (‘No Teachers, No Class’) ಎಂಬ ಶೀರ್ಷಿಕೆಯ ವರದಿ (UNESCO’s 2021 State of the Education Report (SOER)) ಕರ್ನಾಟಕದ ಒಟ್ಟು ಶಾಲೆಗಳ ಪೈಕಿ ಕೇವಲ ೧೨%ರಷ್ಟು ಶಾಲೆಗಳಲ್ಲಿ ಮಾತ್ರ ಇಂಟೆರ್‌ನೆಟ್ ಸೌಲಭ್ಯಗಳಿವೆ ಎಂಬ ಮಾಹಿತಿಯನ್ನು ಹೊರಹಾಕಿದೆ.
ಈ ಸಂಖ್ಯೆ ದೇಶದ ಇತರೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಹೋಲಿಕೆಯಲ್ಲಿ ತೀರಾ ಕಡಿಮೆ ಆಗಿದೆ. ಉದಾಹರಣೆಗೆ, ಚಂಡೀಘಡದಲ್ಲಿ ಶೇ.೯೭ ಶಾಲೆಗಳಲ್ಲಿ ಇಂಟೆರ್‌ನೆಟ್ ಸೌಲಭ್ಯಗಳಿವೆಯಂತೆ. ಆ ಪ್ರಕಾರ ಚಂಡೀಘಡ ದೇಶದ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ (ಶೇ.೩೪), ಕೇರಳ (ಶೇ.೮೮), ಪುದುಚೆರಿ (ಶೇ.೬೭), ಗೋವಾ (ಶೇ.೪೦), ತಮಿಳುನಾಡು (ಶೇ.೩೪), ತೆಲಂಗಾಣ (ಶೇ.೧೮) ಹಾಗೂ ಆಂಧ್ರ ಪ್ರದೇಶ (ಶೇ.೧೭) ನಂತರದ ಸ್ಥಾನಗಳಲ್ಲಿವೆ.
“ಆನ್‌ಲೈನ್ ಮೂಲಕ ವೃತ್ತಿಪರ ಸಂಪನ್ಮೂಲಗಳು ಹಾಗೂ ವೃತ್ತಿಪರ ಅಭಿವೃದ್ಧಿ ಒದಗಿಸುವ ಸೌಲಭ್ಯಗಳು ಹೆಚ್ಚಾಗುತ್ತಿರುವುದು ಹಾಗೂ ಶಾಲೆಗಳಲ್ಲಿ ಆಡಳಿತಾತ್ಮಕ ಕೆಲಸಗಳು ಹೆಚ್ಚಾಗಿ ಕಂಪ್ಯೂಟರ್ ಹಾಗೂ ಇಂಟೆರ್‌ನೆಟ್ ಸೌಲಭ್ಯಗಳನ್ನು ಅವಲಂಭಿಸುತ್ತಿರುವುದು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ, ಶಾಲೆಗಳಲ್ಲಿ ಕಂಪ್ಯೂಟರ್ ಸೌಲಭ್ಯ ಹಾಗೂ ಇಂಟೆರ್‌ನೆಟ್ ಸೌಲಭ್ಯ ಲಭ್ಯವಿರುವುದು ಶಾಲೆಗಳ ವೃತ್ತಿಪರ ಕೆಲಸದ ಸ್ಥಿತಿಗತಿಗಳನ್ನು ಸೂಚಿಸುತ್ತದೆ. ಇಂದು ಈ ಸಂಪನ್ಮೂಲಗಳನ್ನು ಒದಗಿಸುವುದು ‘ಅಗತ್ಯ’ ಹಾಗೂ ‘ಕಡ್ಡಾಯ’ವಾಗಿ ಉಳಿದಿಲ್ಲ, ಬದಲಿಗೆ ‘ಇದ್ದರೆ ಚೆನ್ನಾಗಿರುತ್ತದೆ’ ಎಂಬಂತಾಗಿದ್ದು, ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಉಪಕ್ರಮಗಳಿಂದ ಚಾಲಿತವಾಗಿದೆ.
ಭಾರತದಲ್ಲಿನ ಶಾಲೆಗಳಲ್ಲಿ ಕಂಪ್ಯೂಟರ್ ಗಳ (ಡೆಸ್ಕ್ಟಾಪ್‌ಗಳು ಅಥವಾ ಲ್ಯಾಪ್‌ಟಾಪ್‌ಗಳು) ಒಟ್ಟಾರೆ ಲಭ್ಯತೆಯ ಪ್ರಮಾಣ ಶೇ.೨೨ರಷ್ಟಿದೆ. ನಗರ ಪ್ರದೇಶಗಳ (ಶೇ.೪೩) ಹೋಲಿಕೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಪ್ರಮಾಣ (ಶೇ.೧೮) ಸ್ವಾಭಾವಿಕವಾಗಿಯೇ ಕಡಿಮೆ ಇದೆ. ಭಾರತದಲ್ಲಿ ಶಾಲೆಗಳಲ್ಲಿ ಒಟ್ಟಾರೆ ಇಂಟೆರ್‌ನೆಟ್ ಲಭ್ಯತೆಯ ಪ್ರಮಾಣ ಶೇ.೧೯ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದರ ಪ್ರಮಾಣ ಶೇ.೧೪ ಹಾಗೂ ನಗರ ಪ್ರದೇಶಗಳಲ್ಲಿ ಶೇ.೪೨ರಷ್ಟಿದೆ,” ಎನ್ನುತ್ತದೆ ಯುನೆಸ್ಕೊ ವರದಿ.
ಶೇ.೩೭ರಷ್ಟು ತರಗತಿ ಕೊಠಡಿಗಳು ಸೂಕ್ತವಲ್ಲ
ಕರ್ನಾಟಕದಲ್ಲಿರುವ ಶಾಲೆಗಳಲ್ಲಿನ ಶೇ.೩೭ರಷ್ಟು ತರಗತಿ ಕೊಠಡಿಗಳು ಉತ್ತಮ ಸ್ಥಿತಿಯಲ್ಲಿ ಇಲ್ಲವಂತೆ. ವರದಿಯ ಪ್ರಕಾರ ಇತರೆ ರಾಜ್ಯಗಳ ಹೋಲಿಕೆಯಲ್ಲಿ ಕರ್ನಾಟಕ ಇನ್ನಿತರೆ ಅಂಶಗಳಲ್ಲಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ. ಒಟ್ಟು ೭೮,೨೨೩ ಶಾಲೆಗಳಿದ್ದು, ಈ ಪೈಕಿ ಶೇ.೭೨ರಷ್ಟು ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಕುತೂಹಲಕರವಾಗಿ ಶೇ.೯೯ರಷ್ಟು ಶಾಲೆಗಳಿಗೆ ಉತ್ತಮ ರಸ್ತೆ ಸಂಪರ್ಕ ಹಾಗೂ ಕುಡಿಯುವ ನೀರಿನ ಸೌಲಭ್ಯಗಳು ಇವೆಯಂತೆ. ಶೇ.೮೮ರಷ್ಟು ಶಾಲೆಗಳು ಬಾಲಕರ ಶೌಚಾಲಯಗಳನ್ನು ಹೊಂದಿದ್ದರೆ, ಶೇ.೯೧ರಷ್ಟು ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯಗಳಿವೆ. ಶೇ.೮೯ರಷ್ಟು ಶಾಲೆಗಳಲ್ಲಿ ಉತ್ತಮ ವಿದ್ಯುತ್ ಸಂಪರ್ಕವಿದೆ.
ಮಹಿಳಾ ಶಿಕ್ಷಕಯರ ಮೇಲುಗೈ
ರಾಜ್ಯದಲ್ಲಿರುವ ಒಟ್ಟು ಶಿಕ್ಷಕರ ಪ್ರಮಾಣದ ಪೈಕಿ ಶೇ.೫೫ರಷ್ಟು ಮಹಿಳೆಯರಾಗಿದ್ದಾರೆ. ಕರ್ನಾಟಕದಲ್ಲಿ ಬೋಧನಾ ವೃತ್ತಿಯಲ್ಲಿ ಮಹಿಳೆಯರ ಪ್ರಮಾಣ ಇತರೆ ರಾಜ್ಯಗಳ ಹೋಲಿಕೆಯಲ್ಲಿ ಹೆಚ್ಚಾಗಿದೆ (ಗೋವಾದಲ್ಲಿ ಶೇ.೮೦ರಷ್ಟು ಬೋಧಕರು ಮಹಿಳೆಯರಾಗಿದ್ದಾರೆ).
ಕರ್ನಾಟಕದಲ್ಲಿ ಬೋಧಕರ ಕೊರತೆಯಿದ್ದರೂ ಸಹ ಇತರೆ ರಾಜ್ಯಗಳ ಹೋಲಿಕೆಯಲ್ಲಿ ಈ ಪ್ರಮಾಣ ಕಡಿಮೆ ಇದೆ. ವರದಿಯ ಪ್ರಕಾರ, ಶೇ.೧೩ರಷ್ಟು ಶಾಲೆಗಳ ಶಿಕ್ಷಕರು ಕೋವಿಡ್ ಲಸಿಕೆಗಳನ್ನು ಪಡೆದಿದ್ದು, ಶೇ.೬ರಷ್ಟು ಶಾಲೆಗಳಲ್ಲಿ ಮಾತ್ರ ಕೇವಲ ಒಬ್ಬ ಬೋಧಕರಿದ್ದಾರೆ.
ಕರ್ನಾಟಕ (ಒರಿಸ್ಸಾ, ರಾಜಸ್ತಾನ ಹಾಗೂ ತಮಿಳು ನಾಡು ರಾಜ್ಯಗಳೂ ಒಳಗೊಂಡಂತೆ) ರಾಜ್ಯದಲ್ಲಿ ಬೋಧಕರ ಉದ್ಯೋಗದಲ್ಲಿ ಕಾಲ ಕ್ರಮೇಣ ಶೇ.೩೦ ರಿಂದ ಶೇ.೫೦ ರಷ್ಟು ಮಹಿಳೆಯರಿಗೆ ಮೀಸಲಾತಿ ಒದಗಿಸಿರುವ ಕಾರಣದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗಿದೆ.
ಸೂಕ್ತ ಅರ್ಹತೆಯುಳ್ಳ ಶಿಕ್ಷಕರ ಕೊರತೆ
ಜೊತೆಗೆ ಈ ವರದಿಯಲ್ಲಿ ಹೈಯರ್ ಸೆಕಂಡರಿಯಲ್ಲಿ ಶೇ.೦.೧೪ರಷ್ಟು ಪ್ರಮಾಣದ ಶಿಕ್ಷಕರು ಅಸಮರ್ಪಕ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವುದಾಗಿ ತಿಳಿಸಲಾಗಿದೆ. ಈ ಪೈಕಿ ಪ್ರಾಥಮಿಕ-ಪೂರ್ವ ತರಗತಿಗಳಲ್ಲಿ ಶೇ.೧.೬೬ರಷ್ಟು ಬೋಧಕರು ಅರ್ಹ ಶಿಕ್ಷಣವನ್ನು ಹೊಂದಿಲ್ಲ, ಅದೇ ರೀತಿ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಶೇ.೦.೬ ಹಾಗೂ ಅಪ್ಪರ್ ಪ್ರೈಮರಿಯಲ್ಲಿ ಶೇ.೦.೦೩ ಹಾಗೂ ಸೆಕಂಡರಿ ಶಾಲೆಗಳಲ್ಲಿ ಶೇ.೦.೦೨ರಷ್ಟು ಶಿಕ್ಷಕರು ಶೈಕ್ಷಣಿಕ ಅರ್ಹತೆ ಹೊಂದಿಲ್ಲ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Bangalore- schools- karnataka-internet-report