ಬೆಂಗಳೂರು,ನವೆಂಬರ್,2,2023(www.justkannada.in): ಬೆಂಗಳೂರು ದೇಶದ ತಂತ್ರಜ್ಞಾನ ರಾಜಧಾನಿಯಾದರೆ ದಕ್ಷಿಣ ಭಾರತ, ದೇಶದ ಸಂಸ್ಕೃತಿ ಸಂರಕ್ಷಣೆಯ ಮನೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಹೇಳಿದ್ದಾರೆ.
ನಗರದ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ( BIEC ) ದಲ್ಲಿ ಮೂರು ದಿನಗಳ ಕಾಲ ಆಯೋನೆಗೊಂಡಿರುವ ಆರನೇ ಇಂಡಿಯಾ ಮ್ಯಾನುಪ್ಯಾಕ್ಚರಿಂಗ್ ಶೋ IMS-2023 ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ-ವಿಜ್ಞಾನ, ಸಂಸ್ಕೃತಿ, ಸಿನಿಮಾ ಇತ್ಯಾದಿಗಳಿಂದ ದಕ್ಷಿಣ ಭಾರತ ಇಡೀ ವಿಶ್ವವನ್ನೇ ಆಕರ್ಷಿಸುವ ಶಕ್ತಿ ಹೊಂದಿದೆ ಎಂದು ಬಣ್ಣಿಸಿದ ರಾಜನಾಥಸಿಂಗ್, ದಕ್ಷಿಣ ಭಾರತ ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ದೇಶದ ಆರ್ಥಿಕತೆಯಲ್ಲಿ ಕ್ರಾಂತಿಯಾಗುತ್ತಿದೆ ಅಂದರೆ ಅದು ಸಣ್ಣ ಕೈಗಾರಿಕೆಗಳ ಕೊಡುಗೆ ಎಂದು ಅವರು ಹೇಳಿದರು.
ಖಾಸಗಿ ಮಾಲೀಕತ್ವದ ಸಣ್ಣ, ಮಧ್ಯಮ ಕೈಗಾರಿಕೆಗಳು ಲಾಭ ಸಾಧಿಸುತ್ತವೆ ಎಂದಾದರೆ ಅದು ದೇಶದ ವಾಣಿಜ್ಯ ಪ್ರಗತಿ ಎಂದ ರಕ್ಷಣಾ ಸಚಿವರು, ಉದಯೋನ್ಮುಖ ಕೈಗಾರಿಕೋದ್ಯಮುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಕೈಗಾರಿಕೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಲಘು ಉದ್ಯೋಗ ಭಾರತಿ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ,ಕೈಗಾರಿಕೆಗಳವರು ಒಂದು ಹೆಜ್ಜೆ ಮುಂದೆ ಬಂದರೆ ಕೇಂದ್ರ ಸರ್ಕಾರ. 10 ಹೆಜ್ಜೆ ಮುಂದೆ ಬಂದು ಸಹಕಾರ ನೀಡಲಿದೆ ಎಂದು ಆಶ್ವಾಸನೆ ನೀಡಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಬೆಂಗಳೂರಿನಲ್ಲಿ ಆರಂಭವಾದ ಹೆಚ್ ಎಎಲ್ ಆರಂಭ ಹಾಗೂ ಅದಕ್ಕೆ ಮಹಾರಾಜರ ಕೊಡುಗೆ ಬಗ್ಗೆ ವಿವರಿಸಿದರಲ್ಲದೆ,ನಷ್ಟದಲ್ಲಿದ್ದ ಎಚ್ ಎಎಲ್ ಕಾರ್ಖಾನೆ,ಪ್ರಧಾನಿ ಮೋದಿ ಅವರ ಕನಸಿನ ಮೇಕ್ ಇನ್ ಇಂಡಿಯಾ ಯೋಜನೆ ಆರಂಭಗೊಂಡ ಮೇಲೆ ನಷ್ಟದಿಂದ ಮೇಲೆದ್ದು ಆರೋಗ್ಯಕರ ಸ್ಥಿತಿಯಲ್ಲಿ ಮುಂದುವರೆದಿದೆ ಎಂದು ಹೇಳಿದರು.
ನೂತನವಾಗಿ ಆರಂಭಗೊಳ್ಳುವ ಕೈಗಾರಿಕೆಗಳಿಗೆ 10 ಕೋಟಿ ರೂಗಳವರೆಗೆ ಅನುದಾನ ನೀಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ನಮ್ಮ ಬೆಂಗಳೂರಿಗೆ 10 ರೂ ನೆರವು ನೀಡಿದರೆ, ನಾವು ಕೇಂದ್ರ ಸರ್ಕಾರಕ್ಕೆ 100 ರೂ ಕೊಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥಸಿಂಗ್ ಅವರಿಗೆ ತೇಜಸ್ವಿ ಸೂರ್ಯ ಮನವಿ ಮಾಡಿದರು.
ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆ ಮುಖ್ಯಸ್ಥರು, ಸಂಸದ ತೇಜಸ್ವಿ ಸೂರ್ಯ, ಐಎಂಎಸ್ ಛೇರ್ಮನ್ ಹೆಚ್ ವಿ ಎಸ್ ಕೃಷ್ಣ,ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ,ಐಎಂಎಸ್-2023 ಸಲಹಾ ಸಮಿತಿ ಅಧ್ಯಕ್ಷ ಬಾಬಾ ಕಲ್ಯಾಣಿ,L&T ಡಿಫೆನ್ಸ್ ಮುಖ್ಯಸ್ಥ ಅರುಣ್ ಟಿ.ರಾಮಚಂದಾನಿ,
ಅಖಿಲ ಭಾರತ ಲಘು ಉದ್ಯೋಗ ಭಾರತಿ ಅಧ್ಯಕ್ಷ ಘನಶ್ಯಾಂ ಓಜ, ಉಪಾಧ್ಯಕ್ಷ ಶ್ರೀಕಂಠದತ್ತ, ಕಾರ್ಯದರ್ಶಿ ನಾರಾಯಣ ಪ್ರಸನ್ನ, ರಾಜ್ಯ ಉಪಾಧ್ಯಕ್ಷ ಅಶ್ವಥ್ ನಾರಾಯಣ,ಜಂಟಿ ಕಾರ್ಯದರ್ಶಿ ರವಿಕುಮಾರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಸಂಜಯ್ ಭಟ್,ನಾಗರಾಜ್ ಬಿ ಎಸ್ ಉಪಸ್ಥಿತರಿದ್ದರು.
IMS-2023 ಪ್ರದರ್ಶನದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಇಂಜಿನಿಯರಿಂಗ್ ಸಂಬಂಧಿತ 800 ಕ್ಕೂ ಮಳಿಗೆಗಳು ಪ್ರದರ್ಶನದಲ್ಲಿವೆ. 4500 ಕ್ಕೂ ಹೆಚ್ಚು ಪ್ರತಿನಿಧಿಗಳು,30,000 ಕ್ಕೂ ಅಧಿಕ ವ್ಯವಹಾರಿಕ ಪ್ರತಿನಿಧಿಗಳು ಭಾಗವಹಿಸಿದ್ದಾರೆ.30 ಕ್ಕೂ ಹೆಚ್ಚು ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳು ಆಯೋಜನೆಗೊಂಡಿವೆ.150 ಕ್ಕೂ ಹೆಚ್ಚು ಸಂಬಂಧಿತ ತಜ್ಞರು ವಿಷಯ ಮಂಡಿಸಲಿದ್ದಾರೆ.
Key words: Bangalore – technology -capital – country-Union Minister-Rajnath Singh