ಬೆಂಗಳೂರು, ಜನವರಿ 27, 2022 (www.justkannada.in): ಬೆಂಗಳೂರು ವಿಶ್ವವಿದ್ಯಾಲಯ ವಿವಾದಗಳಿಗೆ ಹೊಸತೇನಲ್ಲ. ಆದರೆ ಈಗ ಬಿ.ಕಾಂ. ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ದೊಡ್ಡ ತಪ್ಪನ್ನು ಮಾಡುವ ಮೂಲಕ ಮತ್ತೊಂದು ತೊಂದರೆಗೆ ಸಿಲುಕಿದೆ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ನಿಗಧಿತ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ನೀಡುವ ಮೂಲಕ ಅತ್ಯಂತ ಕಳಪೆ ಗುಣಮಟ್ಟದ ಮೌಲ್ಯಮಾನ ಮಾಡಿ ಪೇಚಿಗೆ ಸಿಲುಕಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ. ಮೂರನೇ ಸೆಮೆಸ್ಟರ್ ವಿದ್ಯಾರ್ಥಿಗಳು ಇತ್ತೀಚೆಗೆ ಘೋಷಿಸಲಾದ ಫಲಿತಾಂಶವನ್ನು ನೋಡಿ ದಿಗ್ಬ್ರಮೆಗೊಂಡರು. ಮೂಲಗಳ ಪ್ರಕಾರ ‘ಟೂರಿಂಸ್ ಏಜೆನ್ಸಿ’ ವಿಷಯದ ಪರೀಕ್ಷೆಯನ್ನು ೭೦ ಅಂಕಗಳಿಗೆ ನಡೆಸಲಾಗಿತ್ತು. ಆದರೆ ಕೆಲವು ವಿದ್ಯಾರ್ಥಿಗಳು ೭೦ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದು ಹೇಗೆ ಸಾಧ್ಯ? ಅಂದರೆ ಮೌಲ್ಯಮಾಪನದ ಗುಣಮಟ್ಟ ಎಂಥದ್ದು ಎಂದು ಎಲ್ಲರಿಗೂ ಇಲ್ಲಿ ಅರ್ಥವಾಗುತ್ತದೆ.
ಈ ವಿಷಯದಲ್ಲಿ ನಿಗಧಿತ ಅಂಕಗಳಿಗಿಂತ ಹೆಚ್ಚಿನ ಅಂಕ ಪಡೆದಿರುವಂತಹ ಓರ್ವ ವಿದ್ಯಾರ್ಥಿ ತಿಳಿಸಿರುವಂತೆ, “ನನಗೆ ೭೪ ಅಂಕಗಳು ಬಂದಿವೆ. ಇದನ್ನು ನೋಡಿ ನನಗೆ ದಿಗ್ಬ್ರಮೆಯಾಯಿತು. ಬೇರೆ ಕಾಲೇಜುಗಳಲ್ಲಿ ಓದುತ್ತಿರುವ ನನ್ನ ಕೆಲವು ಗೆಳಯರಿಗೂ ಸಹ ೭೧, ೭೩, ೮೯ ಹಾಗೂ ಅದಕ್ಕಿಂತಲೂ ಹೆಚ್ಚಿನ ಅಂಕಗಳು ಬಂದಿವೆ,” ಎಂದರು.
ಅಧಿಕಾರಿಗಳ ಪ್ರಕಾರ ಸುಮಾರು ೫೦೦ ವಿದ್ಯಾರ್ಥಿಗಳು ಟೂರಿಸಂ ಏಜೆನ್ಸಿ ವಿಷಯ ಪರೀಕ್ಷೆಯನ್ನು ಬರೆದಿದ್ದರು. “ಈ ಪರೀಕ್ಷೆಯನ್ನು ೭೦ ಅಂಕಗಳಿಗೆ ಆಗಸ್ಟ್ ೨೦೨೧ರಂದು ನಡೆಸಲಾಗಿತ್ತು. ಫಲಿತಾಂಶಗಳು ಕೆಲವು ದಿನಗಳ ಹಿಂದೆ ಘೋಷಿಸಲಾಗಿತ್ತು.” ಆದರೆ ವಿಶ್ವವಿದ್ಯಾಲಯದ ಓರ್ವ ಅಧಿಕಾರಿ ಈ ದೋಷವನ್ನು ವಿದ್ಯಾರ್ಥಿಗಳ ಮೇಲೆ ಹಾಕಿ, ಅವರು ಪ್ರಶ್ನೆ ಪತ್ರಿಕೆಯಲ್ಲಿರುವ ಸೂಚನೆಗಳನ್ನು ಓದಬೇಕಾಗಿತ್ತು ಎಂದಿದ್ದಾರೆ. ಅಧಿಕಾರಿಗಳು ವಾದಿಸಿರುವಂತೆ ೨೦೦೪ ಹಾಗೂ ೨೦೧೩ರ ನಡುವಿನ ಅವಧಿಯಲ್ಲಿ ಕಲಿತಂತಹ ಒನ್-ಟೈಮ್ ಸ್ಕೀಂ ಅಭ್ಯರ್ಥಿಗಳು ಹಾಗೂ ಫ್ರೆರ್ಸ್ ಇಬ್ಬರಿಗೂ ಒಂದೇ ಬಾರಿ ಪರೀಕ್ಷೆ ನಡೆಸಲಾಯಿತಂತೆ. “ಫ್ರೆರ್ಸ್ ೭೦ ಅಂಕಗಳಿಗೆ ಈ ಪರೀಕ್ಷೆಯನ್ನು ಬರೆಯಬೇಕಾಗಿತ್ತು ಮತ್ತು ಹಳೆಯ ವಿದ್ಯಾರ್ಥಿಗಳು ೧೦೦ ಅಂಕಗಳಿಗೆ ಪರೀಕ್ಷೆಯನ್ನು ಬರೆಯಬೇಕಾಗಿತ್ತು,” ಎನ್ನುತ್ತಾರೆ.
ಪ್ರೊ. ಜೆ.ಟಿ. ದೇವರಾಜು, ಕುಲಸಚಿವ, ಮೌಲ್ಯಮಾಪನ, ಬೆಂಗಳೂರು ವಿಶ್ವವಿದ್ಯಾಲಯ ಇವರು ಈ ಕುರಿತು ಮಾತನಾಡಿ, “ಈ ಫಲಿತಾಂಶವನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುವುದು. ಇದು ಡಿಜಿಟಲ್ ಮೌಲ್ಯಮಾಪನ ಹಾಗೂ ಟ್ಯಾಬುಲೇಷನ್ ಆಗಿದುದ್ದರಿಂದ, ಸಂಬಂಧಪಟ್ಟ ವ್ಯಕ್ತಿ ಇದನ್ನು ಗಮನಿಸಿಲ್ಲ. ಒಮ್ಮೆ ಅಂಕಗಳನ್ನು ರೀಟ್ಯಾಬುಲೇಟ್ ಮಾಡಿದ ನಂತರ ಪುನಃ ಹೊಸ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Bangalore-university- result-exam