ಬೆಂಗಳೂರು,ಮಾರ್ಚ್,17,2022(www.justkannada.in): ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಡಾ.ಕೆ.ಆರ್. ವೇಣುಗೋಪಾಲ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ತೀರ್ಪನ್ನು ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.
ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಬೆಂಗಳೂರು ವಿಶ್ವವಿದ್ಯಾಲಯ, ರಾಜ್ಯಪಾಲರ ಕಚೇರಿ (ವಿಶ್ವ ವಿದ್ಯಾಲಯ ಕುಲಾಧಿಪತಿ), ಡಾ.ಕೆ. ಆರ್. ವೇಣುಗೋಪಾಲ್ ಮತ್ತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಪ್ರತ್ಯೇಕ ನಾಲ್ಕು ಮೇಲ್ಮನವಿ ಸಲ್ಲಿಕೆಯಾಗಿದ್ದವು.
ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್.ಸುಜಾತ ಮತ್ತು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ಧ ವಿಭಾಗೀಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಿ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಎತ್ತಿಹಿಡಿದಿದೆ.
ಡಾ.ಕೆ.ಆರ್.ವೇಣುಗೋಪಾಲ್ ಅವರನ್ನು ಕುಲಪತಿ ಹುದ್ದೆಗೆ ನಾಲ್ಕು ವರ್ಷ ಅವಧಿ ಅಥವಾ ಅವರಿಗೆ ೬೭ ವರ್ಷ ತುಂಬುವವರೆಗೆ, ಈ ಎರಡರಲ್ಲಿ ಯಾವುದು ಮೊದಲು ಘಟಿಸುವುದಕ್ಕೆ ಅಲ್ಲಿಯವರೆಗೆ ನೇಮಕ ಮಾಡಿ ೨೦೧೮ರ ಜೂ.೧೨ರ ಆದೇಶಿಸಲಾಗಿತ್ತು. ಏಕ ಸದಸ್ಯ ನ್ಯಾಯಪೀಠವು ೨೦೧೯ರ ಸೆ.೨೪ರಂದು ವೇಣುಗೋಪಾಲ್ ನೇಮಕಾತಿಯನ್ನು ರದ್ದುಪಡಿಸಿದ್ದರೂ, ಆ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿತ್ತು. ಇದರಿಂದ ಕುಲಪತಿ ಹುದ್ದೆಯಲ್ಲಿ ವೇಣುಗೋಪಾಲ್ ಅವರು ಮುಂದುವರಿದಿದ್ದರು. ೨೦೨೨ರ ಜೂ.೧೨ಕ್ಕೆ ಅವರ ಅಧಿಕಾರದ ಅವಧಿ ಮುಗಿಯಲಿದೆ. ಅದಕ್ಕೆ ಮೂರು ತಿಂಗಳು ಬಾಕಿಯಿರುವಾಗ ವಿಭಾಗೀ ಪೀಠದಿಂದಲೂ ನೇಮಕಾತಿ ಆದೇಶ ಅಸಿಂಧುಗೊಂಡಿದೆ. ಹೀಗಾಗಿ, ಅವರು ಕುಲಪತಿ ಹುದ್ದೆ ತೊರೆಯಬೇಕಿದ್ದು, ಸರ್ಕಾರ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಡಾ.ಕೆ.ಆರ್. ವೇಣುಗೋಪಾಲ್ ಅವರನ್ನು ನೇಮಿಸಿ ರಾಜ್ಯಪಾಲರು ೨೦೧೮ರ ಜೂ.೧೨ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ನಿವೃತ್ತ ಪ್ರೊ.ಸಂಗಮೇಶ್ ಪಾಟೀಲ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಅನುಮೋದನೆ ಇಲ್ಲದೆಯೇ ಡಾ.ವೇಣುಗೋಪಾಲ್ ಅವರನ್ನು ಕುಲಪತಿ ಹುದ್ದೆಗೆ ನೇಮಿಸಿರುವುದು ಕಾನೂನು ಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು. ಈ ವಾದ ಪುರಸ್ಕರಿಸಿದ್ದ ಏಕ ಸದಸ್ಯ ನ್ಯಾಯಪೀಠ, ಡಾ.ವೇಣುಗೋಪಾಲ್ ಅವರನ್ನು ಕುಲಪತಿಗೆ ನೇಮಿಸಿದ್ದ ಆದೇಶ ರದ್ದುಪಡಿಸಿ ೨೦೧೯ರ ಸೆ.೨೪ರಂದು ತೀರ್ಪು ನೀಡಿತ್ತು.
ಇದರಿಂದ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಮೇಲ್ಮನವಿಗಳನ್ನು ವಜಾಗೊಳಿಸಿರುವ ವಿಭಾಗೀಯ ನ್ಯಾಯಪೀಠ, ೨೦೧೮ರ ಜೂ.೧೨ರಂದು ನೇಮಕಾತಿ ಆದೇಶ ಹೊರಡಿಸಲಾಗಿದೆ. ಅದಕ್ಕೆ ಸರ್ಕಾರದ ಅನುಮೋದನೆ ಇರಲಿಲ್ಲ. ತದ ನಂತರ ೨೦೧೮ರ ಜೂ.೨೮ರಂದು ಸರ್ಕಾರ ಅನುಮೋದನೆ ನೀಡಿದೆ. ಇದು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ-೨೦೦೦ರ ಸೆಕ್ಷನ್ ೧೪(೪)ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಸರ್ಕಾರದ ಅನುಮೋದನೆ ಪಡೆದ ನಂತರವೇ ನೇಮಕಾತಿ ಆದೇಶ ಹೊರಡಿಸಬೇಕಿದೆ. ಅದು ಬಿಟ್ಟು ನೇಮಕಾತಿ ಆದೇಶ ಹೊರಡಿಸಿದ ನಂತರ ಸರ್ಕಾರದ ಅನುಮೋದನೆ ನೀಡಿದರೆ, ಅದು ನೇಮಕಾತಿ ಆದೇಶದಲ್ಲಾಗಿರುವ ಲೋಪಗಳನ್ನು ಸರಿಪಡಿಸುವುದಿಲ್ಲ. ಆದ್ದರಿಂದ ವೇಣುಗೋಪಾಲ್ ಅವರನ್ನು ಕುಲಪತಿಗೆ ನೇಮಿಸಿದ ಆದೇಶ ರದ್ದುಪಡಿಸಿ ಏಕಸದಸ್ಯ ನ್ಯಾಯಪೀಠ ನೀಡಿರುವ ತೀರ್ಪು ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣ ಇಲ್ಲ ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಮೂಲ
ವಿಜಯ ಕರ್ನಾಟಕ.
Key words: Bangalore university-VC-High court