ಬೆಂಗಳೂರು:ಜುಲೈ-18:(www.justkannada.in) ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿರುವ 77 ಪದವಿ ಕಾಲೇಜುಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ತಲಾ 10 ಸಾವಿರ ರೂ. ದಂಡ ವಿಧಿಸಿದ ಘಟನೆ ನಡೆದಿದೆ.
ಸಾಂಸ್ಕೃತಿಕ ಮತ್ತು ಕ್ರೀಡಾ ಶುಲ್ಕವನ್ನು ಪಾವತಿ ಮಾಡದ ಹಿನ್ನಲೆಯಲ್ಲಿ ಬೆಂಗಳೂರು ವಿವಿ ಈ ಕ್ರಮ ಕೈಗೊಂಡಿದ್ದು, ಶುಲ್ಕ ಪಾವತಿಗೆ ಜು.18ರ ಗಡುವು ನೀಡಿದೆ. ಒಂದು ವೇಳೆ ಗಡಿವಿನೊಳಗೆ ಶುಲ್ಕ ಪಾವತಿ ಮಾಡದೇ ಇದ್ದರೆ, ಅಂತಹ ಕಾಲೇಜುಗಳ ಸೆಮಿಸ್ಟರ್ ಫಲಿತಾಂಶ ವನ್ನು ತಡೆ ಹಿಡಿಯುವುದಾಗಿ ಎಚ್ಚರಿಕೆ ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆಗೊಂಡ ನಂತರ, 2018-19ನೇ ಸಾಲಿನಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಉತ್ತರ
ವಿಶ್ವವಿದ್ಯಾಲಯಗಳು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಿದ್ದು, ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್‌ಗಳನ್ನು ಪೂರೈಸಿವೆ. ಆದರೆ, ಅವಿಭಜಿತ ಬೆಂಗಳೂರು
ವಿಶ್ವವಿದ್ಯಾಲಯ ಅಸ್ತಿತ್ವದಲ್ಲಿದ್ದಾಗ, ದಾಖಲಾಗಿರುವ ಹಾಗೂ ಹಾಲಿ ಬೆಂಗಳೂರು ಕೇಂದ್ರ ಮತ್ತು ಉತ್ತರ ವಿವಿಗಳ ಕಾಲೇಜುಗಳ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ತೀರ್ಮಾನಗಳು ಬೆಂ. ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿವೆ. ಹಾಗಾಗಿ, ಈ ಎರಡು ವಿವಿಗಳ ವ್ಯಾಪ್ತಿಯ ಎಲ್ಲಾ ಕಾಲೇಜುಗಳು ತೃತೀಯ ಸೆಮಿಸ್ಟರ್‌ನಿಂದ 6ನೇ ಸೆಮಿಸ್ಟರ್‌ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತಾತ್ಮಕ ತೀರ್ಮಾನಗಳಿಗೆ ಬದ್ಧವಾಗಿರಬೇಕು. ಈ ಹಿನ್ನೆಲೆಯಲ್ಲಿ ಕಾಲೇಜುಗಳು ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ಕ್ರೀಡೆ ಮತ್ತು ಸಾಂಸ್ಕೃತಿಕ ಶುಲ್ಕವನ್ನು ಸಂಬಂಧಪಟ್ಟ ವಿವಿಗಳಿಗೆ ಪಾವತಿ ಮಾಡಬೇಕಿದೆ.
ಬೆಂಗಳೂರು ಕೇಂದ್ರ ಮತ್ತು ಉತ್ತರ ವಿವಿಯ 77 ಪದವಿ ಕಾಲೇಜುಗಳಲ್ಲಿ 2018-19ನೇ ಸಾಲಿಗೆ ನಾನಾ ಕೋರ್ಸ್‌ಗಳಿಗೆ ಸುಮಾರು 5 ಸಾವಿರ
ವಿದ್ಯಾರ್ಥಿಗಳು ದಾಖಲಾಗಿದ್ದರು. ಇವರಿಂದ ತಲಾ 610 ರೂ.ಗಳಂತೆ ಸುಮಾರು 30 ಲಕ್ಷ ರೂ.ಗಳಷ್ಟು ಸಾಂಸ್ಕೃತಿಕ ಮತ್ತು ಕ್ರೀಡಾ ಶುಲ್ಕವನ್ನು ಕಾಲೇಜುಗಳು ವಸೂಲಿ ಮಾಡಿವೆ. ಆದರೆ, ವರ್ಷ ಕಳೆದರೂ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಈ ಶುಲ್ಕವನ್ನು ಪಾವತಿ ಮಾಡಿಲ್ಲ. ವಿಶ್ವವಿದ್ಯಾಲಯದ ಹಾಗಾಗಿ, ಶುಲ್ಕ ಪಾವತಿ ಮಾಡುವಂತೆ ಸಂಬಂಧಪಟ್ಟ ಕಾಲೇಜುಗಳಿಗೆ ಬೆಂಗಳೂರು ವಿವಿ 2018ರ ಅಕ್ಟೋಬರ್, ನವೆಂಬರ್ ಹಾಗೂ 2019ರ ಜನವರಿ ತಿಂಗಳಲ್ಲಿ ಮೇಲಿಂದ ಮೇಲೆ ಜ್ಞಾಪನಾ ಪತ್ರಗಳನ್ನು ಕಳುಹಿಸಿದ್ದರೂ, ಕಾಲೇಜುಗಳು ನಿರ್ಲಕ್ಷ್ಯ ವಹಿಸಿದ್ದವು.
ಈಗಾಗಲೇ ಹಲವು ಬಾರಿ ನೋಟಿಸ್ ನೀಡಿದರೂ ನಿರ್ಲಕ್ಷಿಸಿದ ಕಾರಣ ಪ್ರತಿ ಕಾಲೇಜಿಗೆ ತಲಾ 10 ಸಾವಿರ ರೂ. ದಂಡ ಹಾಕಲಾಗಿದೆ. ಜು. 18ರ ಒಳಗೆ ಶುಲ್ಕ ಪಾವತಿ ಮಾಡದಿದ್ದರೆ, ಆ ಕಾಲೇಜುಗಳ ಫಲಿತಾಂಶವನ್ನು ತಡೆಹಿಡಿಯಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ (ಆಡಳಿತ) ಪ್ರೊ. ಬಿ.ಕೆ.ರವಿ ತಿಳಿಸಿದ್ದಾರೆ.