ಬೆಂಗಳೂರು, ಜುಲೈ 21, 2020 (www.justkannada.in): ನಾಳೆಯಿಂದ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಫೇಸ್ ಬುಕ್, ಯೂಟ್ಯೂಬ್ ಲೈವ್ ನಲ್ಲಿ ಮಾತನಾಡಿದ ಅವರು, ಜನ ತಮ್ಮ ಎಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಅವರ ಆರ್ಥಿಕ ಪರಿಸ್ಥಿತಿ ಕೆಡುತ್ತದೆ. ಸರಕಾರಕ್ಕೂ ಸಂಪನ್ಮೂಲ ಕ್ರೋಡೀಕರಣ ಅಗತ್ಯವಿದೆ. ಹೀಗಾಗಿ ಲಾಕ್ ಡೌನ್ ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಕ್ರಮ ವಹಿಸಲಾಗಿದೆ. ಅಗತ್ಯಕ್ಕೆ ತಕ್ಕಷ್ಟು ಬೆಡ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಒಟ್ಟು ಸೋಂಕಿತರಲ್ಲಿ ಶೇ.80ರಷ್ಟು ಮಂದಿಗೆ ಕೋವಿಡ್ ಲಕ್ಷಣಗಳಿಲ್ಲ. ಹೀಗಾಗಿ ಅವರಿಗೆ ಕೋವಿಡ್ ಕೇರ್ ಅಥವಾ ಹೋಂ ಐಸೋಲೇಷನ್ ಮೂಲಕ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ. ಶೇ.5ರಷ್ಟು ಮಂದಿಗೆ ಮಾತ್ರ ವೆಂಟಿಲೇಟರ್ ಮತ್ತಿತರ ಚಿಕಿತ್ಸೆ ಅಗತ್ಯವಿದೆ. ಅದಕ್ಕೂ ಎಲ್ಲ ಅನುಕೂಲ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.