ಬೆಂಗಳೂರು, ಸೆಪ್ಟೆಂಬರ್ ೨೭, ೨೦೨೧ (www.justkannada.in news): ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಟ್ಟಗಾಯಗಳ ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾಗುವಂತಹ ಕಸಿ ಮಾಡಿರುವ ಚರ್ಮದ ಅಭಾವದಿಂದಾಗಿ ಸುಟ್ಟ ಗಾಯಗಳ ರೋಗಿಗಳು ಬಂದರೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯಲ್ಲಿ ತೀವ್ರ ಕೊರತೆ ಎದುರಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರ ಸ್ವಾಮ್ಯದ ಏಕೈಕ ಚರ್ಮದ ಬ್ಯಾಂಕ್ ಇದೆ. ಸರ್ಕಾರದ ಈ ಏಕೈಕ ಚರ್ಮದ ಬ್ಯಾಂಕ್‌ನಲ್ಲಿ ಪ್ರಸ್ತುತ ಉಳಿದಿರುವ ಸ್ಕಿನ್ ಗ್ರಾಫ್ಟ್ (ಕಸಿ ಮಾಡಿರುವ ಚರ್ಮ-SKIN GRAFT ) ಪ್ರಮಾಣ ಕೇವಲ ೪,೫೦೦ ಚದರ ಸೆಂ.ಮೀ.ನಷ್ಟಿದೆ. ಅಂದರೆ ಕೇವಲ ಇಬ್ಬರು ಸುಟ್ಟ ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟು ಮಾತ್ರ ಉಳಿದಿದೆ. ಈ ಚರ್ಮ ಮರುನಿರ್ಮಾಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉಚಿತವಾಗಿದೆ. ಇದೇ ಚಿಕಿತ್ಸೆ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಬೇಕಾದರೆ ತುಂಬಾ ದುಬಾರಿಯಾಗುತ್ತದೆ.
ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ-BMCRI ) ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಕೆ.ಟಿ. ಅವರು ತಿಳಿಸುವಂತೆ, ಕಳೆದ ಒಂದು ವರ್ಷದಿಂದ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಈ ಚರ್ಮದ ಬ್ಯಾಂಕ್‌ನಲ್ಲಿ ಯಾವುದೇ ರೀತಿಯ ಚಟುವಟಿಕೆಗಳೇ ನಡೆದಿಲ್ಲ.
“ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದರೂ ಸಹ ಚರ್ಮ ದಾನದ ಕುರಿತು ಜನರಲ್ಲಿ ಬಹಳ ಕಡಿಮೆ ಅರಿವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದರ ಚಿಕಿತ್ಸಾ ವೆಚ್ಚಗಳು ಅತ್ಯಂತ ದುಬಾರಿಯಾಗುತ್ತದೆ. ನಮ್ಮ ಆಸ್ಪತ್ರೆಗೆ ಬರುವಂತಹ ರೋಗಿಗಳು ಬಡ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಉಚಿತ. ಆದರೆ ನಮ್ಮಲ್ಲಿ ಸ್ಕಿನ್ ಗ್ರಾಫ್ಟ್ನ ಕೊರತೆ ಎದುರಾಗಿದೆ, ಬೇಡಿಕೆ ಹೆಚ್ಚಿದೆ. ಒಂದು ವೇಳೆ ಯಾವುದಾದರೂ ದೊಡ್ಡ ಸುಟ್ಟಗಾಯದ ಪ್ರಕರಣ ಬಂದರೆ ನಮಗೆ ಕನಿಷ್ಠ ೫,೦೦೦ ಚದರ ಸೆಂ.ಮೀ.ನಷ್ಟು ಸ್ಕಿನ್ ಗ್ರಾಫ್ಟ್ ಬೇಕಾಗುತ್ತದೆ,” ಎನ್ನುತ್ತಾರೆ ಡಾ. ರಮೇಶ್.
ಬಿಎಂಸಿಆರ್‌ಐನ ಚರ್ಮದ ಬ್ಯಾಂಕ್ ಪ್ರಭಾರ ಅಧಿಕಾರಿ ನಾಗರಾಜ್ ಬಿ.ಎನ್. ಅವರು ವಿವರಿಸಿದಂತೆ, “ಸಾಂಕ್ರಾಮಿಕದ ಸಮಯದಲ್ಲಿ ನಾವು ಈ ಬ್ಯಾಂಕ್ ಅನ್ನು ಮುಚ್ಚಿದ್ದೆವು. ಎರಡು ತಿಂಗಳ ಹಿಂದೆ ನಾಲ್ಕು ಚರ್ಮದ ದಾನಗಳು ದೊರೆಯಿತು. ಪ್ರತಿ ತಿಂಗಳು ನಮಗೆ ಏಳರಿಂದ ಎಂಟರಷ್ಟು ಸ್ಕಿನ್ ಗ್ರಾಫ್ಟ್ ಬೇಡಿಕೆಗಳು ಬರುತ್ತವೆ, ಆದರೆ ನಮ್ಮ ಬಳಿ ಅಷ್ಟು ಸಂಗ್ರಹವಿಲ್ಲ. ಜನರಲ್ಲಿ ಚರ್ಮದಾನ ಮಾಡುವುದರಿಂದ ದೇಹ ವಿರೂಪವಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಆದರೆ ಅದು ನಿಜವಲ್ಲ. ನಾವು ಕೇವಲ ತೊಡೆಗಳು ಹಾಗೂ ಕಾಲುಗಳ ಹೊರ ಪದರದ ಚರ್ಮವನ್ನು ಮಾತ್ರ ಪಡೆಯುತ್ತೇವೆ (ಗರಿಷ್ಠ ೧,೫೦೦ ಚದರ ಸೆಂ.ಮೀ.).”
ಇತ್ತೀಚೆಗೆ ಬೆಂಗಳೂರಿನ ಒಂದು ಗೋದಾಮಿನಲ್ಲಿ ಸ್ಫೋಟ ಪ್ರಕರಣ ಜರುಗಿ, ಇಬ್ಬರು ಮೃತಪಟ್ಟು, ಹಲವರಿಗೆ ಸುಟ್ಟಗಾಯಗಳಾದವು. ಡಾ. ರಮೇಶ್ ಅವರ ಪ್ರಕಾರ ಗಾಯಗೊಂಡವರಲ್ಲಿ ೩೦%ರಷ್ಟು ಸುಟ್ಟಗಾಯಗಳಾದವು, ಅದಕ್ಕೆ ಸ್ಕಿನ್ ಗ್ರಾಫ್ಟಿಂಗ್ (ಚರ್ಮದ ಕಸಿ) ಮಾಡುವ ಅಗತ್ಯವಿಲ್ಲ.
ಸುಟ್ಟ ಗಾಯವನ್ನು ಮರುನಿರ್ಮಾಣ ಮಾಡಲು Cadaver skin (ಶವದ ಚರ್ಮ) ತಾತ್ಕಾಲಿಕವಾಗಿ ಬಳಸಲಾಗುತ್ತದೆ. ಅದನ್ನು ಐದು ವರ್ಷಗಳ ಕಾಲ ಸಬ್-ಝೀರೊ ತಾಪಮಾನದಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಯಾವುದೇ ವ್ಯಕ್ತಿ ಮೃತಪಟ್ಟರೆ, ಮೃತಪಟ್ಟ ಆರು ಗಂಟೆಗಳ ಒಳಗೆ ಚರ್ಮವನ್ನು ತೆಗೆದುಕೊಳ್ಳಬೇಕು, ಅದನ್ನು ತೆಗೆದುಕೊಳ್ಳಲು ಕನಿಷ್ಠ ೩೦ ನಿಮಿಷಗಳು ಬೇಕಾಗುತ್ತದೆ.
ಜಿವಿಜಿ ಇನ್‌ವಿವೊ ಆಸ್ಪತ್ರೆಯ ಹಿರಿಯ ಪ್ಲಾಸ್ಟಿಕ್ ಸರ್ಜನ್ ಡಾ. ಗುಣಶೇಖರ್ ವುಪ್ಪಲಪಟ್ಟಿ ಅವರ ಪ್ರಕಾರ, ಚರ್ಮದ ಸರಬರಾಜು ಹೆಚ್ಚಾಗಿದ್ದರೆ, ಶೇ.೪೦ರಷ್ಟು ಸುಟ್ಟಗಾಯಗಳಾದ ವ್ಯಕ್ತಿಗೂ ಸಹ ಕೆಡಾವರ್ ಚರ್ಮವನ್ನು ಬಳಸಬಹುದು, ಅದರಿಂದ ನೋವು ಹಾಗೂ ಚೇತರಿಕೆ ಸುಲಭವಾಗುತ್ತದೆ.
“ಆದರೆ ಕೆಡಾವರ್ ಚರ್ಮವನ್ನು ಕೂಡಲೇ ಬಳಸಲಾಗುವುದಿಲ್ಲ. ದಾನ ಪಡೆದಂತಹ ಚರ್ಮ ಬಳಕೆಗೆ ಯೋಗ್ಯವಾಗಲು ಎರಡು ತಿಂಗಳು ಬೇಕಾಗುತ್ತದೆ, ಅದನ್ನು ಸಂಸ್ಕರಿಸಬೇಕಾಗುತ್ತದೆ,” ಎಂದು ವಿವರಿಸಿದರು.
ಡಾ. ವುಪ್ಪುಲಪಟ್ಟಿ ಅವರ ಪ್ರಕಾರ, “ಎಲ್ಲಾ ಸುಟ್ಟಗಾಯಗಳ ರೋಗಿಗಳಿಗೂ ಚರ್ಮದ ಕಸಿ ಮಾಡಬೇಕೋ ಅಥವಾ ಗಂಭೀರ ಸ್ವರೂಪದ ಸುಟ್ಟಗಾಯಗಳ ರೋಗಿಗಳಿಗೆ ಮಾತ್ರ ಮಾಡಬೇಕೋ ಎಂದು ಈ ಚರ್ಮದ ಬ್ಯಾಂಕ್‌ನಲ್ಲಿರುವ ಶೇಖರಣೆಯ ಪ್ರಮಾಣವನ್ನು ನೋಡಿ ನಿರ್ಧರಿಸುತ್ತೇವೆ. ಪ್ರಸ್ತುತ ಇರುವಂತಹ ಸಂಗ್ರಹದ ಪ್ರಕಾರ ಶೇ.೪೦ಕ್ಕಿಂತ ಹೆಚ್ಚಿನ ಪ್ರಮಾಣದ ಸುಟ್ಟಗಾಯಗಳಿಗೆ ಒಳಗಾಗುವಂತಹ ರೋಗಿಗಳಿಗೆ, ದೇಹದ ನೀರಿನ ಪ್ರಮಾಣ ನಷ್ಟ, ಎಲೆಕ್ಟೊçÃಲೈಟ್ ನಷ್ಟ, ಉಷ್ಣಾಂಶ ನಷ್ಟ, ಪ್ರೋಟೀನ್ ನಷ್ಟ ಹಾಗೂ ಸೋಂಕನ್ನು ತಡೆಗಟ್ಟಲು ಮತ್ತು ಅವರು ಬದುಕುಳಿಯುವ ಅವಕಶವನ್ನು ಸುಧಾರಿಸುವ ಸಲುವಾಗಿ ಮಾತ್ರ ಉಪಯೋಗಿಸಬಹುದಾಗಿದೆಯಂತೆ.”
ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್
key words : Bangalore- Victoria-hospital-skin-bank-in-bengaluru-plagued-by-low-reserve-lack-of-awareness