ಬೆಂಗಳೂರು: ಜೂ-28:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ, ರಸ್ತೆಯ ಇಕ್ಕೆಲಗಳಲ್ಲೂ ಬೀದಿನಾಯಿಗಳದ್ದೇ ಕಾರುಬಾರು. ಬೀದಿನಾಯಿಗಳು ಎಲ್ಲಿ ದಾಳಿ ಮಾಡುತ್ತವೋ ಎಂಬ ಭಯದಲ್ಲೇ ರಸ್ತೆಗಳಲ್ಲಿ ಸಾರ್ವಜನಿಕರು, ಮಕ್ಕಳಿಂದ ಮುದುಕರವರೆಗೂ ಜೀವ ಕೈಯ್ಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ಹಲವು ಮಕ್ಕಳನ್ನು ಬಲಿತೆಗೆದುಕೊಂದಿರುವ ಬೀದಿನಾಯಿಗಳ ದಂಡು, ಇನ್ನಷ್ಟು ಬಲಿಗಾಗಿ ಬಾಯ್ತೆರೆದು ದಾಳಿಗೆ ಸಜ್ಜಾಗುತ್ತಿವೆ. ಇಷ್ಟಾಗ್ಯೂ ಬಿಬಿಎಂಪಿಯಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಈಬಗ್ಗೆ ಗಮನಹರಿಸದಿರುವುದು ವಿಪರ್ಯಾಸ. ಈ ನಡುವೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರಿಗೂ ಬಿದಿನಾಯಿಗಳ ಗುಂಪು ದಾಳಿಗೆ ಮುಂದಾದ ಘಟನೆ ನಡೆದಿದೆ.
ಬೆಂಗಳೂರಿನ ಆಸ್ಟಿನ್ಟೌನ್ ಬಾಲಕರ ಶಾಲೆಗೆ ಭೇಟಿ ನೀಡಿದ್ದ ಮೇಯರ್ ಗಂಗಾಂಬಿಕೆ ಅವರಿಗೆ ಗುಂಪು ಗೂಡಿದ್ದ ಬೀದಿ ನಾಯಿಗಳು ಸ್ವಾಗತಿಸಿವೆ. ಅಷ್ಟೇ ಅಲ್ಲ, 15-20 ನಾಯಿಗಳಿದ್ದ ಗುಂಪಿನಲ್ಲಿದ್ದ ಒಂದು ನಾಯಿ ಮೇಯರ್ ಮೇಲೆಯೇ ದಾಳಿ ನಡೆಸಲು ಮುಂದಾಯಿತು. ಒಂದು ಕ್ಷಣ ಗಾಬರಿಗೊಂಡ ಮೇಯರ್, ಶಾಲೆಯ ಸುತ್ತ ಸ್ವಚ್ಚತೆ ಕಾಪಾಡುವಂತೆ ಸೂಚಿಸಿದರು. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ನಾಯಿಗಳನ್ನು ಓಡಿಸಿದ್ದಾರೆ.
ನಾಯಿಗಳನ್ನು ಹಿಡಿದು, ಚಿಕಿತ್ಸಾ ಕೇಂದ್ರಗಳಿಗೆ ಸಾಗಿಸಲಾಯಿತು. ಇದೇ ಸಂದರ್ಭದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದ ಅವರು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.