ಬೆಂಗಳೂರು:ಜೂ-10:(www.justkannada.in) ಬೈಕ್ ವ್ಹೀಲಿಂಗ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಬೆಂಗಳೂರು ಪೊಲೀಸರು ವ್ಹೀಲಿಂಗ್ ನಲ್ಲಿ ತೊಡಗಿದ್ದ 13 ಯುವಕರನ್ನು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ರೇಸಿಂಗ್ ನಡೆಸುತ್ತಿದ್ದ 20 ಯುವಕರಿಗೆ ದಂಡ ವಿಧಿಸಿದ್ದಾರೆ.
ವಿಕೆಂಡ್ ಹಿನ್ನಲೆಯಲ್ಲಿ ಶನಿವಾರ ಹಾಗೂ ಭಾನುವಾರ ದೇವನಹಳ್ಳಿ, ಯಲಹಂಕ, ಚಿಕ್ಕಜಾಲ, ಆರ್.ಟಿ ನಗರ ಪ್ರದೇಶಗಳಲ್ಲಿ ವ್ಹೀಲಿಂಗ್ ನಲ್ಲಿ ತೊಡಗಿದ್ದ ಒಟ್ಟು 13 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲಿಸರು, ಅವರ ಬಳಿಯಿದ್ದ ದ್ವಿಚಕ್ರವಾಹನ ವಶಕ್ಕೆ ಪಡೆದಿದ್ದಾರೆ.
ದೇವನಹಳ್ಳಿ ಬಳಿ ಸ್ನೇಹಿತೆಯನ್ನು ಹಿಂಬದಿ ಕೂರಿಸಿಕೊಂಡು ವ್ಹೀಲಿಂಗ್ ಮಾಡಿದ ಸ್ಕೂಟರ್ ಪತ್ತೆಯಾಗಿದ್ದು, ಆಂಧ್ರದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಲಗೈದೆ.
ಇನ್ನು ಕೊಂಡರಾಜನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಳ್ಳಂ ಬೆಳಗ್ಗೆ ಬೆಂಗಳೂರಿನಿಂದ ಕೋಲಾರ ಮಾರ್ಗದಲ್ಲಿ ರೇಸಿಂಗ್ನಲ್ಲಿ ತೊಡಗಿದ್ದ ಬೆಂಗಳೂರಿನ 20 ಯುವಕರಿಗೆ ಸಂಚಾರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಮುಳಬಾಗಿಲು ಕಡೆಯಿಂದ ಕೋಲಾರ ಮಾರ್ಗವಾಗಿ ಐದಾರು ಬೈಕ್ಗಳಲ್ಲಿ ಬಂದಿದ್ದ ಯುವಕರು ಕೋಚಿಮುಲ್ ಡೇರಿಯಿಂದ ಕಾಫಿ ಡೇವರೆಗೆ ವ್ಹೀಲಿಂಗ್ ಮಾಡಿ ಸಾರ್ವಜನಿರಿಗೆ ಕಿರಿಕಿರಿಯುಂಟು ಮಾಡಿದ್ದರು. ಈ ಹಿನ್ನಲೆಯಲ್ಲಿ ಹಲವರು ಪ್ರಕರಣ ದಾಖಲಿಸಿದ್ದರು.
ವ್ಹಿಲೀಂಗ್, ಬೈಕ್ ರೇಸ್ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಒಂದೂವರೆ ತಿಂಗಳಲ್ಲಿ 35ಕ್ಕೂ ಹೆಚ್ಚು ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.