ಬೆಂಗಳೂರು :ಮೇ-3: ಮಾದಕವಸ್ತು ಉತ್ಪಾದನೆ ಮತ್ತು ಸರಬರಾಜು ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿರುವ ಮಾದಕವಸ್ತು ನಿಗ್ರಹ ದಳ (ಎನ್ಸಿಬಿ)ದ ಅಧಿಕಾರಿಗಳು 26 ಕೆ.ಜಿ 750 ಗ್ರಾಂ ಕೆಟಮಿನ್ ಜಪ್ತಿ ಮಾಡಿದ್ದಾರೆ. ಅಲ್ಲದೇ ಪ್ರಕರಣದ ಪ್ರಮುಖ ವ್ಯಕ್ತಿಗಳಾದ ಚೆನ್ನೈ ಕಣ್ಣನ್ ಹಾಗೂ ಬೆಂಗಳೂರಿನ ಶಿವರಾಜ್ ಎಂಬುವರನ್ನು ಬಂಧಿಸಿದ್ದಾರೆ.
ಬೆಂಗಳೂರಿನಿಂದ ಆಗ್ನೇಯ ಏಷಿಯಾ ದೇಶಗಳು ಮತ್ತು ಆಸ್ಪ್ರೇಲಿಯಾ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿಯೂ ಮಾರಾಟ ಮಾಡಲಾಗುತ್ತಿದ್ದ ಮಾದಕವಸ್ತು ಕೆಟಮಿನ್ ಅನ್ನು ಕೆಂಗೇರಿಯ ಮನೆಯೊಂದರಲ್ಲಿ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ.ಬಂಧಿತರಿಂದ ಕೆಟಮಿನ್ ಉತ್ಪಾದನೆಗಾಗಿ ಬಳಸುತ್ತಿದ್ದ ಯಂತ್ರ ಸಹಿತ ಲ್ಯಾಬ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಡ್ರಗ್ಸ್ ಸರಬರಾಜು ಆಗುತ್ತಿರುವ ಮಾಹಿತಿ ಆಧರಿಸಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಅಧಿಕಾರಿಗಳ ತಂಡ ಏ.30ರಂದು ಮೆಜೆಸ್ಟಿಕ್ಗೆ ಬಂದಿಳಿದಿತ್ತು. ರಾತ್ರಿ 10.30ರ ಸುಮಾರಿಗೆ ಮೂವಿಲ್ಯಾಂಡ್ ಚಿತ್ರಮಂದಿರದ ಬಳಿ ಗೋಣಿ ಚೀಲದಲ್ಲಿ ಕೆಟಮಿನ್ ಇಟ್ಟು ಅದನ್ನು ಟ್ರಾಲಿ ಬ್ಯಾಗ್ನಲ್ಲಿ ಇರಿಸಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಡ್ರಗ್ಸ್ ಜಪ್ತಿಗೆ ತೆರಳಿದಾಗ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಆದರೆ, ಕೂಡಲೇ ಸುತ್ತುವರಿದು ಡ್ರಗ್ಸ್ ಸ್ವೀಕರಿಸಲು ಬಂದಿದ್ದ ಚೆನ್ನೈನ ಕಣ್ಣನ್ ಎಂಬಾತನನ್ನು ಬಂಧಿಸಲಾಯಿತು. ಅದನ್ನು ತಂದಿದ್ದ ಮತ್ತೊಬ್ಬ ಆರೋಪಿ, ತನ್ನ ಕೊರೋಲಾ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ. ಈ ವೇಳೆ ಕಾರನ್ನು ತಡೆಯಲು ಯತ್ನಿಸಿದ ಅಧಿಕಾರಿಗಳ ಮೇಲೆಯೇ ಕಾರು ಹತ್ತಿಸಲು ಮುಂದಾಗಿ ಪರಾರಿಯಾಗಿದ್ದ. ಕಾರಿನ ನೋಂದಣಿ ಸಂಖ್ಯೆ ಇದ್ದ ಕಾರಣ ಮರುದಿನ ಬೆಳಗ್ಗೆ ಆತನನ್ನು ಯಲಹಂಕದಲ್ಲಿ ಪತ್ತೆ ಹಚ್ಚಲಾಯಿತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೆಂಗೇರಿ ಮತ್ತು ವಿದ್ಯಾನಗರದಲ್ಲಿ ಮನೆ ಹೊಂದಿರುವುದಾಗಿ ತಿಳಿಸಿದ ಆರೋಪಿ, ಕೆಂಗೇರಿಯಲ್ಲಿ ಕೆಟಮಿನ್ ಉತ್ಪಾದನೆ ಮಾಡುತ್ತಿರುವುದಾಗಿ ಹೇಳಿದ.
ಕೆಂಗೇರಿಯಲ್ಲಿರುವ ಮನೆಯಲ್ಲಿ ಶೋಧ ನಡೆಸಿದಾಗ ನೆಲಮಹಡಿಯಲ್ಲಿ ಗೌಪ್ಯವಾಗಿ ಡ್ರಗ್ಸ್ ಉತ್ಪಾದನೆಗಾಗಿ ಯಂತ್ರಗಳ ಸಹಿತ ಲ್ಯಾಬ್ನ್ನು ಹೊಂದಿರುವುದು ಕಂಡು ಬಂದಿದೆ. ಮನೆಯಲ್ಲಿ ಒಟ್ಟು 25 ಕೆ.ಜಿ 450 ಗ್ರಾಂ ಕೆಟಮಿನ್ ಜಪ್ತಿ ಮಾಡಲಾಗಿದೆ ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದರು.
ವಿಚಾರಣೆ ವೇಳೆ ಇದೇ ರೀತಿಯ ಲ್ಯಾಬ್ವೊಂದು ಹೈದರಾಬಾದ್ನಲ್ಲೂ ಇರುವುದನ್ನು ಆರೋಪಿ ಶಿವರಾಜ್ ತಿಳಿಸಿದ್ದಾನೆ. ಹೀಗಾಗಿ, ತೆಲಂಗಾಣದ ಅಧಿಕಾರಿಗಳ ತಂಡ ಅಲ್ಲಿಗೂ ತೆರಳಿ ಲ್ಯಾಬ್ ಪತ್ತೆ ಮಾಡಿವೆ. ಈ ಕುರಿತು ಹೈದರಾಬಾದ್ನಲ್ಲಿ ತನಿಖೆ ನಡೆಯುತ್ತಿದೆ.