ಬೆಂಗಳೂರು:ಜುಲೈ-6:(www.justkannada.in) ಎಟಿಎಂ ಮೂಲಕ ಬ್ಯಾಂಕ್ ಡೇಟಾಗಳನ್ನು ಕಳುವುಮಾಡಲು ಯತ್ನಿಸಿದ್ದ ಅಂತರಾಷ್ಟ್ರೀಯ ಕಳ್ಳರನ್ನು ಬೆಂಗಳೂರಿನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಅಮೆರಿಕದ ಚಿಲಿ ಮೂಲದವರಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಬ್ಯಾಂಕ್ ಡೇಟಾ ಕದಿಯಲು ಎಟಿಎಂ ಗೆ ಸ್ಕಿಮ್ಮರ್ ಬಳಸಿದ್ದರು ಎಂದು ತಿಳಿದುಬಂದಿದೆ.
ಕೆನರಾ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಎಪಿಎಸ್ ಸಂಸ್ಥೆಯ ಉಸ್ತುವಾರಿ ಅಧಿಕಾರಿ ಹುಸೇನ್ ಮತ್ತು ತಂಡ ಜು.2ರ ಸಂಜೆ 4 ಗಂಟೆಯಲ್ಲಿ ಜಯನಗರದ 9ನೇ ಬ್ಲಾಕ್ನ 37ನೇ ಅಡ್ಡರಸ್ತೆಯಲ್ಲಿರುವ ಎಟಿಎಂ ಮಷಿನ್ಗೆ ಹಣ ತುಂಬಿದ್ದಾರೆ. ಈ ವೇಳೆ ಹುಸೇನ್, ಎಟಿಎಂ ಯಂತ್ರದಲ್ಲಿ ಕಾರ್ಡ್ ಇಟ್ಟು ಪರಿಶೀಲಿಸಿದ್ದಾರೆ. ಈ ವೇಳೆ ಕಾರ್ಡ್ ರೀಡರ್ ಜಾಗದಲ್ಲಿ ಯಾವುದೋ ಉಪಕರಣ ಅಳವಡಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೂಡಲೇ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಬ್ಯಾಂಕ್ನ ಐಟಿ ಅಧಿಕಾರಿಗಳು ಪರಿಶೀಲಿಸಿದಾಗ ಸ್ಕಿಮ್ಮರ್ ಬಳಸಿರುವುದು ಪತ್ತೆಯಾಗಿದೆ.
ಗ್ರಾಹಕರು ಎಟಿಎಂಗೆ ಕಾರ್ಡ್ ಹಾಕಿ ಹಣ ಪಡೆಯುವಾಗ ಅಥವಾ ವಹಿವಾಟು ಪರಿಶೀಲಿಸುವ ಸಂದರ್ಭದಲ್ಲಿ ಪಿನ್ ನಂಬರ್ ನಮೂದಿಸಿದಾಗ ಕಾರ್ಡ್ನಿಂದ ಬ್ಯಾಂಕ್ ಡೇಟಾವನ್ನು ಸ್ಕಿಮ್ಮರ್ ಸಂಗ್ರಹಿಸುತ್ತದೆ. ಇದರ ಮೂಲಕ ವಂಚಕರು ನಕಲಿ ಕಾರ್ಡ್ಗಳನ್ನು ತಯಾರಿಸಿ ಗ್ರಾಹಕರ ಖಾತೆಯಿಂದ ಹಣ ದೋಚುತ್ತಿದ್ದರು.