ಬೆಂಗಳೂರು:ಆ-18:(www.justkannada.in) ಈ ವರ್ಷದ ಗಣೇಶ ಹಬ್ಬದಲ್ಲಿ ಮೂರ್ತಿ ವಿಸರ್ಜನೆಗೆ ಸ್ಮಾರ್ಟ್ ಆ್ಯಪ್ ಸಿದ್ಧಗೊಂಡಿದ್ದು, ಜಿಪಿಎಸ್ ಆಧಾರಿತ ಸಂಚಾರಿ ಟ್ಯಾಂಕ್ಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೊಡುಗೆಯಾಗಿ ನೀಡಲಿದೆ.
ಸಂಘ -ಸಂಸ್ಥೆಗಳ ಸಹಾಯದೊಂದಿಗೆ ರೂಪಿಸಿರುವ ಈ ಗಣೇಶ ಮೂರ್ತಿ ವಿಸರ್ಜನೆಗೆ ಸ್ಮಾರ್ಟ್ ಆ್ಯಪ್ ಯೋಜನೆಯಲ್ಲಿ 5 ಸಂಚಾರಿ ಟ್ಯಾಂಕ್ಗಳ ಸೇವೆ ನೀಡಲಾಗುತ್ತದೆ. ಈ ಟ್ಯಾಂಕ್ಗಳು ಮನೆಯ ಬಳಿ ಬರುವ ಮೊದಲೇ ಮೊಬೈಲ್ ಆ್ಯಪ್ನಿಂದ ಸಂದೇಶ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ.
ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಪ್ರತಿ ವರ್ಷ ಬಿಬಿಎಂಪಿ ಸಂಚಾರಿ ಟ್ಯಾಂಕ್ಗಳ ವ್ಯವಸ್ಥೆ ಮಾಡುತ್ತದೆ. ಈ ಬಾರಿ 100 ಟ್ಯಾಂಕ್ಗಳ ಸೇವೆ ದೊರೆಯಲಿದೆ. ಇದರ ಜತೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರತ್ಯೇಕವಾಗಿ ಐದು ಟ್ಯಾಂಕ್ಗಳ ವಿಶೇಷ ಸೇವೆ ನೀಡಲಿದೆ.
ಮೂರ್ತಿ ಪ್ರತಿಷ್ಠಾಪನೆಯಾದ ಗಣೇಶ ಚೌತಿ ಹಬ್ಬದಿಂದ ಆರಂಭವಾಗಿ 6 ದಿನಗಳವರೆಗೆ ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ಟ್ಯಾಂಕ್ ಸಂಚಾರ ನಡೆಸಲಿದೆ. ಪ್ರತಿ ಟ್ಯಾಂಕ್ನಲ್ಲಿ ಅರ್ಚಕರಿದ್ದು, ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ವಿಸರ್ಜನೆ ಮಾಡುತ್ತಾರೆ. ನಗರವನ್ನು 30 ಭಾಗಗಳಾಗಿ ಗುರುತಿಸಿ ಬೇಡಿಕೆ ಹೆಚ್ಚಿರುವಲ್ಲಿ ಟ್ಯಾಂಕ್ಗಳ ಸೇವೆ ನೀಡಲಾಗುತ್ತದೆ.