ಬೆಂಗಳೂರು:ಮೇ-6:(www.justkannada.in) ಬನ್ನೇರಘಟ್ಟ ಜೈವಿಕ ಉದ್ಯಾನವನಕ್ಕೆ ಮುಂದಿನ ಆರು ತಿಂಗಳಲ್ಲಿ ಎರಡು ಜಿರಾಫೆ, ಎರಡು ಬಿಳಿ ಸಿಂಹಗಳು ಮತ್ತು ವಿವಿಧ ಜಾತಿಯ ಪಕ್ಷಿಗಳು ಆಗಮಿಸಲಿವೆ. ಈ ಹಿನ್ನಲೆಯಲ್ಲಿ ಉದ್ಯಾನವನದಲ್ಲಿ ಹೊಸ ಅತಿಥಿಗಳಿಗಾಗಿ ಭಾರೀ ಸಿದ್ಧತೆಗಳು ನಡೆದಿವೆ.
ಈಗಾಗಲೇ ಉದ್ಯಾನವನದಲ್ಲಿ ಗೌರಿ ಹೆಸರಿನ ಜಿರಾಫೆ ಇದ್ದು, ಒಂಟಿಯಾಗಿ ಕಾಲ ಕಳೆಯುತ್ತಿದೆ. ಇದಕ್ಕೆ ಜತೆಯಾಗಿ ಮತ್ತೆರಡು ಜಿರಾಫೆಗಳನ್ನು ತರಲಾಗುತ್ತಿದೆ. ಮುಂದಿನ ಒಂದೂವರೆ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ಎರಡು ಬಿಳಿ ಸಿಂಹಗಳನ್ನು ತರಲು ಆಡಳಿತ ಮಂಡಳಿ ಸಭೆಯಲ್ಲಿ ಉದ್ಯಾನವನದ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ.
ವಿಶೇಷವಾಗಿ ಎಕ್ಲೆಕ್ಟಸ್ ಪ್ಯಾರೆಟ್ (ಗಿಳಿಯ ಒಂದು ಜಾತಿ), ಕೆಂಪು ಮತ್ತು ಹಸಿರು ಇಕ್ವಾನಸ್, ರೇನ್‌ಬೊ ಲೋರಿಕೇಟ್, ಬೂದು ಗಿಳಿಗಳು, ಲೇಡಿ ಅಮ್ಹೆರ್ಸ್ಟ್ ಫೆಸೆಂಟ್ ಸೇರಿದಂತೆ ವಿವಿಧ ಜಾತಿಯ ಜೋಡಿ ಪಕ್ಷಿಗಳನ್ನು ಕರೆತರಲಾಗುವುದು,’ ಎಂದು ಬನ್ನೇರಘಟ್ಟ ಜೈವಿಕ ಉದ್ಯಾನವನ(ಬಿಬಿಪಿ)ದ ಕಾರ್ಯಕಾರಿ ನಿರ್ದೇಶಕ ಸಂಜಯ್ ಬಿಜ್ಜೂರ್ ಮಾಹಿತಿ ನೀಡಿದ್ದಾರೆ.
ಇನ್ನು 11 ತಿಂಗಳ ಎರಡು ಬಿಳಿ ಸಿಂಹದ ಮರಿಗಳನ್ನು ಸಿಬ್ಬಂದಿಗಳು ಪೋಷಿಸಿದ್ದು, ಅವುಗಳನ್ನು ಉದ್ಯಾನವನಕ್ಕೆ ಶೀಘ್ರದಲ್ಲೇ ಬಿಡಲಾಗುವುದು. ಉದ್ಯಾನವನದಲ್ಲಿ ನೀರು ಹರಿಯದೇ ನಾರುವುದು ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕಾಗಿ 37 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಪುನಶ್ಚೇತನಕ್ಕೆ ಈಗಾಗಲೇ ಅನುಮೋದನೆ ದೊರಕಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಭನ್ನೇರು ಘಟ್ಟ ಉದ್ಯಾನವನದಲ್ಲಿ ಮಳೆ ನೀರು ಸಂಗ್ರಹಕ್ಕೆ ನೀರಿನ ಹೊಂಡಗಳು ಮತ್ತು ನೀರಿನ ತೊಟ್ಟಿಗಳ ಪುನಶ್ಚೇತನ ಮಾಡಲಾಗಿದೆ. ಹೊಸದಾಗಿ ಒಂದು ಬೋರ್‌ವೆಲ್ ಕೂಡ ಕೊರೆಯಲಾಗಿದೆ.