ಬೆಂಗಳೂರು, ಜುಲೈ 5, 2021 (www.justkannada.in): ಬನ್ನೇರುಘಟ್ಟ ಬಯಾಲಾಜಿಕಲ್ ಪಾರ್ಕ್ (ಬಿಬಿಪಿ), ಕೋವಿಡ್-ಸಾಂಕ್ರಾಮಿಕದಿಂದಾಗಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸಹ ಈಗ ದೇಶದ ಅತ್ಯುತ್ತಮ ಆನೆಗಳ ಸಂತಾನೋತ್ಪತ್ತಿ ಕೇಂದ್ರವಾಗಿ ಪರಿವರ್ತನೆಗೊಂಡಿದೆ.
ಬಿಬಿಪಿ ಸಿಬ್ಬಂದಿಗಳು ಸೃಷ್ಟಿಸಿರುವ ಆನೆ-ಸ್ನೇಹಿ ವಾತಾವರಣ ಹಾಗೂ ಅನುಸರಿಸುತ್ತಿರುವ ಆನೆಗಳ ಸರಿಯಾದ ಪೌಷ್ಠಿಕತೆ ನಿರ್ವಹಣೆಯ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ, 14 ಹೆಣ್ಣಾನೆಗಳು ಗರ್ಭ ಧರಿಸಿರುವುದಾಗಿ ಅಧಿಕಾರಿಗಳೂ ತಿಳಿಸಿದ್ದಾರೆ.
ಬಿಬಿಪಿಯ ಪಶುವೈದ್ಯಕೀಯ ಸೇವಾ ವಿಭಾಗದ ಸಹಾಯಕ ನಿದೇರ್ಶಕರಾದ ಡಾ. ಉಮಾಶಂಕರ್ ಅವರ ಪ್ರಕಾರ ಇದಕ್ಕೆ ಹಲವಾರು ಕಾರಣಗಳಿವೆಯಂತೆ. “ಬನ್ನೇರುಘಟ್ಟ ಜೈವಿಕ ಉದ್ಯಾನವನ ಇಡೀ ದೇಶದಲ್ಲಿಯೇ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವಂತಹ ಏಕೈಕ ಪ್ರಾಣಿ ಸಂಗ್ರಾಹಲಯವಾಗಿದೆ (zoo). ಜೊತೆಗೆ ನಾವು ಇಲ್ಲಿ ಆನೆಗಳನ್ನು ಕಾಡಿನಲ್ಲಿ ಸುತ್ತಾಡಲು ಬಿಡುತ್ತೇವೆ. ಆನೆಗಳನ್ನು ರಾತ್ರಿ ವೇಳೆ ಕಾಡಿನೊಳಗೆ ಅಡ್ಡಾಡಲು ಬಿಟ್ಟು, ಬೆಳಿಗ್ಗೆ ವಾಪಸ್ಸು ಕರೆದುಕೊಂಡು ಬರುತ್ತೇವೆ. ಇದರಿಂದ ಆನೆಗಳಿಗೆ ಭಾಗಶಃ ಕಾಡಿನ ವಾತಾವರಣ ಲಭಿಸುವುದರ ಜೊತೆಗೆ, ಕಾಡಿನಲ್ಲಿರುವ ಆನೆಗಳೊಂದಿಗೆ ಬೆರೆಯುವ ಅವಕಾಶವೂ ಲಭಿಸುತ್ತದೆ,” ಎನ್ನುತ್ತಾರೆ
ಇಲ್ಲಿ ಕುತೂಹಲಕಾರಿಯಾಗಿರುವ ವಿಷಯವೇನೆಂದರೆ ದೇಶದ ಇತರೆ ಶಿಬಿರಗಳು ಅಥವಾ ಪ್ರಾಣಿ ಸಂಗ್ರಾಲಯಗಳಲ್ಲಿ ಆನೆಗಳು ಗರ್ಭಧರಿಸಲು ಸುಮಾರು 12 ರಿಂದ 14 ವರ್ಷಗಳು ಬೇಕಾಧರೆ, ಬನ್ನೇರುಘಟ್ಟದಲ್ಲಿನ ಆನೆಗಳು ಒಂಬತ್ತು ವರ್ಷಗಳ ವಯಸ್ಸಿಗೆ ಗರ್ಭ ಧರಿಸುತ್ತವೆಯೆಂತೆ!
“ಆನೆಗಳಿಗೆ ಒದಗಿಸಲಾಗುತ್ತಿರುವ ಪೌಷ್ಠಕ ಆರೈಕೆ, ಸರಿಯಾದ ಆನೆಗಳ ಗುಂಪು ನಿರ್ವಹಣೆ ಹಾಗೂ ಒತ್ತಡ-ಮುಕ್ತ ವಾತಾವರಣಗಳಿಂದಾಗಿ ಇಲ್ಲಿನ ಆನೆಗಳು ಬೇಗನ ಬಸಿರಾಗುತ್ತವೆ. ಇಲ್ಲಿರುವ ಎಲ್ಲಾ ಆನೆಗಳೂ ಸಹ ಆರೋಗ್ಯವಂತವಾಗಿದ್ದು, ಉತ್ತಮ ಸ್ಥಿತಿಯಲ್ಲಿವೆ,” ಎನ್ನುತ್ತಾರೆ ಉಮಾಶಂಕರ್.
ಬಿಬಿಪಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ವಿಪಿನ್ ಸಿಂಘ್ ಅವರು ಈ ಕುರಿತು ಮಾತನಾಡುತ್ತಾ, “ಬಿಬಿಪಿಯಲ್ಲಿ ಸುಮಾರು 14 ಹೆಣ್ಣಾನೆಗಳು ಹಾಗೂ 11 ಗಂಡಾನೆಗಳಿವೆ. ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯ ಆನೆಗಳಿಗೆ ಸೂಕ್ತವಾಗಿರುವಂತಹ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದ್ದು, ರಾತ್ರಿ ವೇಳೆ ನೈಸರ್ಗಿಕವಾಗಿ ಬೆಳೆದಿರುವ ಆಹಾರವನ್ನು ಸೇವಿಸುತ್ತವೆ. ಜೊತೆಗೆ ಅವುಗಳಿಗೆ ಹಸಿರು ಹುಲ್ಲು ಹಾಗೂ ಕಾಲೋಚಿತ ಹಣ್ಣುಗಳು ಒಳಗೊಂಡಂತೆ ಪ್ರತಿ ದಿನ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ. ಮಾವುತರ ಜೊತೆಗೆ ಇಲ್ಲಿನ ಪ್ರಾಣಿಸಂಗ್ರಹಾಲಯವನ್ನು ನೋಡಿಕೊಳ್ಳುವ ಸಿಬ್ಬಂದಿಗಳು ಮತ್ತು ಕವಾಡಿಗಳು ದಿನಪೂರ್ತಿ ಆನೆಗಳ ಆರೈಕೆಯಲ್ಲಿ ತೊಡಗಿರುತ್ತಾರೆ. ಇವೆಲ್ಲಾ ಕಾರಣಗಳಿಂದಾಗಿ ಇಲ್ಲಿನ ಆನೆಗಳಿಗೆ ಅತ್ಯುತ್ತಮ ಸೌಲಭ್ಯಗಳು ಲಭಿಸಿದಂತಾಗಿದೆ,” ಎಂದರು.
ಬಿಬಿಪಿಯ ಶೈಕ್ಷಣಿಕ ಅಧಿಕಾರಿ ಹಾಗೂ ಪ್ರಾಣಿಗಳ ನಡವಳಿಕೆಯ ವಿಶ್ಲೇಷಕಿ ಅಮಲಾ ಎಂ ಅನಿಲ್ ಅವರು, ಇಲ್ಲಿಗೆ ರಕ್ಷಿಸಿ ತರಲ್ಪಟ್ಟಿರುವ ಆನೆಗಳ ನಡವಳಿಕೆ ಕುರಿತು ಬಹಳ ನಿಕಟವಾಗಿ ಕೆಲಸ ನಿರ್ವಹಿಸಿದ್ದು ಅವುಗಳ ನಡವಳಿಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ಆನೆಗಳಿಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ನೆರವಾಗುತ್ತಿದ್ದಾರಂತೆ.
ಮನುಷ್ಯರು ಕಿವಿಗಳನ್ನು ಸ್ವಚ್ಛಗೊಳಿಸಲು ಇಯರ್ ಬಡ್‌ಗಳನ್ನು ಉಪಯೋಗಿಸುವಂತೆ ಇಲ್ಲಿನ ಆನೆಗಳು ಕಿವಿಗಳನ್ನು ಸ್ವಚ್ಛಗೊಳಿಸಲು ಸಣ್ಣ ತೆಳುವಾದ ಮರದ ರೆಂಬೆಗಳನ್ನು ಬಳಸುತ್ತವಂತೆ! ಅದರಲ್ಲಿಯೂ ವಿಶೇಷವಾಗಿ ಕೊಲ್ಲಾಪುರದ ದೇವಾಲಯದಿಂದ ರಕ್ಷಿಸಿ ತಂದಿರುವಂತಹ ಸುಂದರ್ ಎಂಬ ಹೆಸರಿನ 21-ವರ್ಷ ವಯಸ್ಸಿನ ಆನೆಯ ನಡವಳಿಕೆ ತಜ್ಞರನ್ನೂ ವಿಸ್ಮಿತಗೊಳಿಸಿದೆಯಂತೆ! ಬಿಬಿಪಿ ಈಗಾಗಲೇ ಅತೀ ಹೆಚ್ಚಿನ ಸಂಖ್ಯೆಯ ಮಾಂಸಾಹಾರ ಪ್ರಾಣಿಗಳನ್ನು ಹೊಂದಿರುವ ಹೆಮ್ಮೆಯನ್ನು ಹೊಂದಿದೆ.
ಕಳೆದ ಒಂದು ವರ್ಷದಲ್ಲಿ ಆನೆಗಳ ಜೊತೆಗೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಎರಡು ಹೆಣ್ಣು ಹುಲಿಗಳು ಹಾಗೂ ಸುಮಾರು 10 ಸಿಂಹಿಣಿಗಳು ಕರುಗಳಿಗೆ ಜನ್ಮ ನೀಡಿವೆ. ಬಿಬಿಪಿ ಕರ್ನಾಟಕದ ಇತರೆ ಪ್ರಾಣಿ ಸಂಗ್ರಹಾಲಯಗಳೀಗೆ ಸಿಂಗದ ಮರಿಗಳನ್ನು ಉಡುಗೊರೆಯನ್ನೂ ನೀಡಿವೆ!
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Bannerghatta – now – breeding -ground – elephants.