ಮೈಸೂರು,ನವೆಂಬರ್,7,2022(www.justkannada.in): ಕಬ್ಬಿನ ಬೆಂಬಲ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ಕಬ್ಬುಬೆಳೆಗಾರರ ಸಂಘದ ವತಿಯಿಂದ ರೈತಮುಖಂಡರು ಇಂದು ಮೈಸೂರಿನಲ್ಲಿ ಬಾರುಕೋಲು ಚಳುವಳಿ ನಡೆಸಿ ರಾಜ್ಯದ ಎಂ ಎಲ್ ಎ, ಎಂ ಪಿ, ಮಂತ್ರಿಗಳಿಗೆ ಚಾಟಿ ಏಟಿನಿಂದ ಎಚ್ಚರಿಕೆ ನೀಡಿದರು.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ರೈತಮುಖಂಡರು ನಡೆಸುತ್ತಿರುವ ಹೋರಾಟ 8 ನೇ ದಿನಕ್ಕೆ ಮುಂದುವರೆದಿದ್ದು ಇಂದು ಬಾರ್ ಕೋಲು ಚಳುವಳಿ ನಡೆಸಿ ಅಣಕು ಪ್ರದರ್ಶನ ಮಾಡಿ ಮುಂದಿನ ಚುನಾವಣೆಯಲ್ಲಿ ನಮ್ಮ ಬಳಿ ಬಂದರೆ ಇದೇ ರೀತಿ ಚಾಟಿ ಕೊಟ್ಟು ಮನೆಗೆ ಕಳುಹಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬಾರ್ ಕೋಲ್ ಚಳುವಳಿಯ ನೇತೃತ್ವ ವಹಿಸಿ ಮಾತನಾಡಿದ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ , ಸರ್ಕಾರ ಮಾರ್ವಾಡಿಗಳ ಬಂಡವಾಳಶಾಹಿಗಳ ರಿಮೋಟ್ ಕಂಟ್ರೋಲ್ ರೀತಿ ಕಾರ್ಯನಿರ್ವಹಿಸುತ್ತಿರುವುದರಿಂದ ರೈತರು ಬಲಿಪಶುಗಳಾಗುತ್ತಿದ್ದಾರೆ. ಟನ್ ಕಬ್ಬಿಗೆ 7500ರೂ ಗೂ ಹೆಚ್ಚು ಆದಾಯ ಇದೆ. ಒಂದು ಟನ್ ಕಬ್ಬಿನಿಂದ ನೂರು ಲೀಟರ್ ಯಥನಾಲ್ ಬರುತ್ತದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರ ಲೀಟರಿಗೆ 65 ರೂ, ಹಾಗೂ ಕಬ್ಬಿನ ಸಿಪ್ಪೆಯಿಂದ 144 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ನಂತರ ಮಡ್ಡಿಯಿಂದ ಗೊಬ್ಬರ ಉತ್ಪಾದಿಸಲಾಗುತ್ತದೆ. ಎಲ್ಲಾ ಸೇರಿ 7500 ಆದಾಯ ಬರುತ್ತದೆ. ವರ್ಷಕಾಲ ಕಷ್ಟಪಟ್ಟು ಬೆಳೆದ ರೈತನಿಗೆ 3000 ಮಾತ್ರ, ಯಾಕೆ ಈ ರೀತಿ ಅನ್ಯಾಯ ಎಂಬುದು ನಮ್ಮ ಪ್ರಶ್ನೆ ಎಂದು ಚಾಟಿ ಬೀಸಿದರು.
60 -70 ವರ್ಷಗಳಿಂದ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಜಮೀನುಗಳನ್ನು ಕಿತ್ತುಕೊಳ್ಳಲು ಗಣಕಿಕರಣವಾಗುವಾಗ, ದಳ್ಳಾಳಿಗಳು ರಿಯಲ್ ಎಸ್ಟೇಟ್ ಮಾಫಿಯಾದವರು ಬೆಂಗಳೂರು ಮೈಸೂರು ನಗರದಲ್ಲಿರುವ ಹಣ ಕೊಟ್ಟ ಶ್ರೀಮಂತರೇ ಹೆಸರಿಗೆ ದಾಖಲಾತಿಗಳನ್ನು ಸೃಷ್ಟಿ ಮಾಡಿ ರಾಜ್ಯದಲ್ಲಿ ಲಕ್ಷಾಂತರ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನ ಮಾಡುತ್ತಿದ್ದಾರೆ, ನಿಜವಾಗಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಅನ್ಯಾಯವಾಗುತ್ತಿದೆ ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ನ್ಯಾಯ ಕೊಡಬೇಕು ಎಂಬುದು ನಮ್ಮ ಹೋರಾಟದ ಗುರಿ. ಆದರೆ ಎಂಎಲ್ಎ ,ಮಂತ್ರಿಗಳು, ಜನಸೇವೆಗಾಗಿ ಬಂದು ಜನರನ್ನ ಮರೆತಿದ್ದಾರೆ, ಅದಕ್ಕಾಗಿ ಎಚ್ಚರಿಸಲು ಬಾರ್ ಕೋಲ್ ಚಳುವಳಿ ನಡೆಸಲಾಗುತ್ತಿದೆ, ಇನ್ನು ಮುಂದೆಯೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಹಳ್ಳಿಗಳಿಗೆ ಬಂದಾಗ ರೈತರು ಬಾರ್ಕೋಲ್ ಮೂಲಕವೇ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ನಾಲ್ಕು ತಿಂಗಳುಗಳಿಂದ ಕಬ್ಬು ಬೆಳೆಗಾರ ರೈತರು ರಾಜ್ಯಾದ್ಯಂತ ಕಬ್ಬಿನ ದರ ಅನ್ಯಾಯವಾಗಿದೆ ಎಂದು ಹೋರಾಟ ಮಾಡುತ್ತಿದ್ದರೂ ನಿದ್ದೆ ಮಾಡುತ್ತಿರುವ ರಾಜಕಾರಣಿಗಳಿಗೆ ಈ ಹೋರಾಟದ ಮೂಲಕ ಎಚ್ಚರಿಸುತ್ತಿದ್ದೇವೆ. ಇನ್ನು ಮುಂದೆಯೂ ಇದೇ ರೀತಿ ರೈತರ ಬಗ್ಗೆ ಲಘುವಾಗಿ ನಡೆದುಕೊಂಡರೆ ಅಂತಹ ಎಂ ಎಲ್ ಎ, ಎಂಪಿ ಗಳಿಗೆ ಈ ಚುನಾವಣೆಯಲ್ಲಿ ರೈತರ ಶಕ್ತಿ ಏನೆಂದು ತಿಳಿಸಿಕೊಡುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಹಾಡ್ಯ ರವಿ, ಅಂಬಳೆ ಮಂಜುನಾಥ್, ಲಕ್ಷ್ಮೀಪುರ ವೆಂಕಟೇಶ್, ವರಕೂಡು ಜಯರಾಮು,ಟಿ ರಾಮೇಗೌಡ, ಸೋನಹಳ್ಳಿ ದೊರೆಸ್ವಾಮಿ, ಬಸವಣ್ಣ, ಮಂಜುನಾಥ್, ಕುರುಬೂರು ಮಂಜು, ಮಾರ್ಬಳ್ಳಿ ನೀಲಕಂಠಪ್ಪ, ಚುಂಚರಾಯನಹುಂಡಿ ತಮಯಪ್ಪ, ಮಲ್ಲಪ್ಪ, ಮಾದೇವಸ್ವಾಮಿ, ಮುದ್ದಹಳ್ಳಿ ಶಿವಣ್ಣ, ದಿನೇಶ್ ಇನ್ನು ಮುಂತಾದವರು ಇದ್ದರು.
Key words: Barukolu -movement – Mysore-farmers-kurubur shanthakumar