ಮೈಸೂರು,ಅಕ್ಟೋಬರ್,7,2023(www.justkannada.in) ನುಡಿದಂತೆ ನಡೆದವರು, ಸಮಾನತೆ ಸಾರಿದವರು ಬಸವಾದಿ ಶರಣರು. ಅವರಂತೆ ನಡೆಯಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಮೈಸೂರಿನ ಬಸವ ಬಳಗಗಳ ಒಕ್ಕೂಟ ಮೈಸೂರು ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಬಸವಾದಿ ಶರಣರ ಸ್ಮರಣೆ ಮತ್ತು ಅವರ ವಿಚಾರಗಳ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಬಸವಣ್ಣನವ ವಿಚಾರಗಳು ಎಂದೆಂದಿಗೂ ಪ್ರಸ್ತುತ. ಅವರ ತತ್ವಗಳಿಗೆ ಅಪಾರ ಗೌರವ ಕೊಡುತ್ತೇನೆ. ಸಮಾಜದಲ್ಲಿ ಜಾತಿ ನಿರ್ಮೂಲನೆ ಬಯಸಿದ್ದರು ಬಸವಾದಿ ಶರಣರು. ಅವರಂತೆ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. 2013 ರಂದು ಬಸವ ಜಯಂತಿ ದಿನದಂದೇ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ. ಬಸವಾದಿ ಶರಣರು ನುಡಿದಂತೆ ನಡೆದವರು. ಅವರು ಹೇಳಿದಂತೆ ನಡೆಯಲು ಸಾಧ್ಯವಿಲ್ಲವಾದರೂ ಅವರ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುಬೇಕು. ನಾನು ಅಂದು ಬಸವ ಜಯಂತಿ ದಿನವೇ ಪ್ರಮಾಣ ವಚನ ಸ್ವೀಕಾರ ಮಾಡಿ ನೇರವಾಗಿ ನಾವು ಕೊಟ್ಟಿದ್ದ ಭರವಸೆಗಳನ್ನ ಘೋಷಣೆ ಮಾಡಿದೆ ಅಂದೇ ಆದೇಶವನ್ನು ಹೊರಡಿಸಿದೆ. ನುಡಿದಂತೆ ನಡೆಯಬೇಕು ಎಂಬುವುದನ್ನು ಬಸವಾದಿ ಶರಣರ ವಿಚಾರಗಳಿಂದ ಅಳವಡಿಸಿಕೊಂಡಿರುವುದು. ಬಸವಾದಿ ಶರಣರು 12 ನೇ ಶತಮಾನದಲ್ಲಿ ಜಾತಿ ರಹಿತ ಸಮಾಜ ಕಟ್ಟಲು ಹೋರಾಟ ಮಾಡಿದ್ದಾರೆ. ಮೌಢ್ಯ,ಕಂದಾಚಾರಗಳನ್ನು ಕಿತ್ತೊಗೆದು ವೈಚಾರಿಕ ಸಮಾಜದಲ್ಲಿ ಬರಬೇಕು ಎಂದು ಶ್ರಮಿಸಿದ್ದರು ಎಂದು ಸಭೀಕರಿಗೆ ಬಸವಾದಿ ಶರಣರ ಪಾಠ ಹೇಳಿದರು.
ಈ ಶ್ರೇಣೀಕೃತ ವ್ಯವಸ್ಥೆ ಹೋಗಬೇಕು. ಈ ಜಾತಿ ವ್ಯವಸ್ಥೆಯಲ್ಲಿ ಒಬ್ಬರ ಮೇಲೆ ಒಬ್ಬರು ಕೂತಿದ್ದಾರೆ. ಮೇಲೆ ಇರುವವನು ಮೇಲು, ಕೆಳಗಡೆ ಇರುವವನು ಕೀಳು ಎಂಬ ಭಾವನೆ ಇದೆ. ಇದು ಹೋಗಬೇಕು ಇದು ಸಮಾನವಾಗಿ ಇರಬೇಕು. ಸಮಾಜ ಸಮಾನವಾಗಿರಬೇಕೇ ಹೊರತು ಲಂಬವಾಗಿರಬಾರದು. ನೋಡಿ ಈಗ ಸ್ವಾಮಿಗಳು ನಾವು ಎಲ್ಲ ಒಟ್ಟಿಗೆ ಕೂತಿದ್ದೇವೆ. ಈ ರೀತಿ ಸಮಾನತೆ ಸಾರಿದ್ದು ಬಸವಾದಿ ಶರಣ ಸಾಹಿತ್ಯ. ವಚನ ಸಾಹಿತ್ಯ ಒಂದು ವಿಶಿಷ್ಟ ಸಾಹಿತ್ಯ. ಜನರಿಗೆ ತಿಳಿಯುವ ಭಾಷೆಯಲ್ಲಿ ವಚನ ಸಾಹಿತ್ಯಗಳಿವೆ. ಸಂಸ್ಕೃತದಲ್ಲಿ ಹೇಳಿದರೆ ಜನರಿಗೆ ಅರ್ಥ ಆಗಲ್ಲ. ಜನರ ಆಡು ಭಾಷೆಯಲ್ಲೇ ವಚನ ಸಾಹಿತ್ಯ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದೆ. ತಳಮಟ್ಟದ ಜನರಲ್ಲಿ ಜಾಗೃತಿ ಮೂಡಿಸುವ,ಹೊಸ ಚೈತನ್ಯವನ್ನು ತುಂಬುವ ಕೆಲಸವನ್ನು ಬಸವಾದಿ ಶರಣರು ಮಾಡಿದರು. ಹಾಗಾಗಿ ಬಸವಾದಿ ಶರಣರು ಮಾನವತಾವಾದಿಗಳಾಗಿದ್ದರು. ಆ ಕಾಲದಲ್ಲಿ ಅಂತರ್ ಜಾತಿ ವಿವಾಹ ಮಾಡಿಸಿದ್ದರು. ಹರಳಯ್ಯ ಯಾವ ಜಾತಿಗೆ ಸೇರಿದ್ದರು ಗೊತ್ತ ಎಂದು ಬಿಜೆಪಿ ಶಾಸಕ ಶ್ರೀವತ್ಸ ಅವರ ಕಾಲೆಳೆದರು.
ಸ್ವಾತಂತ್ರ್ಯ ಬಂದು 76 ವರ್ಷಗಳ ಕಳೆದರೂ ಕೂಡ ಇನ್ನೂ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ. ಅಸಮಾನತೆ ಹೋಗಬೇಕು. ಇದು ಹೋಗದೇ ಹೋದರೆ ಯಾರು ಶೋಷಣೆಗೆ ಒಳಗಾಗಿದ್ದಾರೋ ಅವರು ಈ ವ್ಯವಸ್ಥೆಯನ್ನ ಧ್ವಂಸ ಮಾಡುತ್ತಾರೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು ಎಂದರು.
ನಮ್ಮ ಗ್ಯಾರಂಟಿಗಳಲ್ಲಿ ಯಾವುದೇ ಜಾತಿಗೆ ಅಂತ ನಮ್ಮ ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ. ಎಲ್ಲಾ ಜಾತಿ ಸಮುದಾಯಗಳಿಗೂ ಗ್ಯಾರಂಟಿ ಅನುಕೂಲ ಮಾಡಿದ್ದೇವೆ. ನಮ್ಮ ಪಂಚ ಗ್ಯಾರಂಟಿಗಳಿಗೆ ಯಾವುದೇ ಜಾತಿ ಧರ್ಮಗಳಿಲ್ಲ. ಇದೆಲ್ಲ ಬಸವಾದಿ ಶರಣರ ಪ್ರೇರಣೆಯಿಂದ ಮಾಡುತ್ತಿರುವ ಕೆಲಸ. ಇವನಾರವ ಇವನಾರವ ಎಂಬುವುದನ್ನು ಬಿಟ್ಟು ಇವ ನಮ್ಮವ ಇವ ನಮ್ಮವ ಎಂಬ ಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳುವ ಮೂಲಕ ಸಿಎಂ ಸಿದ್ಧರಾಮಯ್ಯ ಬಸವಾದಿ ಶರಣರ ಆಶಯ ಬಿಚ್ಚಿಟ್ಟರು.
Key words: Basavadi sharanaru-mysore-Basava jayanthi – CM Siddhamramaiah.