ಪೊಲೀಸರ ಲಾಠಿಚಾರ್ಜ್ ವ್ಯವಸ್ಥಿತ ಷಡ್ಯಂತ್ರ: ಸರ್ಕಾರ ಕ್ಷಮೆ ಕೇಳಲಿ- ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ,ಡಿಸೆಂಬರ್,11,2024 (www.justkannada.in): ನಿನ್ನೆ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ಲಾಠಿಚರ್ಜ್ ವ್ಯವಸ್ಥಿತ ಷಡ್ಯಂತ್ರ. ಕೂಡಲೇ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ,  ನಿನ್ನೆ ‘ಪಂಚಮಸಾಲಿ ಸಮಾಜದವರು ಶಾಂತಿಯುತವಾಗಿ ಹೋರಾಟ ನಡೆಸಿದ್ದೇವು.  ಸಿವಿಲ್ ಡ್ರೆಸ್ ನಲ್ಲಿ ಬಂದ ಪೊಲೀಸರೇ ನಮ್ಮವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಮವಸ್ತ್ರದಲ್ಲಿದ್ದವರು ಲಾಠಿಚರ್ಜ್‌ ನಡೆಸಿದ್ದಾರೆ. ಇದು ವ್ಯವಸ್ಥಿತ ಷಡ್ಯಂತ್ರ. ಲಾಠಿಚಾರ್ಜ್ ನಡೆಸಿದ ಪೊಲೀಸ್‌ ಸಿಬ್ಬಂದಿಯನ್ನ ಅಮಾನತು ಮಾಡಲಿ ಎಂದು ತಿಳಿಸಿದರು.

ಹೋರಾಟಗಾರರನ್ನ ಹೊಡೆದು ಅವರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಎಲ್ಲರ ಮೇಲಿನ ಪ್ರಕರಣ ಹಿಂಪಡೆಯಬೇಕು. ಇಲ್ಲದಿದ್ದರೆ ಡಿ.16ರಂದು ಇಡೀ ದಿನ ಸುವರ್ಣ ವಿಧಾನಸೌಧದ ಎದುರಿನಲ್ಲಿ ಧರಣಿ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಈವರೆಗಿನ ಯಾವುದೇ ಸರ್ಕಾರ ಲಿಂಗಾಯತರ ಮೇಲೆ ದಾಳಿ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರೇ ಲಿಂಗಾಯತರ ಮೇಲೆ ಲಾಠಿ ಎತ್ತಿದ ಮೊದಲ ಮುಖ್ಯಮಂತ್ರಿ ಎನ್ನುವ ಮೂಲಕ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ಪರೋಕ್ಷವಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.

Key words: Police, lathicharge, Basavajaya Mrityunjaya Swamiji