ಬೆಂಗಳೂರು,ಜನವರಿ,10,2023(www.justkannada.in): ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿಹೋಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲಂತೂ ರಾಜ್ಯಕ್ಕೆ ದೊಡ್ಡ ಕಳಂಕವನ್ನು ತಂದಿದ್ದಾರೆ. ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ ಅಂದ್ರೆ ಅದು ಬಸವರಾಜ ಬೊಮ್ಮಾಯಿ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಿಷ್ಟು…
ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಬಿಜೆಪಿಯ ಪಾಪದ ಪುರಣ ಎಂಬ ಆರೋಪಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಅನೈತಿಕ ಮಾರ್ಗದ ಮೂಲಕ ರಚನೆಯಾದ ಸರ್ಕಾರ. 2018ರಲ್ಲಿ ಇವರಿಗೆ ಜನ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡಿರಲಿಲ್ಲ, 104 ಸ್ಥಾನಗಳಲ್ಲಿ ಮಾತ್ರ ಗೆದ್ದಿದ್ದರು. ಆ ನಂತರ ಆಪರೇಷನ್ ಕಮಲದ ಮೂಲಕ ಅನೈತಿಕ ಮಾರ್ಗದಲ್ಲಿ ಈ ಸರ್ಕಾರ ರಾಜ್ಯದ ಮೇಲೆ ವಕ್ಕರಿಸಿಕೊಂಡಿದೆ. ಕೋಟ್ಯಾಂತರ ರೂಪಾಯಿ ಪಾಪದ ಹಣವನ್ನು ಖರ್ಚು ಮಾಡಿ, ಶಾಸಕರನ್ನು ಕೊಂಡುಕೊಂಡು ಸರ್ಕಾರ ರಚನೆ ಮಾಡಿದ್ದಾರೆ. ಇದಕ್ಕೆ ಖರ್ಚು ಮಾಡಿದ ಸಂಪೂರ್ಣ ಹಣ ಭ್ರಷ್ಟಾಚಾರದ್ದು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿಹೋಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲಂತೂ ರಾಜ್ಯಕ್ಕೆ ದೊಡ್ಡ ಕಳಂಕವನ್ನು ತಂದಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವಾಗ ಕೊರೊನಾ ಸಂದರ್ಭದಲ್ಲಿ ಸುಮಾರು 2500 ಇಂದ 3000 ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದರು. ಇದನ್ನು ಸದನದಲ್ಲಿ ಪ್ರಸ್ತಾಪ ಮಾಡಿದಾಗ ಸರ್ಕಾರ ಉತ್ತರ ನೀಡದೆ ಜಾರಿಕೊಂಡಿತು. ಈ ವೇಳೆ ಸುಮಾರು 3.5 ಲಕ್ಷ ಜನ ಸತ್ತುಹೋದರು. ಇದರಲ್ಲೂ ಸುಳ್ಳು ಲೆಕ್ಕ ನೀಡಿದರು ಎಂದು ಆರೋಪಿಸಿದರು.
ರಾಜ್ಯ ಕಂಡಂತಹ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದರೆ ಬಸವರಾಜ ಬೊಮ್ಮಾಯಿ. ಇವರು ಬರೀ ಭ್ರಷ್ಟ ಮಾತ್ರವಲ್ಲ, ಕೇಂದ್ರ ಸರ್ಕಾರದ ಮುಂದೆ ಹೇಡಿತನದಿಂದ ವರ್ತಿಸುವ ದುರ್ಬಲ ವ್ಯಕ್ತಿ ಕೂಡ ಹೌದು. 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5495 ಕೋಟಿ ರೂ. ವಿಶೇಷ ಅನುದಾನ ರಾಜ್ಯಕ್ಕೆ ನೀಡಬೇಕು ಎಂದು ಶಿಫಾರಸು ಮಾಡಿತ್ತು. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಶಿಫಾರಸನ್ನು ತಿರಸ್ಕಾರ ಮಾಡಿದರು. ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ, ಸರ್ಕಾರ ಆಗಲೀ, ಸಂಸದರಾಗಲೀ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಿಲ್ಲ, ಇದರಿಂದ ಹಣಕಾಸು ಆಯೋಗದ ಅಂತಿಮ ವರದಿಯಲ್ಲಿ ಇದನ್ನು ಕೈಬಿಟ್ಟರು. 14ನೇ ಹಣಕಾಸು ಆಯೋಗಕ್ಕೂ 15ನೇ ಹಣಕಾಸು ಆಯೋಗಕ್ಕೂ ನಡುವೆ ರಾಜ್ಯದ ತೆರಿಗೆ ಪಾಲನ್ನು 1.07% ಕಡಿತ ಮಾಡಿದ್ದಾರೆ. ಇದರಿಂದ ಆಗುವ ನಷ್ಟವನ್ನು ಭರಿಸಲು ವಿಶೇಷ ಅನುದಾನ ನೀಡಿದ್ದರು. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಬರುವ ತೆರಿಗೆ ಪಾಲು ಕಡಿಮೆಯಾಗಿದೆ, ರಾಜ್ಯದಿಂದ 3.5 ಲಕ್ಷ ಕೋಟಿ ವಿವಿಧ ರೂಪದಲ್ಲಿ ತೆರಿಗೆ ಸಂಗ್ರಹವಾಗುತ್ತದೆ. ಇದರಲ್ಲಿ ನಮಗೆ ಬರುವ ಪಾಲು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅತೀ ಕಡಿಮೆ. ಇದರಿಂದ ರಾಜ್ಯ ಸಾಲ ಮಾಡಬೇಕಾಗಿ ಬಂದಿದೆ.
ಸ್ವಾತಂತ್ರ್ಯ ನಂತರದಿಂದ ನಮ್ಮ ಸರ್ಕಾರದ ಕೊನೆಯ ಬಜೆಟ್ ವರೆಗೆ ರಾಜ್ಯದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಇದು ಈ ವರ್ಷದ ಮಾರ್ಚ್ ಅತ್ಯಂದ ವೇಳೆಗೆ 5 ಲಕ್ಷದ 40 ಸಾವಿರ ಕೋಟಿ ದಾಟಲಿದೆ. 70 ವರ್ಷಗಳಲ್ಲಿ 2.42 ಲಕ್ಷ ಕೋಟಿ, ಕೇವಲ 5 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದರ ಪರಿಣಾಮವಾಗಿ ರಾಜ್ಯವು ಅಸಲು ಮತ್ತು ಬಡ್ಡಿ ರೂಪದಲ್ಲಿ 43,000 ಕೋಟಿ ಹಣ ಕಟ್ಟಬೇಕಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿಮೆಯಾಗಿ, ರಾಜ್ಯದ ಅಭಿವೃದ್ಧಿ ಕುಂಠಿತವಾಗಲಿದೆ. ಇಂದು ಪ್ರತೀ ಕನ್ನಡಿಗನ ಮೇಲೆ 86,000 ರೂ. ಸಾಲ ಇದೆ. ಹೀಗಾದರೆ ರಾಜ್ಯ ಉಳಿಯುತ್ತಾ? ಈ ರಾಜ್ಯವನ್ನು ಉಳಿಸಲು, ಜನರ ಕಷ್ಟವನ್ನು ಪರಿಹಾರ ಮಾಡಲು, ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು, ನಾವು ಅಧಿಕಾರದಲ್ಲಿರಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಗೆಲ್ಲಬೇಕು ಎಂಬುದು ನಮ್ಮ ಉದ್ದೇಶವಲ್ಲ, ರಾಜ್ಯವನ್ನು ಉಳಿಸಬೇಕು ಎಂಬುದು ನಮ್ಮ ಚಿಂತನೆ ಎಂದು ಸಿದ್ಧರಾಮಯ್ಯ ಹೇಳಿದರು.
ರಾಜ್ಯದ ಇತಿಹಾಸದಲ್ಲಿ ಯಾವತ್ತೂ ಕೂಡ ಗುತ್ತಿಗೆದಾರರ ಸಂಘದವರು 40% ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿಗಳಿಗೆ, ರಾಷ್ಟ್ರಪತಿಗಳಿಗೆ, ಮುಖ್ಯಮಂತ್ರಿಗಳಿಗೆ, ಸಂಬಂಧಿಸಿದ ಮಂತ್ರಿಗಳಿಗೆ ಪತ್ರ ಬರೆದಿರಲಿಲ್ಲ. 6-7-2021ರಲ್ಲಿ ಪತ್ರ ಬರೆದಿದ್ದಾರೆ, ಇಲ್ಲಿಯವರೆಗೆ ಪ್ರಧಾನಿಗಳು ಯಾವ ಪ್ರತಿಕ್ರಿಯೆ ನೀಡಿಲ್ಲ, ಕಾನೂನು ಕ್ರಮವನ್ನು ಕೈಗೊಂಡಿಲ್ಲ. ಮಾತೆತ್ತಿದರೆ ನ ಖಾವೂಂಗಾ ನ ಖಾನೆದೂಂಗ ಎನ್ನುವ ಮೋದಿ ಅವರದು ಢೋಂಗಿತನ ಎನ್ನುವುದು ಸ್ಪಷ್ಟವಾಗುತ್ತದೆ. ಕಾಮಗಾರಿಗಳು ಅನಮೋದನೆ ಆಗಬೇಕಾದರೆ ಮಾತ್ರ ಕಮಿಷನ್ ಇಲ್ಲ, ನೇಮಕಾತಿಯಲ್ಲಿ, ವರ್ಗಾವಣೆಯಲ್ಲಿ, ಬಡ್ತಿಯಲ್ಲಿ, ಹೀಗೆ ಎಲ್ಲಾ ಕಡೆ ಲಂಚ ಇದೆ. ಇದನ್ನು ಅಧಿಕಾರಿಗಳು ಹೊರಗೆ ಹೇಳದೆ ನಮ್ಮ ಜೊತೆ ಖಾಸಗಿಯಾಗಿ ನೋವು ಹೇಳಿಕೊಳ್ಳುತ್ತಾರೆ. ಹೋಟೆಲ್ ನ ಮೆನು ಪಟ್ಟಿಯಂತೆ ಲಂಚ ನಿಗದಿ ಮಾಡಿದ್ದಾರೆ. ಈ ಸರ್ಕಾರ ಅಲಿಬಾಬಾ ಮತ್ತು 40 ಮಂದಿ ಕಳ್ಳರಂತೆ ಆಗಿದೆ. ಈ ಕಾರಣಕ್ಕಾಗಿ ಇಂದು ಒಂದು ಆರೋಪಪಟ್ಟಿಯನ್ನು ಸಿದ್ಧಮಾಡಿ ಜನರ ಮುಂದಿಡುತ್ತೇವೆ, ಜನ ತೀರ್ಮಾನ ಮಾಡಲಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಜನ ಈ ಸರ್ಕಾರದ ದ್ವೇಷ ರಾಜಕೀಯದಿಂದ ಬೇಸತ್ತು ಹೋಗಿದ್ದಾರೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಬಡವರು, ರೈತರು ಆತಂಕದಿಂದ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ಇಂದು ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಎರಡು ದಶಕಗಳಷ್ಟು ಹಿಂದಕ್ಕೆ ಹೋಗಿದೆ.
ಈ ಹಿನ್ನೆಲೆಯಲ್ಲಿ ನಾವು ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ, ಆಶೋತ್ತರಗಳಿಗೆ ಧ್ವನಿಯಾಗಬೇಕು ಎಂದು ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಯಾತ್ರೆಯ ಮೂಲಕ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಮೊದಲು ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಯಾತ್ರೆ ಮಾಡಿ, ನಂತರ ಸಮಯದ ಅಭಾವ ಇರುವುದರಿಂದ 2 ತಂಡಗಳಾಗಿ ವಿಂಗಡಿಸಿ ಯಾತ್ರೆ ಮಾಡಲಿದ್ದೇವೆ. ಶಿವಕುಮಾರ್ ಹಾಗೂ ಇತರೆ ಹಿರಿಯ ನಾಯಕರ ನೇತೃತ್ವದಲ್ಲಿ ಒಂದು ತಂಡ ಮತ್ತು ನಾನು ಹಾಗೂ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಇನ್ನೊಂದು ತಂಡ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ. ಮೊದಲ ಹಂತದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಭೇಟಿ ನೀಡಲಿದೆ. ಡಿ.ಕೆ ಶಿವಕುಮಾರ್ ಅವರ ತಂಡ ಹಳೇ ಮೈಸೂರು ಭಾಗದಲ್ಲಿ ಯಾತ್ರೆ ನಡೆಸಲಿದೆ. ಎರಡನೇ ಹಂತದ ಪ್ರವಾಸದಲ್ಲಿ ನಮ್ಮ ತಂಡ ಹಳೇ ಮೈಸೂರು ಭಾಗದಲ್ಲಿ ಯಾತ್ರೆ ಮಾಡಲಿದೆ. ಶಿವಕುಮಾರ್ ಅವರ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಹೋಗಲಿದೆ. ಹೀಗೆ ರಾಜ್ಯದ ಮೂಲೆ ಮೂಲೆಗಳಿಗೆ ಭೇಟಿ ನೀಡಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪುರಾಣ, ಸಾಲದ ಹೊರೆ, ದ್ವೇಷ ರಾಜಕಾರಣವನ್ನು ಜನರ ಮುಂದಿಡುತ್ತೇವೆ.
ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದುಪ್ಪಟ್ಟುಮಾಡುತ್ತೇವೆ ಎಂದು ಹೇಳಿದ್ದರು. ಕೃಷಿ ಚಟುವಟಿಕೆಗಳಿಗೆ ಖರ್ಚು ಮಾಡುವ ಬಂಡವಾಳದ ಹಣ ಹೆಚ್ಚಾಗುತ್ತಿದೆ, ರೈತರ ಆದಾಯದ ಮಟ್ಟ ಕುಸಿಯುತ್ತಿದೆ. ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ವಾಪಾಸು ಪಡೆದಿದೆ ಆದರೆ ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾನೂನನ್ನು ವಾಪಾಸು ಪಡೆದಿಲ್ಲ. ಇದರಿಂದ 600 – 700 ಕೋಟಿ ಬರುತ್ತಿದ್ದ ಎಪಿಎಂಸಿ ಗಳ ಆದಾಯ 100, 200 ಕೋಟಿಗೆ ಇಳಿದಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು ಎಂದು ಬದಲಾಯಿಸಿದ್ದಾರೆ. ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ ಮಾಡಿದ್ದರು, ಈಗ ಉಳ್ಳವನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದಾರೆ.
ಬೆಲೆಯೇರಿಕೆ ಗಗನಕ್ಕೆ ಮುಟ್ಟಿದೆ. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಒಂದು ಸಿಲಿಂಡರ್ ಬೆಲೆ 414 ರೂ ಇತ್ತು, ಇಂದು ಅದು 1150 ರೂ ಆಗಿದೆ. ಹೋಗಲಿ ಕಚ್ಚಾ ತೈಲ ಬೆಲೆ ಎದ್ವಾತದ್ವಾ ಏರಿಕೆ ಆಗಿದೆಯಾ ಅದೂ ಕೂಡ ಇಲ್ಲ. ಆದರೂ ಪೆಟ್ರೋಲ್, ಡೀಸೆಲ್, ರಸಗೊಬ್ಬರ ಬೆಲೆ ಯಾಕೆ ಜಾಸ್ತಿಯಾಗಿದೆ? 2020ರಿಂದ ಗ್ಯಾಸ್ ಗೆ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಿದರು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಏರಿಕೆ ಮಾಡಿದರು. ಯುವ ಜನರಿಗೆ ವಾರ್ಷಿಕ 2 ಕೋಟಿ ಉದ್ಯೋಗ ನೀಡಿಲ್ಲ, ಸಾಮಾನ್ಯ ಜನರು ಉಪಯೋಗಿಸುವ ಪದಾರ್ಥಗಳ ಬೆಲೆಯೇರಿಕೆ ಮಾಡಿದರು. ರೈತರ ಸಾಲ ಮನ್ನಾ ಮಾಡಿಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 78,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ 22 ಲಕ್ಷದ 27 ಸಾವಿರ ರೈತರು ಸಹಕಾರಿ ಸಂಘಗಳಲ್ಲಿ ಮಾಡಿದ್ದ 50,000 ರೂ ವರೆಗಿನ 8,165 ಕೋಟಿ ಅಲ್ಪಾವಧಿ ಕೃಷಿ ಸಾಲವನ್ನು ಮನ್ನಾ ಮಾಡಿದ್ದೆ. ಬಿಜೆಪಿ ರೈತರ ಸಾಲ ಮನ್ನಾ ಮಾಡದೆ 10 ಲಕ್ಷ ಕೋಟಿ ರೂ. ಕೈಗಾರಿಕೋದ್ಯಮಿಗಳ ಸಾಲವನ್ನು ಮನ್ನಾ ಮಾಡಿದರು. ಹೀಗೆ ರಾಜ್ಯ ಮತ್ತು ದೇಶವನ್ನು ಲೂಟಿ ಮಾಡುತ್ತಿದ್ದಾರೆ.
ಬಿಜೆಪಿಯ ಪಾಪದ ಪುರಾಣ ಎಂಬ ಕರ್ಮಕಾಂಡಗಳ ಪಟ್ಟಿಯನ್ನು ಮುಂದಿಟ್ಟಿದ್ದೇವೆ. ರಥಯಾತ್ರೆಯ ಮೂಲಕ ಜನರ ಬಳಿ ಹೋಗಿ ಜನರ ನಿರೀಕ್ಷೆಗಳನ್ನು ತಿಳಿದುಕೊಳ್ಳುತ್ತೇವೆ. “ಕೈಜೋಡಿಸಿ ಕರುನಾಡಿಗಾಗಿ” ಎಂಬ ಕಾರ್ಯಕ್ರಮದಡಿ 9537 244 244 ಸಂಖ್ಯೆಗೆ ರಾಜ್ಯದ ಜನ ಕರೆಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡುತ್ತಿದ್ದೇವೆ. ರಾಜ್ಯ ಸರ್ಕಾರದ ಕರ್ಮಕಾಂಡಗಳನ್ನು ಜನರ ಮುಂದಿಡುವ ಪ್ರಯತ್ನ ನಮ್ಮದು, ಇದಕ್ಕೆ ಮಾಧ್ಯಮ ಮಿತ್ರರ ಸಹಕಾರ ಇರಲಿ ಎಂದು ಸಿದ್ಧರಾಮಯ್ಯ ಮನವಿ ಮಾಡಿದರು.
Key words: Basavaraja Bommai – weakest -CM – state – Former CM -Siddaramaiah