ಬೆಂಗಳೂರು, ಸೆಪ್ಟೆಂಬರ್ 2, 2021 (www.justkannada.in): ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ತಿಂಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರದ ಎರಡು ಕೋವಿಡ್ ಲಸಿಕಾಕರಣ ಕೇಂದ್ರಗಳಲ್ಲಿ ಲಸಿಕೆ ನೀಡುವ ಕೆಲಸದ ಅವಧಿಯನ್ನು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9ರವರೆಗೆ ವಿಸ್ತರಿಸಲು ಯೋಜಿಸಿದೆ.
ಇತರೆ ಲಸಿಕಾ ಕೇಂದ್ರಗಳು ಈಗಿರುವಂತೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಲಿದೆ. ಒಂದು ವೇಳೆ ಜನಸಂದಣಿ ಹೆಚ್ಚಾಗಿದ್ದರೆ ಲಸಿಕಾಕರಣದ ಸಮಯವನ್ನು ವಿಸ್ತರಿಸಲಾಗುತ್ತದೆ.
ಬಿಬಿಎಂಪಿ ಮುಂದಿನ ೪೫ ದಿನಗಳೊಳಗೆ ಬೆಂಗಳೂರಿನ ಒಟ್ಟು ಜನಸಂಖ್ಯೆಯ ಪೈಕಿ ೯೫% ಜನರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದು, ಪ್ರತಿ ದಿನ ಒಂದು ಲಕ್ಷ ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಿದೆ.
ಲಸಿಕಾ ಕೇಂದ್ರಗಳು ಇಲ್ಲದಿರುವಂತಹ ಕೊಳಗೇರಿ ಪ್ರದೇಶಗಳು ಮತ್ತು ಕಡಿಮೆ ಆದಾಯ ಗುಂಪುಗಳಿರುವಂತಹ ಪ್ರದೇಶಗಳನ್ನು ಗುರುತಿಸಿ, ಅಂತಹ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯುವಂತೆ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಡಿ. ಅವರು ವಿಭಾಗೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜೊತೆಗೆ ಬಿಬಿಎಂಪಿ, ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಸರ್ಕಾರಿ ಕಚೇರಿಗಳು ಹಾಗೂ ಟೆಕ್ ಪಾರ್ಕ್ ಗಳಂತಹ, ಲಸಿಕೆ ಪಡೆಯಲು ಅತಿ ಹೆಚ್ಚು ಜನ ಬರುವಂತಹ ಸ್ಥಳಗಳಲ್ಲಿ ಮೊಬೈಲ್ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ.
ಪ್ರತಿ ಬುಧವಾರದಂದು ಲಸಿಕಾ ಮೇಳಗಳನ್ನು ಆಯೋಜಿಸಲಾಗುತ್ತಿದ್ದು ಬಿಬಿಎಂಪಿ ಈ ಮೂಲಕ ೧.೫ ರಿಂದ ೨ ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಿದೆ. ಜೊತೆಗೆ, ಲಸಿಕೆ ಪಡೆಯಲು ಬರುವಂತಹವರ ಪೈಕಿ ರೋಗಲಕ್ಷಣಗಳಿರುವವರನ್ನು ಹೊರತುಪಡಿಸಿ, ಎಲ್ಲರಿಗೂ ಬಲವಂತವಾಗಿ ಕೋವಿಡ್ ತಪಾಸಣೆ ನಡೆಸದಿರುವಂತೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೋರಿಕೆಗಳ ಮೇರೆಗೆ ಹಿರಿಯ ನಾಗರಿಕರು ಹಾಗೂ ಹಾಸಿಗೆ ಹಿಡಿದಿರುವಂತಹ ಜನರ ಅನುಕೂಲಕ್ಕಾಗಿ ಬಿಬಿಎಂಪಿ ಮನೆಗೆ ತೆರಳಿ ಲಸಿಕೆ ನೀಡಲು ತನ್ನ ತಂಡಗಳಿಗೆ ಅನುಮತಿಸಿದೆ.
ಈ ಕುರಿತು ಮಾತನಾಡಿದ ರಣದೀಪ್ ಡಿ. ಅವರು, “ನಾವು ಈ ರೀತಿ ಮನೆಗೆ ತೆರಳಿ ಲಸಿಕೆ ನೀಡುವ ತಂಡಗಳಿಗೆ, ಲಸಿಕೆ ನೀಡಿದ ನಂತರ ಅಲ್ಲಿಯೇ ಅರ್ಧ ಗಂಟೆ ಕಾಲ ಇದ್ದು, ಲಸಿಕೆ ಪಡೆದಿವರಿಗೆ ಯಾವುದೇ ತೊಂದರೆ ಆಗಿಲ್ಲದಿರುವುದನ್ನು ಖಾತ್ರಿಪಡಿಸಿಕೊಂಡ ನಂತರ ಹೊರಡುವಂತೆ ಸೂಚಿಸಿದ್ದೇವೆ. ಲಸಿಕೆ ಪಡೆಯುವವರಿಗೆ ಒಂದು ವೇಳೆ ಏನಾದರೂ ತೊಂದರೆ ಎದುರಾದರೆ ಯಾರನ್ನು ಸಂಪರ್ಕಿಸಬೇಕು ಎಂಬ ವಿವರಗಳನ್ನು ಒದಗಿಸುವಂತೆ ತಿಳಿಸಿದ್ದೇವೆ,” ಎಂದು ವಿವರಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: BBMP- extends –working- hours – covid-19 –vaccination-centers.