BBMP : ಮುಖ್ಯ ಆಯುಕ್ತರ ರೇಸ್‌ ನಲ್ಲಿ ಮಣಿವಣ್ಣನ್‌ ಹಾಗೂ ಮಹೇಶ್ವರ ರಾವ್‌ ಹೆಸರು ಮುಂಚೂಣಿಯಲ್ಲಿ.

BBMP: The names of Manivannan and Maheswara Rao are in the forefront of the race for chief commissioners.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ನೂತನ ಮುಖ್ಯಸ್ಥರ ನೇಮಕಗೊಳ್ಳುವ ಸಾಧ್ಯತೆ ಇದ್ದು, ರಾಜ್ಯದ ಇಬ್ಬರು ಐಎಎಸ್‌ ಅಧಿಕಾರಿಗಳ ಹೆಸರು ಇದಕ್ಕಾಗಿ ಈಗ ಮುಂಚೂಣಿಯಲ್ಲಿದೆ.

ಬಿಬಿಎಂಪಿಯ ಹಾಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಸದ್ಯದಲ್ಲೇ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಅತ್ಯಂತ ಶ್ರೀಮಂತ ಮತ್ತು ಅತಿದೊಡ್ಡ ನಾಗರಿಕ ಸಂಸ್ಥೆಯಾದ ಬಿಬಿಎಂಪಿ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಕುತೂಹಲ ಮೂಡಿದೆ.

ಮೂಲಗಳ ಪ್ರಕಾರ, ಹಿರಿಯ ಐಎಎಸ್ ಅಧಿಕಾರಿಗಳಾದ ಪಿ ಮಣಿವಣ್ಣನ್ ಮತ್ತು ಮಹೇಶ್ವರ ರಾವ್ ಅವರ ಹೆಸರು  ಈ ಹುದ್ದೆಗೆ ಕೇಳಿ ಬರುತ್ತಿದೆ.

ಪಿ. ಮಣಿವಣ್ಣನ್ ಅವರು ಹಾಲಿ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮಹೇಶ್ವರ ರಾವ್ ಅವರು ಬೆಂಗಳೂರು ಮಹಾನಗರ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಮಣಿವಣ್ಣನ್ ಅವರು ಉತ್ತಮ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಅತಿಕ್ರಮಣಗಳನ್ನು ತೆರವುಗೊಳಿಸಿದ್ದಕ್ಕಾಗಿ ಅವರು ‘ಡೆಮಾಲಿಷನ್ ಮ್ಯಾನ್’ ಎಂಬ ಬಿರುದನ್ನು ಗಳಿಸಿದರು. ಮಣಿವಣ್ಣನ್  ದಶಕಗಳ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಅವಧಿಯಲ್ಲೇ ಅವರು ಬೆಂಗಳೂರು ನಗರ ಆಡಳಿತದ ಬಗ್ಗೆ ಹಾಗೂ ನಗರದ ಹೆಚ್ಚಿನ ಭಾಗಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಆಧ್ಯತೆ ನೀಡಿದ್ದರು. ಈ ಎಲ್ಲಾ ಕಾರಣಗಳಿಂದ ಪಿ. ಮಣಿವಣ್ಣನ್ ಅವರನ್ನು ಅಪೇಕ್ಷಿತ ಹುದ್ದೆಗೆ (ಬಿಬಿಎಂಪಿ) ಆಯ್ಕೆ ಮಾಡಬಹುದು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಮಹೇಶ್ವರ ರಾವ್ ಅವರು 2018ರಲ್ಲಿ ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಅವರು ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಅವರು ಕಾರ್ಮಿಕ ಇಲಾಖೆಯಲ್ಲಿದ್ದರು. ಅವರು ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಮಂಡ್ಯ, ಮಂಗಳೂರು, ಬೆಳಗಾವಿ ಮತ್ತು ಹಾಸನ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈ ಆಯ್ಕೆ ಕಗ್ಗಂಟಾಗಿ ನೂತನ ಮುಖ್ಯಸ್ಥರ  ನೇಮಕ ವಿಳಂಬವಾದಲ್ಲಿ,  ಬಿಬಿಎಂಪಿಯ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರನ್ನೇ  ಉಸ್ತುವಾರಿ ಮುಖ್ಯ ಆಯುಕ್ತರನ್ನಾಗಿ ನೇಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

key words: BBMP, Manivannan, Maheshwara Rao, chief commissioners.

SUMMARY:

BBMP: The names of Manivannan and Maheswara Rao are in the forefront of the race for chief commissioners.