ಬೆಂಗಳೂರು:ಆ-11: ಬಿಬಿಎಂಪಿ ಅಧಿಕಾರಿಗಳ ಟಿಡಿಆರ್ ಹಗರಣ ಬಯಲಿಗೆಳೆದು, ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಅದಕ್ಕಾಗಿಯೇ ಮೇಯರ್ ಸೇರಿ ಇನ್ನಿತರರು ಟಿಡಿಆರ್ ನೀಡಲಾದ ಜಾಗಗಳ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಟಿಡಿಆರ್ ನೀಡುವಲ್ಲಿನ ಅಕ್ರಮ ಮತ್ತು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾಡಿರುವ ಆರೋಪಗಳ ಸಂಬಂಧ ಬಿಬಿಎಂಪಿಯಿಂದ ನೀಡಲಾದ ಟಿಡಿಆರ್ಗಳ ಕುರಿತು ತನಿಖೆಗೆ ಖುದ್ದು ಮೇಯರ್ ಗಂಗಾಂಬಿಕೆ ಮುಂದಾಗಿದ್ದಾರೆ. ಅದಕ್ಕಾಗಿಯೇ ಕಳೆದ ಎರಡ್ಮೂರು ದಿನಗಳಿಂದ ಮೇಯರ್, ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಜತೆಗೂಡಿ ಟಿಡಿಆರ್ ನೀಡಲಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಟಿಡಿಆರ್ ನೀಡಿರುವ ಕುರಿತಂತೆ ಬಹಳಷ್ಟು ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಜಾಗ ವಶ ಪಡೆಯದೆ ಅಕ್ರಮ: ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ವಶಕ್ಕೆ ಪಡೆಯಲಾಗುವ ಖಾಸಗಿ ಭೂಮಿಗೆ ಪರಿಹಾರ ನೀಡಲಾಗುತ್ತದೆ. ಮೊದಲಿಗೆ ಜಾಗದ ಮಾಲೀಕರಿಗೆ ಟಿಡಿಆರ್ ರೂಪದಲ್ಲಿ ಪರಿಹಾರ ನೀಡಲಾಗುತ್ತದೆ. ಅದಕ್ಕೊಪ್ಪದಿದ್ದಾಗ ಮಾತ್ರ ಹಣದ ರೂಪದಲ್ಲಿ ಪರಿಹಾರ ನೀಡಲಾಗುತ್ತದೆ. ಹೀಗೆ ಬಿಬಿಎಂಪಿ ಕೇಂದ್ರ ಕಚೇರಿಯಿಂದ ನೀಡಲಾದ ಟಿಡಿಆರ್ಗೆ ಸಂಬಂಧಿಸಿದಂತೆ ಹೆಚ್ಚು ಅಕ್ರಮಗಳು ನಡೆದಿರುವುದು ಪತ್ತೆಯಾಗುತ್ತಿದೆ. ಮೇಯರ್ ನೇತೃತ್ವದ ತಂಡ ನಡೆಸಿರುವ ಪರಿಶೀಲನೆಯಂತೆ ಕೆ.ಆರ್.ಪುರ, ಮಹದೇವಪುರಗಳಲ್ಲಿ ಟಿಡಿಆರ್ ನೀಡಲಾಗಿದೆ, ಆನಂತರ ಜಾಗವನ್ನು ವಶಕ್ಕೆ ಪಡೆದಿಲ್ಲ. ಹೀಗಾಗಿ ಬಿಬಿಎಂಪಿಗೆ ಸೇರಬೇಕಾದ ಜಾಗ ಖಾಸಗಿಯವರ ಪಾಲಾಗಿದೆ.
ಅಪಾರ್ಟ್ವೆುಂಟ್ ರಸ್ತೆಗೆ ಟಿಡಿಆರ್: ಬೊಮ್ಮನಹಳ್ಳಿಯಲ್ಲಿ ಖಾಸಗಿ ಸಂಸ್ಥೆಯ ಅಪಾರ್ಟ್ ಮೆಂಟ್ಗೆ ಬಿಬಿಎಂಪಿಯಿಂದ ರಸ್ತೆ ಸಂಪರ್ಕ ಕಲ್ಪಿಸುವಲ್ಲಿಯೂ ಟಿಡಿಆರ್ ಅಕ್ರಮ ನಡೆದಿದೆ. ರಸ್ತೆ ನಿರ್ವಿುಸಲಾಗಿರುವ ಜಾಗ ಅದೇ ಅಪಾರ್ಟ್ವೆುಂಟ್ನ ಮಾಲೀಕರಿಗೆ ಸೇರಿದ್ದಾಗಿದೆ. ಅದನ್ನು ಪರಿಶೀಲಿಸದ ಬಿಬಿಎಂಪಿ ಅಧಿಕಾರಿಗಳು, ಅಪಾರ್ಟ್ವೆುಂಟ್ ಮಾಲೀಕರಿಗೆ ಟಿಡಿಆರ್ ನೀಡಿ, ಅವರ ಜಾಗವನ್ನು ಪಡೆದು, ಅವರಿಗೇ ರಸ್ತೆ ನಿರ್ವಿುಸಿಕೊಟ್ಟಿದ್ದಾರೆ.
700ಕ್ಕೂ ಹೆಚ್ಚು ಪ್ರಕರಣಗಳು: ಕಳೆದೆರಡು ದಿನಗಳಿಂದ ಕೆಲ ಪ್ರದೇಶಗಳ ಪರಿಶೀಲನೆಯನ್ನಷ್ಟೇ ಮಾಡಲಾಗಿದೆ. ಅದರಲ್ಲಿಯೇ 50ಕ್ಕೂ ಹೆಚ್ಚು ಟಿಡಿಆರ್ ಅಕ್ರಮ ಕಂಡುಬಂದಿದೆ. ಮಾಹಿತಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 700ಕ್ಕೂ ಹೆಚ್ಚು ಕಡೆ ಟಿಡಿಆರ್ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ.
ಮೇಯರ್ಗೆ ಮಾಹಿತಿ ನೀಡದ ಅಧಿಕಾರಿಗಳು
ಟಿಡಿಆರ್ ಅಕ್ರಮಗಳ ಕುರಿತಂತೆ ಬಂದಿರುವ ದೂರುಗಳನ್ನಾಧರಿಸಿ ಮೇಯರ್ ನಡೆಸುತ್ತಿರುವ ಸ್ಥಳಪರಿಶೀಲನೆ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ನೀಡುವಂತೆ ಸೂಚಿಸುತ್ತಿದ್ದಾರೆ. ಆದರೆ, ಸ್ಥಳೀಯ ಅಧಿಕಾರಿಗಳು ಕೇಂದ್ರ ಕಚೇರಿಯಿಂದ ಟಿಡಿಆರ್ ನೀಡಲಾಗಿದೆ. ಹೀಗಾಗಿ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಅದೇರೀತಿ ಕೇಂದ್ರ ಕಚೇರಿಯಲ್ಲಿ ಕೇಳಿದರೆ, ಮಾಹಿತಿಯಾಗಲಿ, ದಾಖಲೆಗಳಾಗಲಿ ನೀಡುತ್ತಿಲ್ಲ. ಹೀಗಾಗಿ ಮೇಯರ್ ತನಿಖೆಯು ಇನ್ನಷ್ಟು ಜಟಿಲವಾಗುತ್ತಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಟಿಡಿಆರ್ ಅಕ್ರಮಕ್ಕೆ ಸಂಬಂಧಿಸಿದಂತೆ 700ಕ್ಕೂ ಹೆಚ್ಚು ಪ್ರಕರಣಗಳಿವೆ. ಅವೆಲ್ಲವುಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಜತೆಗೆ, ಟಿಡಿಆರ್ ದಾಖಲೆಗಳು ನಾಶವಾಗುವ ಸಾಧ್ಯತೆಗಳಿದ್ದು, ಅವುಗಳನ್ನೆಲ್ಲ ಸ್ಕಾ್ಯನ್ ಮಾಡಿ ಒಂದು ಕಡೆ ಶೇಖರಿಸಿಡಬೇಕು.
| ಪದ್ಮನಾಭರೆಡ್ಡಿ, ಬಿಬಿಎಂಪಿ ಪ್ರತಿಪಕ್ಷ ನಾಯಕ
ಟಿಡಿಆರ್ ಅಕ್ರಮ ಸಂಬಂಧ ವಿರೋಧ ಪಕ್ಷದಿಂದ ಬಹಳಷ್ಟು ದೂರುಗಳು ಬಂದಿದ್ದವು. ಹೀಗಾಗಿ ಟಿಡಿಆರ್ ನೀಡಲಾದ ಜಾಗಗಳ ಪರಿಶೀಲನೆ ನಡೆಸಿ, ಅಲ್ಲಿ ಕೈಗೊಳ್ಳಲಾಗಿ ರುವ ಕಾಮಗಾರಿಯನ್ನು ಪರಿಶೀಲಿಸಲಾಗುತ್ತಿದೆ.
| ಗಂಗಾಂಬಿಕೆ, ಮೇಯರ್
ನಾಡಿದ್ದು ಸಭೆ
ಸ್ಥಳ ಪರಿಶೀಲನೆ ವೇಳೆ ಸಮರ್ಪಕ ಮಾಹಿತಿ ದೊರೆಯದ ಕಾರಣ ಮೇಯರ್, ಭೂಸ್ವಾಧೀನ ವಿಭಾಗದ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಲಿದ್ದಾರೆ. ಈ ವೇಳೆ ಟಿಡಿಆರ್ ನೀಡಿರುವ ಮಾಹಿತಿ, ಅದರಲ್ಲಿ ಎಷ್ಟು ಕಡೆ ಭೂಮಿ ವಶಕ್ಕೆ ಪಡೆಯಲಾಗಿದೆ? ಯಾವೆಲ್ಲ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ? ಎಂಬ ಮಾಹಿತಿ ನೀಡಲು ಸೂಚಿಸಲಾಗುತ್ತದೆ.
ಕೃಪೆ:ವಿಜಯವಾಣಿ