ಬೆಂಗಳೂರು, ಆಗಸ್ಟ್ 05, 2019 (www.justkannada.in): ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಬೇಕಾದ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಅವರೇ ಪ್ಲಾಸ್ಟಿಕ್ ಬಳಸಿ ದಂಡ ತೆತ್ತಿದ್ದಾರೆ!
ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿರುವುದನ್ನು ಮರೆತು ಪ್ಲಾಸ್ಟಿಕ್ ಬಳಸಿ ಪ್ಯಾಕ್ ಮಾಡಿದ ಹಣ್ಣಿನ ಬುಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನೀಡಿದ ಮೇಯರ್ ಗಂಗಾಂಬಿಕೆ ಅವರಿಗೆ ಬಿಬಿಎಂಪಿಯಿಂದಲೇ 500 ರೂ. ದಂಡ ವಿಧಿಸಲಾಗಿದೆ.
ಜು.30 ರಂದು ನೂತನ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದ ಮೇಯರ್ ಗಂಗಾಂಬಿಕೆ ಒಣಹಣ್ಣಿನ ಬುಟ್ಟಿಯನ್ನು ಉಡುಗೊರೆಯಾಗಿ ನೀಡಿ ಪೋಟೊ ತೆಗೆಸಿಕೊಂಡಿದ್ದರು. ಇದೇ ಪೋಟೊಗೆ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಕೇಳಿಬಂದಿತ್ತು. ಪ್ಲಾಸ್ಟಿಕ್ ಬಳಕೆ ನಿಷೇಧ ಇದ್ದರೂ ಮೇಯರ್ ಅವರು ಪ್ಲಾಸ್ಟಿಕ್‌ನಿಂದ ಸುತ್ತಿದ್ದ ಒಣಹಣ್ಣಿನ ಬುಟ್ಟಿಯನ್ನು ನೀಡಿರುವುದು ಟೀಕೆಗೊಳಗಾಗಿತ್ತು.
ಈ ಬೆಳವಣಿಗೆ ಬಳಿಕ ಮೇಯರ್ ಅವರಿಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು 500 ರೂ. ದಂಡ ವಿಧಿಸಿ ರಶೀದಿ ಕೊಟ್ಟಿದ್ದಾರೆ.