ಬೆಂಗಳೂರು, ಫೆ10, 2022 : (www.justkannada.in news ) ಇಲ್ಲಿನ ರಾಜರಾಜೇಶ್ವರಿನಗರ (ಆರ್.ಆರ್. ನಗರ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಯ ನವ ನಗರೋತ್ಥಾನ ಯೋಜನೆಯಡಿ ಮಂಜೂರಾದ ಕಾಮಗಾರಿಗಳನ್ನು ನಿರ್ವಹಿಸದೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್) ನಕಲಿ ಬಿಲ್ ಪಾವತಿಸಿ ರಾಜ್ಯದ ಬೊಕ್ಕಸಕ್ಕೆ 118.26 ಕೋಟಿ ರೂ. ಗಳ ನಷ್ಟ ಉಂಟು ಮಾಡಿರುವುದು ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿದೆ.
‘ಆರ್.ಆರ್. ನಗರ ಕ್ಷೇತ್ರದಲ್ಲಿ 2020ರ ಜನವರಿಯಲ್ಲಿ 126 ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸದೆ 250 ಕೋಟಿ ರೂ. ಲಪಟಾಯಿಸಿ ಭ್ರಷ್ಟಚಾರ ಎಸಗಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು, ದಾಖಲೆಗಳ ಸಹಿತ 2020ರ ಸೆಪ್ಟೆಂಬರ್ ನಲ್ಲಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
‘ಈ ಪ್ರಕರಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ), ತಪ್ಪಿತಸ್ಥ ಎಂಜಿನಿಯರ್‌ಗಳನ್ನು ಬಂಧಿಸಿ ವಿಚಾರಣೆ ನಡೆಸಬೇಕು’ ಎಂದು ವಿನಂತಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ (ಜ.27ರಂದು ನಿವೃತ್ತರಾಗಿದ್ದಾರೆ), 60 ಪುಟಗಳ ವರದಿಯನ್ನು ಜ.24ರಂದು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
‘ಒಟ್ಟು ಕಾಮಗಾರಿಗಳ ಪೈಕಿ 114 ಕಾಮಗಾರಿಗಳ ಅನುಷ್ಠಾನದಲ್ಲಿ ಭಾರಿ ಪ್ರಮಾಣದ ಲೋಪಗಳನ್ನು ಪತ್ತೆ ಹಚ್ಚಲಾಗಿದೆ. ಕಾಮಗಾರಿ ಅನುಷ್ಠಾನಗೊಳಿಸದೇ ಇದ್ದರೂ ಕೆಆರ್‌ಐಡಿಎಲ್‌ಗೆ 118.25 ಕೋಟಿ ರೂ. ಹೆಚ್ಚುವರಿಯಾಗಿ ಪಾವತಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ” ಎಂದು ವರದಿ ಉಲ್ಲೇಖಿಸಿದೆ.
ಕೆಲವು ಕಾಮಗಾರಿಗಳ ಅನುಷ್ಠಾನವೇ ಆಗಿಲ್ಲ. ಕಾಮಗಾರಿಗಳಲ್ಲಿ ಹೆಚ್ಚುವರಿ ಅಳತೆ ನಮೂದಿಸಲಾಗಿದೆ, ಕೆಲವು ಕಳಪೆ ಗುಣಮಟ್ಟದಿಂದ ಕೂಡಿದ್ದು, ಇನ್ನೂ ಕೆಲವು ಕಾಮಗಾರಿಗಳನ್ನು ಟೆಂಡರ್‌ನಲ್ಲಿ ಅಥವಾ ನಿರ್ದಿಷ್ಟಪಡಿಸಿದ ಅಂಶಗಳಂತೆ ಅನುಷ್ಠಾನಗೊಳಿಸದಿರುವ ಬಗ್ಗೆ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಪ್ರತಿ ಕಾಮಗಾರಿಯಲ್ಲಿ ಆಗಿರುವ ಬಹುಕೋಟಿ ಹಣ ದುರುಪಯೋಗದ ಬಗ್ಗೆಯೂ ವಿವರಿಸಲಾಗಿದೆ.
“ಆಪಾದಿತ ನೌಕರರು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕೆಲಸ ನಿರ್ವಹಿಸದೇ ಇದ್ದರೂ ಹಣ ಪಾವತಿ ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 14-ಎ ಅಡಿ ಇಲಾಖಾ ವಿಚಾರಣೆಗೆ ಅನುಮತಿ ನೀಡಬೇಕು’ ಎಂದು ಸೂಚಿಸಿದ್ದಾರೆ.
ವರದಿ ತಲುಪಿದ ಎರಡು ತಿಂಗಳ ಒಳಗೆ ಎಲ್ಲ ಆಪಾದಿತರ ಮೇಲೆ ತೆಗೆದುಕೊಂಡ ಕ್ರಮ ಅಥವಾ ತೆಗೆದುಕೊಳ್ಳಲು ಉದ್ದೇಶಿಸಿದ ಕ್ರಮಗಳ ಬಗ್ಗೆ ಲೋಕಾಯುಕ್ತಕ್ಕೆ ಮಾಹಿತಿ ನೀಡಬೇಕು ಎಂದೂ ತನಿಖಾ ವರದಿಯಲ್ಲಿ ಆದೇಶಿಸಿದ್ದಾರೆ.
ಕೃಪೆ : ಪ್ರಜಾವಾಣಿ
key words : bbmp-scam-lokayuktha-report