ಬೆಂಗಳೂರು,ಜೂನ್,10,2022(www.justkannada.in): ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಸಂಬಂಧ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನ ಸಂಪುಟದಿಂದ ಕೈಬಿಟ್ಟು ರೋಹಿತ್ ಚಕ್ರತೀರ್ಥನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿರುವುದಿಷ್ಟು….
ಸ್ಪಷ್ಟವಾದ ಸರ್ಕಾರಿ ಆದೇಶವಿಲ್ಲದೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಒಬ್ಬ ಕಿಡಿಗೇಡಿ ಟ್ರೋಲರ್ ನಿಗೆ ಅವಕಾಶ ನೀಡಿ, ಈಗ ಆತ ಮಾಡಿಟ್ಟಿರುವ ಕೊಳಕುಗಳನ್ನೆಲ್ಲ ತಲೆಮೇಲೆ ಇಟ್ಟುಕೊಂಡು ಸಮರ್ಥಿಸುತ್ತಿರುವ ಬೇಜವಾಬ್ದಾರಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಸಂಪುಟದಿಂದ ವಜಾಮಾಡಬೇಕು ಮತ್ತು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಶೈಕ್ಷಣಿಕ, ಸಾಮಾಜಿಕ, ಸಾಹಿತ್ತಿಕ ಕ್ಷೇತ್ರವನ್ನು ಕಲುಷಿತಗೊಳಿಸಿರುವ ಪಠ್ಯಪುಸ್ತಕ ಪರಿಷ್ಕರಣೆಯ ಅದ್ವಾನಕ್ಕೆ ಕಾರಣಕರ್ತರಾಗಿರುವ ಇಂತಹ ಬೇಜವಾಬ್ದಾರಿ ಶಿಕ್ಷಣ ಸಚಿವರನ್ನು ಮುಖ್ಯಮಂತ್ರಿಗಳು ಇನ್ನೂ ಸಮರ್ಥಿಸಿಕೊಳ್ಳಲು ಹೊರಡುವುದಾದರೆ ಅವರೇ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಪಠ್ಯಪುಸ್ತಕ ಪರಿಷ್ಕರಣೆಯಂತಹ ಅತ್ಯಂತ ಜವಾಬ್ದಾರಿಯುತ ಕೆಲಸವನ್ನು ಸ್ವಭಾವತ: ವಿಕೃತನಾದ ಒಬ್ಬ ಯಕಶ್ಚಿತ್ ಟ್ರೋಲರ್ ನಿಗೆ ಒಪ್ಪಿಸಿ, ಅವನು ಮಾಡುವ ಅವಾಂತರಗಳಿಗೆ ಅವನೇ ಹೊಣೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಿ ಈಗ ಆತ ಮಾಡಿಟ್ಟಿರುವ ರಾಡಿಗಳನ್ನೆಲ್ಲ ಸಮರ್ಥಿಸುತ್ತಾ ಕೂತಿರುವ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಇದೆ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಗೆ ಅವಸರದಲ್ಲಿ ಮೌಖಿಕ ಸೂಚನೆ ನೀಡಿ ಘಟನೋತ್ತರ ಅನುಮತಿ ನೀಡಲು ಇದೇನು 40% ಕಮಿಷನ್ ಬಾಚುವ ರಸ್ತೆ ಕಾಮಗಾರಿಯೇ? ಇಂತಹ ಮೌಖಿಕ ಸೂಚನೆಯಲ್ಲಿ ಕೆಲಸಮಾಡಿಸಿ ಅಮಾಯಕ ಗುತ್ತಿಗೆದಾರನನ್ನು ಬಲಿ ಪಡೆದಿರುವ ಈ ಸರ್ಕಾರ ಈಗ ಎಳೆಯ ಮಕ್ಕಳ ಭವಿಷ್ಯವನ್ನೇ ಬಲಿಕೊಡಲು ಹೊರಟಿದೆ.
ಪಠ್ಯಪುಸ್ತಕ ಸಮಿತಿಯ ವಿಕೃತ ಅಧ್ಯಕ್ಷ ಮತ್ತು ಅವನ ಗ್ಯಾಂಗ್, ಜ್ಞಾನದೀವಿಗೆಗಳಾದ ಬಸವಣ್ಣ, ಅಂಬೇಡ್ಕರ್, ಜ್ಯೋತಿಬಾ ಪುಲೆ, ನಾರಾಯಣ ಗುರು, ಕೆಂಪೇಗೌಡ, ಕುವೆಂಪು ಮಾತ್ರವಲ್ಲ ಮಹರ್ಷಿ ವಾಲ್ಮೀಕಿಯವರನ್ನೂ ಬಿಡದೆ ಅವಮಾನಿಸಿದೆ. ಇಂತಹ ಜ್ಞಾನವಿರೋಧಿ ಮತ್ತು ಮನುಷ್ಯ ವಿರೋಧಿ ಪಠ್ಯವನ್ನು ತರಗತಿಗಳಲ್ಲಿ ಬೋಧನೆಗೆ ಅವಕಾಶ ನೀಡಿದರೆ ಅದು ನಾಡಿಗೆ ಬಗೆವ ದ್ರೋಹವಾಗುತ್ತದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಉಳಿದಿರುವುದೊಂದೇ ದಾರಿ. ಮೊದಲು ಶಿಕ್ಷಣ ಸಚಿವರನ್ನು ವಜಾಮಾಡಿ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷನನ್ನು ಬಂಧಿಸಿ ಸರ್ಕಾರಕ್ಕೆ ಆತನಿಂದ ಆಗಿರುವ ನಷ್ಟವನ್ನು ಕಕ್ಕಿಸಿ ಮತ್ತು ಬರಗೂರು ರಾಮಚಂದ್ರಪ್ಪ ಸಮಿತಿಯ ಶಿಫಾರಸಿನ ಹಳೆಯ ಪಠ್ಯವನ್ನೇ ಈ ಶೈಕ್ಷಣಿಕ ವರ್ಷಕ್ಕೆ ಮುಂದುವರಿಸಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಇಷ್ಟೆಲ್ಲ ತಪರಾಕಿಗಳ ನಂತರವೂ ಮುಖ್ಯಮಂತ್ರಿಗಳು ಸಂಘ ಪರಿವಾರ ಒಡ್ಡಿರುವ ನೇಣಿಗೆ ಕೊರಳೊಡ್ಡುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ. ಪರಿಷ್ಕೃತ ಪಠ್ಯಪುಸ್ತಕಗಳ ವಿರುದ್ಧದ ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ಪಕ್ಷ ಕಟಿಬದ್ದವಾಗಿದೆ. ನಮ್ಮ ಕಾರ್ಯಕರ್ತರು ಈ ಹೋರಾಟವನ್ನು ಜಿಲ್ಲೆ, ತಾಲೂಕು, ಹೋಬಳಿ ಮಟ್ಟಕ್ಕೂ ಕೊಂಡೊಯ್ಯಲಿದ್ದಾರೆ. ಆಗ ಮುಖ್ಯಮಂತ್ರಿಗಳ ತಲೆದಂಡ ಅವರ ಪಕ್ಷಕ್ಕೂ ಅನಿವಾರ್ಯವಾಗಬಹುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
Key words: BC Nagesh- arrest-Rohit Chakratheertha-Siddaramaiah -demand
ENGLISH SUMMARY…
Siddaramaiah demands suspension of Education Minister B.C. Nagesh from cabinet and arrest Rohith Chakratheerta
Bengaluru, June 10, 2022 (www.justkannada.in): Leader of the opposition in the legislative assembly Siddaramaiah has demanded the State Government suspend Education Minister B.C. Nagesh from the cabinet, and arrest Rohith Chakratheerta over the textbook revision row.
In a press statement, the former Chief Minister stated, “I demand the Chief Minister Basavaraj Bommai expel Education Minister B.C. Nagesh for his irresponsible behavior and defending the mistakes taken place in the textbook revision by a common troller Rohith Chakratheertha. The revision of textbooks has also been made without any clear government orders. Hence, Rohith should be arrested and legal action should be initiated against him.”
Keywords: Siddaramaiah/ B.C. Nagesh/ Rohith Chakratheerta/ textbook revision