ಬೆಂಗಳೂರು, ಮೇ 22, 2020 : (www.justkannada.in news) : ನಾಗರೀಕ ಸೌಲಭ್ಯ ನಿವೇಶನ ( ಸಿಎ ಸೈಟ್ ) ಪಡೆದುಕೊಂಡು ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರು ಶುಲ್ಕ ಪಾವತಿಸಿ ಮರು ನವೀಕರಣ ಮಾಡಿಸಿಕೊಳ್ಳದ ಸಂಸ್ಥೆಗಳಿಗೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಂತಿಮ ನೋಟಿಸ್ ನೀಡಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಬಿಡಿಎ ವತಿಯಿಂದ ಸಿಎ ಸೈಟ್ ಪಡೆದುಕೊಂಡಿರುವ ಹಲವಾರು ಸಂಘ, ಸಂಸ್ಥೆಗಳು ಒಪ್ಪಂದ ನವೀಕರಣ ಮಾಡಿಸಿಕೊಳ್ಳದೆ ಹಾಗೆ ಇದ್ದವು. ಇದೀಗ ಬಿಡಿಎ ಆಯುಕ್ತರು ಇಂಥ ಕಡತಗಳಿಗೆ ಮರುಜೀವ ನೀಡಿದ್ದು, ಯಾರ್ಯಾರು ಸಿಎ ನಿವೇಶನ ಪಡೆದು, ನಿಗಧಿತ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರು ಮರು ನವೀಕರಣ ಮಾಡದೆ ಹಾಗೆಯೇ ಇರುವರು ಅಂಥವರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಈ ಸಂಘ ಸಂಸ್ಥೆಗಳಿಂದ ಬಿಡಿಎ ಗೆ ಕೋಟಿಗಟ್ಟಲೇ ಹಣ ಪಾವತಿಯಾಗಬೇಕಾಗಿದೆ. ಗುತ್ತಿಗೆ ಅವಧಿ ಪೂರ್ಣಗೊಂಡು ಕೆಲ ವರ್ಷಗಳೇ ಕಳೆದರು ಸಹ ಶುಲ್ಕ ಪಾವತಿಸಿ ನವೀಕರಣ ಮಾಡಿಸಿಕೊಳ್ಳದೆ ಕಡೆಗಣಿಸಿವೆ. ಈ ಸಂಬಂಧದ ಇಲಾಖೆ ಸೂಚನೆಗೂ ಬೆಲೆ ನೀಡಿಲ್ಲ. ಇದರಿಂದ ಈಗ ಈ ಸಂಸ್ಥೆಗಳಿಗೆ ಬಿಡಿಎ ಅಂತಿಮ ನೋಟಿಸ್ ಜಾರಿಗೊಳಿಸಿ, 15 ದಿನಗಳ ಕಾಲವಕಾಶ ನೀಡಿದೆ.
ಕರೋನ ಸಂಕಷ್ಠದ ಸಮಯದಲ್ಲಿ ಸಿಎ ಸೈಟ್ ಗುತ್ತಿಗೆಯ ಮರು ನವೀಕರಣ ಶುಲ್ಕ ಬಿಡಿಎಗೆ ಆರ್ಥಿಕವಾಗಿ ದೊಡ್ಡಮಟ್ಟದಲ್ಲೇ ಸಹಕಾರಿಯಾಗಲಿದೆ. ಇದನ್ನು ಮನಗಂಡೆ ಬಿಡಿಎ ಆಯುಕ್ತರು ಇದೀಗ ಚಾಟಿ ಬೀಸಿದ್ದಾರೆ. ಒಂದು ವೇಳೆ ಹಣ ಪಾವತಿಸಲು ವಿಫಲವಾದರೇ, ಒಪ್ಪಂದದ ಪ್ರಕಾರ ಯಥಾ ಸ್ಥಿತಿಯಲ್ಲೇ ಕಟ್ಟಡವನ್ನು ಬಿಡಿಎ ಸ್ವಾಧೀನಕ್ಕೆ ಪಡೆಯಲಿದೆ ಎಂದು ಅಂತಿಮ ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.
ಯಾವ್ಯಾವ ಸಂಘ- ಸಂಸ್ಥೆಗಳಿವೆ :
ರಾಜ್ಯ ಒಕ್ಕಲಿಗರ ಸಂಘ, ಪೀಪಲ್ ಎಜುಕೇಷನ್ ಸೊಸೈಟಿ, ಗೋಮಟೇಶ ವಿದ್ಯಾಪೀಠ, ಆಕ್ಸ್ ಫರ್ಡ್ ಇಂಗ್ಲಿಷ್ ಮತ್ತು ಕನ್ನಡ ಶಾಲೆ, ದಂಡಪಾಣಿ ಜ್ಞಾನ ಮಂದಿರ, ಶ್ರೀ ಜಗದ್ಗುರು ರೇಣುಕಾಚಾರ್ಯ ಎಜುಕೇಷನ್ ಸೊಸೈಟಿ, ಕಾಸ್ಮೋಪಾಲಿಟನ್ ಎಜುಕೇಷನ್ ಟ್ರಸ್ಟ್, ಜೆಎಸ್ಎಸ್ ಮಹಾವಿದ್ಯಾಪೀಠ, ವಿದ್ಯಾವರ್ಧಕ ಸಂಘ, ಅಖಿಲ ಕರ್ನಾಟಕ ಶ್ರೀ ಗುರು ವೀರಶೈವ ಮಡಿವಾಳರ ಮಹಾಜನ ಸಂಘ, ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿ, ಲಾರ್ಡ್ ಶ್ರೀ ಕೃಷ್ಣ ಇಂಟರ್ ನ್ಯಾಷನಲ್ ಎಜುಕೇಷನ್ ಟ್ರಸ್ಟ್ ಸೇರಿದಂತೆ 34 ಸಂಘ-ಸಂಸ್ಥೆಗಳಿಗೆ ಬಿಡಿಎ ಅಂತಿಮ ನೋಟಿಸ್ ಜಾರಿಗೊಳಿಸಿದೆ.
key words : BDA-CA.Site-renewal-fine-amount-has-to-pay-Bangalore