ಬೆಂಗಳೂರು, ಜನವರಿ,5,2022(www.justkannada.in): ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗುತ್ತಿರುವ ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಗಳು ಅತ್ಯಂತ ವೇಗವಾಗಿ ಸ್ಪಂದಿಸುವ ಮೂಲಕ ಈ ಉತ್ತಮ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ಕರೆ ನೀಡಿದರು.
ತಮ್ಮ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಅವಶ್ಯವಿರುವ ಅಂಶಗಳ ಕುರಿತು ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನಕ್ಷೆ ಮಂಜೂರಾತಿ, ಕಟ್ಟಡ, ಕಾನೂನು ತೊಡಕುಗಳಿಗೆ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿ, ಈ ಯೋಜನೆಯಲ್ಲಿ ಬಿಡಿಎ ಪಾತ್ರ ಮಹತ್ವದ್ದು ಎಂದು ಹೇಳಿದರು.
ನಂತರ ಬೆಂಗಳೂರು ನಗರದಲ್ಲಿರುವ ಸ್ಲಂ ಜಾಗಗಳ ಕುರಿತಂತೆ ಸಹ ಚರ್ಚಿಸಿ ಬಿಡಿಎ ಹಾಗೂ ಬಿಬಿಎಮ್‍ಪಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಪೂರ್ಣಗೊಳಿಸುವುದು ಹಾಗೂ ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಶೀಘ್ರದಲ್ಲಿ ಪರಿಹರಿಸಬೇಕು ಎಂದು ಹೇಳಿದರು.
ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರಾಧಿಕಾರ ಅನುಮೋದಿಸಿದ ಅಭಿವೃದ್ಧಿ ಯೋಜನೆಗಳ ವಿವರಗಳ ಕುರಿತು ಚರ್ಚಿಸಿದ ಸಚಿವ ವಿ.ಸೋಮಣ್ಣ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾಧಿಕಾರ ಹಮ್ಮಿಕೊಂಡಿರುವ ಪ್ರತಿ ಯೋಜನೆಗಳ ಕುರಿತು ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಅವರು ಸಚಿವರು ಬಡವರಿಗಾಗಿ ಹಮ್ಮಿಕೊಂಡಿರುವ ಈ ಮಹತ್ವದ ಕಾರ್ಯದಲ್ಲಿ ಬಿಡಿಎ ಸಂಪೂರ್ಣ ಬೆಂಬಲ ನೀಡಲಿದೆ. ಅವಶ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು, ಇಂದು ಸಚಿವರು ಗಮನ ಸೆಳೆದಿರುವ ಅಂಶಗಳ ಕುರಿತು ಶೀಘ್ರದಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್, ಬಿಬಿಎಮ್‍ಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತ, ಬಿಡಿಎ ಆಯುಕ್ತರಾದ ಎಮ್.ಬಿ.ರಾಜೇಶ್ ಗೌಡ, ಇಂಜಿನಿಯರಿಂಗ್ ಸದಸ್ಯರಾದ ಶಾಂತರಾಮಣ್ಣ, ಆರ್ಥಿಕ ಸದಸ್ಯರಾದ ರಾಮ್‍ಪ್ರಸಾದ್, ನಗರ ಯೋಜಕರಾದ ಧನಂಜಯ ರೆಡ್ಡಿ ಸೇರಿದಂತೆ ರಾಜೀವ್‍ಗಾಂಧಿ ವಸತಿ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: BDA – vital -role -building -1 lakh -houses – Bangalore – Minister -V Somanna