ಬೆಳಗಾವಿ:ಮೇ-28: ಕರ್ನಾಟಕದಲ್ಲಿ ಇದುವರೆಗೂ ಕಾಂಗ್ರೆಸ್ ತನ್ನ ಪಾರುಪತ್ಯ ಸ್ಥಾಪಿಸಿತ್ತು. ಆದರೆ, ಈ ಬಾರಿಗೆ ಕಾಂಗ್ರೆಸ್ಗೆ ನೆಲೆ ಇಲ್ಲದಂತೆ ಮಾಡಿ, ಬಿಜೆಪಿ ಬಹುಮತ ಸಾಧಿಸಿದೆ. ಇದು ಬಿಜೆಪಿ ಪಾಲಿಗೆ ಅತ್ಯಂತ ಖುಷಿಯ ವಿಚಾರವೇ ಸರಿ. ಆದರೆ ಬಿಜೆಪಿಗೆ ವೋಟ್ ಹಾಕಿದನೆಂಬ ಕಾರಣಕ್ಕಾಗಿ ಯುವಕನೊಬ್ಬನಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿರುವುದು ವಿಪರ್ಯಾಸವೇ ಸರಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಬೆಳವಣಿಗೆಯೂ ಹೌದು.
ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದ ನಿವಾಸಿ ಮಹಾಂತೇಶ ಕುರಾಡೆ ಎಂಬ ಯುವಕನನ್ನು ಗ್ರಾಮದಿಂದ ಬಹಿಷ್ಕರಿಸಲಾಗಿದೆ. ಲೋಕಸಭಾ ಚುಣಾವಣೆಯ ಸಂದರ್ಭದಲ್ಲಿ ಮಹಾಂತೇಶ್ ಸಮುದಾಯದವರು ಕಾಂಗ್ರೆಸ್ಗೆ ಮತ ಹಾಕಿದ್ದರೆ ಈತ ಮಾತ್ರ ಬಿಜೆಪಿಗೆ ಮತ ಹಾಕಿದ್ದಾನೆ. ಸಮುದಾಯದ ಆದೇಶವನ್ನು ಉಲ್ಲಂಘಿಸಿದ ಆರೋಪದಲ್ಲಿ ಈತನನ್ನು ಬಹಿಷ್ಕರಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಮಹಾಂತೇಶ್ ಮತ್ತು ಅವರ ಕುಟುಂಬ ವರ್ಗದವರನ್ನು ಸಮುದಾಯದ ಯಾರು ಮಾತನಾಡಿಸುತ್ತಿಲ್ಲ. ಅವರ ಅಂಗಡಿಯಿಂದ ವಸ್ತುಗಳನ್ನು ಖರೀದಿಗೆ ಕೊಡುತ್ತಿಲ್ಲ. ಅವರೊಂದಿಗೆ ಯಾರೆಂದರೆ ಯಾರೂ ಕೂಡ ವ್ಯವಹರಿಸುತ್ತಿಲ್ಲ ಎಂದು ಸಮುದಾಯದ ಮುಖಂಡರು ತಿಳಿಸಿದ್ದು, ಈ ಬಗ್ಗೆ ಸಮುದಾಯದ ಹಿರಿಯರು ಕಟ್ಟಾಜ್ಞೆ ಹೊರಡಿಸಿರುವುದಾಗಿ ಹೇಳಿದ್ದಾರೆ.
ಈ ವಿಷಯ ಗಮನಕ್ಕೆ ಬರುತ್ತಲೇ ಮಹಾಂತೇಶ್ನನ್ನು ಭೇಟಿಯಾಗಿದ್ದ ಕುಡಚಿ ಶಾಸಕ ಪಿ. ರಾಜೀವ್ ಭೇಟಿಯಾಗಿ ಧೈರ್ಯ ಹೇಳಿ ಬಂದಿದ್ದಾರಂತೆ. ಅಲ್ಲದೆ ಈ ವಿಷಯವಾಗಿ ಆತನ ಬೆನ್ನಿಗೆ ನಿಲ್ಲುವುದಾಗಿ ರಾಜೀವ್ ತಿಳಿಸಿದ್ದಾರೆ.
ಕೃಪೆ:ವಿಜಯವಾಣಿ