ಡಿ.16 ರಂದು ರೈತ ಸಂಘಟನೆಗಳಿಂದ ‘ಬೆಳಗಾವಿ ಚಲೋ’

ಮೈಸೂರು,ಡಿಸೆಂಬರ್,10,2024 (www.justkannada.in): ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ  ಆಗ್ರಹಿಸಿ ಡಿಸೆಂಬರ್ 16 ರಂದು ರೈತ ಸಂಘಟನೆಗಳಿಂದ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ ತಿಳಿಸಿದರು.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ, ಡಿಸೆಂಬರ್ 16 ರಂದು ರಾಜ್ಯದ ಸುಮಾರು 21 ರೈತ ಸಂಘಟನೆಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ರೈತ ಸರ್ಕಲ್ ನಿಂದ ಸುವರ್ಣಸೌಧದ ವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುತ್ತದೆ. ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು ಒಂದು ಲಕ್ಷ ರೈತರು ಭಾಗವಹಿಸಲಿದ್ದಾರೆ. ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯ ಮತ್ತು ಪ್ರತಿ ಟನ್ ಕಬ್ಬಿಗೆ 5500 ರೂ. ನಿಗದಿ ಸೇರಿದಂತೆ ಹಲವು ಹಕ್ಕೊತ್ತಾಯಗಳಿಗೆ  ಆಗ್ರಹಿಸಿ ಈ ಪ್ರತಿಭಟನೆ‌ ಹಮ್ಮಿಕೊಳ್ಳಲಾಗಿದೆ ಎಂದರು.

ಡಿ.15 ರಂದು ಬೆಳಗಾವಿಗೆ ಮೈಸೂರು, ಚಾಮರಾಜನಗರ,ಮಂಡ್ಯ ಕೊಡಗು ಭಾಗದಿಂದ ಸಾವಿರಾರು ಸಂಖ್ಯೆಯ ರೈತರು ಬರಲಿದ್ದಾರೆ. ಒಡೆದಿರುವ ರೈತ ಸಂಘಟನೆಗಳ ಏಕೀಕರಣದ ಮೂಲಕ ಬೃಹತ್ ಚಳವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತಾಪಿ ವರ್ಗ ಈ ಒಂದು ಚಳುವಳಿಯಲ್ಲಿ ಭಾಗವಹಿಸಬೇಕು ಎಂದು ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ ರೈತರಿಗೆ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ವಿದ್ಯಾಸಾಗರ್ ರಾಮೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: Belgaum Chalo, farmer organizations, December 16