ಬೆಂಗಳೂರು:ಜುಲೈ-27:(www.justkannada.in) ಹಲವು ದಿನಗಳ ಹಿಂದೆ ಬೆಳ್ಳಂದೂರು, ಇಬ್ಳೂರು ಜಂಕ್ಷನ್ ಬಳಿ ಸ್ಕೈವಾಕರ್ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಹಲವುಬಾರಿ ಬೇಡಿಕೆಯಿಟ್ಟ ಬೆನ್ನಲ್ಲೇ ಈಗ ಮತ್ತೊಮ್ಮೆ ಈ ಕೂಗು ಜೋರಾಗಿದೆ.
ಹೌದು. ಗುರುವಾರ ಬೆಳ್ಳಂದೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ಅಪಘಾತದ ಬೆನ್ನಲ್ಲೇ ಬೆಳ್ಳಂದೂರು ಜಂಕ್ಷನ್ ಬಳಿ ಪಾದಚಾರಿಗಳಿಗಾಗಿ ಸ್ಕೈವಾಕರ್ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಗುರುವಾರ ಬೆಳಿಗ್ಗೆ ಟೆಂಪೋವೊಂದು ಬೆಳ್ಳಂದೂರು ಜಂಕ್ಷನ್ ಬಳಿ ಮಹಿಳೆಯೊಬ್ಬಳಿಗೆ ಗುದ್ದಿದೆ. ಪಾದಚಾರಿಗಳು, ಪೊಲೀಸರು ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಅಪಘಾತದ ಬಳಿಕ ಸ್ಥಳದಲ್ಲೇ ಟೆಂಪೊ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ ಎಸ್ ಆರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಟೆಂಪೊ ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಬೆಳ್ಳಂದೂರು, ಇಬ್ಳೂರು ಜಂಕ್ಷನ್ ನಲ್ಲಿ ಹಲವಾರು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಹಲವರು ಸಾವನ್ನಪ್ಪಿದ್ದಾರೆ. ಪಾದಚಾರಿಗಳು ಜೀವ ಕೈಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಬೆಳ್ಳಂದೂರು ನಿವಾಸಿಗಳು ಇಲ್ಲಿ ಸ್ಕೈ ವಾಕರ್ ನಿರ್ಮಾಣ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.
ಬೆಳ್ಳಂದೂರು ನಿವಾಸಿಯೊಬ್ಬರು ಹೇಳುವ ಪ್ರಕಾರ, ಇಲ್ಲಿ ಸ್ಕೈವಾಕರ್ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದ್ದು, ಈ ವಾರದಿಂದಲೇ ಕಾಮಗಾರಿ ಕೆಲಸ ಆರಂಭವಾಗಬೇಕಿತ್ತು. ಆದರೆ ವಿಳಂಭವಾಗುತ್ತಿದೆ. ಸಮಯಕ್ಕೆ ಇಲ್ಲಿ ಸ್ಕೈವಾಕರ್ ನಿರ್ಮಾಣವಾಗಿದ್ದರೆ ಇಂದು ಹಲವು ಜೀವಗಳು ಬದುಕಿರುತ್ತಿದ್ದವು ಎಂದು ತಿಳಿಸಿದ್ದಾರೆ.