ಬಳ್ಳಾರಿ, ನವೆಂಬರ್ 26,2020(www.justkannada.in): ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ಅನೌಪಚಾರಿಕ ಒಪ್ಪಿಗೆ ನೀಡಿರುವ ಹಿನ್ನೆಲೆ ಸರ್ಕಾರದ ಈ ನಿರ್ಧಾರವನ್ನ ಖಂಡಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯಿಂದ ಬಂದ್ಗೆ ಕರೆ ನೀಡಲಾಗಿದೆ.
ಬಳ್ಳಾರಿ ಜಿಲ್ಲೆ ವಿಭಜನೆ ಹಾಗೂ ವಿಜಯನಗರ ಜಿಲ್ಲೆ ರಚನೆ ಖಂಡಿಸಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಗೆ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದು, ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಜಯನಗರ ಜಿಲ್ಲೆ ಸ್ಥಾಪನೆ ವಿರೋಧಿಸಿ ಇಂದು ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ್ದು, ಬಳ್ಳಾರಿಯ ರಾಯಲ್ ಸರಗಕಲ್ ಬಳಿ ಹೋರಾಟಗಾರರಿಂದ ಪ್ರತಿಭಟನೆ ನಡೆಸಲಾಯಿತು. ಟೈರ್ ಗೆ ಬೆಂಕಿ ಹಚ್ಚಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಸಿಎಂ ಬಿ.ಎಸ್ ಯಡಿಯೂರಪ್ಪ ಭಾವಚಿತ್ರ ದಹನ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದ ಬಳಿ ಗುರುವಾರ ಬೆಳಿಗ್ಗೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಹಲವು ಮುಖಂಡರು ಟೈಯರ್ ಗೆ ಬೆಂಕಿ ಹಚ್ಚುವ ಮೂಲಕ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದರು.
ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣದ ನಡುವೆ ಬೆಳಿಗ್ಗೆಯಿಂದಲೇ ಬಳ್ಳಾರಿ ನಗರದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆದಿವೆ. ಆದರೆ ವಿವಿಧ ಸಂಘಟನೆಗಳ ಮುಖಂಡರಷ್ಟೇ ಪಾಲ್ಗೊಂಡಿದ್ದು ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಕಂಡುಬರಲಿಲ್ಲ.
Key words: Bellary Bandh- opposes – Vijayanagar –district-protest