ಬಳ್ಳಾರಿ:ಜೂ-23:(www.justkannada.in) ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಮಾತೇ ಇಲ್ಲ. ಈ ಸರ್ಕಾರ ಭದ್ರವಾಗಿ ಇರುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಮುಖ್ಯಮಂತ್ರಿಯಾಗಿ ಹೆಚ್.ಡಿ ಕುಮಾರಸ್ವಾಮಿ ಅವರೇ ಇರುತ್ತಾರೆ. ಡಿಸಿಎಂ ಪರಮೇಶ್ವರ್ ಅವರೇ ಆಗಿರುತ್ತಾರೆ. ನಮ್ಮ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯರ ನೇತೃತ್ವದಲ್ಲಿ ಈ ಸರ್ಕಾರ ಮುನ್ನಡೆಯುತ್ತದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡರ ಒಪ್ಪಂದದ ಮೇಲೆ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದು ಹೇಳಿದರು.
ದೇವೇಗೌಡರು ಹಾಗೂ ವೀರಪ್ಪ ಮೊಯ್ಲಿ ಹೇಳಿಕೆಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ನಾವೆಲ್ಲ ಜೊತೆಯಾಗಿಯೇ ಇದ್ದೇವೆ, ಇರುತ್ತೇವೆ. ಮಾಧ್ಯಮದವರು ನಮ್ಮನ್ನು ಬೇರೆ ಬೇರೆಯಾಗಿ ಮಾಡಬೇಡಿ ಎಂದರು. ಇನ್ನು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ನಾಯಕರೆಲ್ಲ ವಿರೋಧಿಗಳಲ್ಲ. ಆದರೆ ಅವರ ಸಿದ್ಧಾಂತಗಳಿಗೆ ವಿರೋಧವಿದೆ ಎಂದು ಹೇಳಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ತೆರಳುತ್ತಿದ್ದ ದಾರಿಯಲ್ಲಿ ಬಿಜೆಪಿ ಬಾವುಟ ಹಾಕಿದವರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಖಾದರ್, ಈ ಬಗ್ಗೆ ಅಧಿಕಾರಿಗಳು ನೋಟಿಸ್ ಕೊಟ್ಟಿರಬಹುದು. ಅದನ್ನು ಡಿಸಿಎಂ ಮೇಲೆ ಹಾಕುವುದು ಸರಿಯಲ್ಲ. ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ. ಅವರು ಬಹಳ ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ ಎಂದು ಹೇಳಿದರು.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆ ಜನರಿಕ್ ಔಷಧಿ ಅಂಗಡಿ ಮುಂದೆ ಬಿಜೆಪಿ ಬಾವುಟ ಹಾಕಲಾಗಿತ್ತು. ಇದಕ್ಕೆ ಅಂಗಡಿ ಮಾಲೀಕ ಕೆ.ಎನ್.ರವಿ ಎಂಬವರಿಗೆ ಗ್ರಾಮ ಪಂಚಾಯತಿಯ ಪಿಡಿಓ ನೋಟಿಸ್ ನೀಡಿದ್ದು, ಬಾವುಟವನ್ನು ಕೂಡಲೇ ತೆರವುಗೊಳಿಸುವಂತೆ ನೋಟಿಸ್ ನಲ್ಲಿ ಸೂಚನೆ ನೀಡಲಾಗಿತ್ತು.