ಬಾಳೆಹಣ್ಣಿನ ಆಯುರ್ವೇದೀಯ ಔಷಧೀಯ ಗುಣಗಳು

ಬಾಳೆಹಣ್ಣು ಹಾಗು ಆಯುರ್ವೇದ

ಆಯುರ್ವೇದದ ಪ್ರಕಾರ ಬಾಳೆಹಣ್ಣು ನಿಮಿರು ದೌರ್ಬಲ್ಯ , ಪುರುಷರ ಬಂಜೆತನ ಹಾಗು ದೇಹದ ತೂಕ ಹೆಚ್ಚಿಸುವಲ್ಲಿ ಉಪಯೋಗಕ್ಕೆ ಬರುತ್ತದೆ .

ಬಾಳೆ ಗಿಡವನ್ನು ಸಂಸ್ಕೃತದಲ್ಲಿ ಕದಳೀ ಎಂದು ಕರೆಯುತ್ತಾರೆ . ಈ ಗಿಡದ ಕಾಂಡ , ಎಲೆ , ಕಾಯಿ , ಹೂವು , ಹಣ್ಣು , ನಾರು ಪ್ರತಿಯೊಂದೂ ಔಷಧಿಯುಕ್ತವಾಗಿವೆ . ಭಾರತೀಯ ಅಡುಗೆಯಲ್ಲಿ ಇವೆಲ್ಲವನ್ನೂ ಉಪಯೋಗಿಸುತ್ತಾರೆ .

ಬಾಳೆಯ ಹಲವು ಹೆಸರುಗಳು

ಸಂಸ್ಕೃತ – ಮೋಚ, ಅಂಬುಸಾರ , ಅಂಶುಮತಿ , ರಂಭಾ
ಇಂಗ್ಲಿಷ್ – ಬನಾನಾ
ಕನ್ನಡ – ಬಾಳೆ ಹಣ್ಣು
ಹಿಂದಿ- ಕೇಲಾ
ಮರಾಠಿ- ಕೇಳಿ
ತಮಿಳು – ವಾಲೈ
ಮಲಯಾಳಂ- ಪಜ್ಹಂ / ವಾಜ್ಹ ಪಜ್ಹಂ
ಬಂಗಾಳಿ – ಕೊಲ್ಲ
ತೆಲುಗು – ಅರಟಿ ಪಂಡು

ಬಾಳೆಹಣ್ಣಿನ ಆಯುರ್ವೇದೀಯ ಔಷಧೀಯ ಗುಣಗಳು

ಆಯುರ್ವೇದದ ಪ್ರಕಾರ ಪಕ್ವವಾದ ಬಾಳೆಹಣ್ಣು ಬಹಳ ಮಧುರ ಅಥವಾ ಸಿಹಿಯಾಗಿರುತ್ತದೆ . ಇದು ದೇಹವನ್ನು ತಂಪಾಗಿರಿಸುತ್ತದೆ . ಆಯುರ್ವೇದ ಆಚಾರ್ಯರ ಪ್ರಕಾರ ಬಾಳೆಹಣ್ಣು ವಾತ ಹಾಗು ಪಿತ್ತ ದೋಷಗಳನ್ನು ಶಮನ ಮಾಡುತ್ತದೆ ಹಾಗು ಕಫವನ್ನು ಹೆಚ್ಚಾಗಿಸುತ್ತದೆ .

ಅಸಿಡಿಟಿ

ಪರಿಪಕ್ವವಾದ ಬಾಳೆಹಣ್ಣನ್ನು ತಿನ್ನುವುದರಿಂದ ಅಸಿಡಿಟಿ , ಎದೆ ಉರಿ ಹೊಟ್ಟೆ ಉಬ್ಬರ ಇವು ಕಡಿಮೆಯಾಗುತ್ತವೆ .

ಮಲಭದ್ದತೆ

ಬಾಳೆ ಹಣ್ಣಿನಲ್ಲಿ ನಾರಿನ ಅಂಶ ಬಹಳಷ್ಟು ಹೆಚ್ಚಾಗಿದೆ . ಅದರಿಂದ ಇದು ಮಲಭದ್ದತೆ ನಿವಾರಿಸಿ ಹೊಟ್ಟೆ ಹಗುರಾಗಿಸುತ್ತದೆ . ಪ್ರತಿದಿನ ಮಧ್ಯಾನ್ಹ ಹಾಗು ರಾತ್ರಿ ಊಟದ ನಂತರ ಬಾಳೆಹಣ್ಣನ್ನು ತಿನ್ನುವುದರಿಂದ ಮಲಭದ್ದತೆ ನಿವಾರಣೆಯಾಗುತ್ತದೆ .

ಲೈಂಗಿಕ ಶಕ್ತಿ ಹಾಗು ವೀರ್ಯ ವೃದ್ಧಿ

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಅಂಶ ಹೆಚ್ಚಾಗಿದೆ . ಪೊಟ್ಯಾಸಿಯಂ ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಹಾಗು ವೀರ್ಯಾಣುವಿನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ . ಆಯುರ್ವೇದ ಬಾಳೆಹಣ್ಣನ್ನು ವೃಷ್ಯ ಎಂದು ಹೊಗಳುತ್ತದೆ . ವೃಷ್ಯ ಎಂದರೆ ಲೈಂಗಿಕ ಶಕ್ತಿ ಹಾಗು ವೀರ್ಯ ವೃದ್ಧಿ ಮಾಡುವಂತಹುದು ಎಂದರ್ಥ . ಆದ್ದರಿಂದ ಲೈಂಗಿಕವಾಗಿ ಸಕ್ರಿಯರಾಗಿರುವ ಪುರುಷರು ಇದರಿಂದ ಲಾಭ ಪಡೆಯಬಹುದು

ಅಧಿಕ ರಕ್ತದೊತ್ತಡ ಅಥವಾ ಹೈ ಬಿ ಪಿ

ಈ ಹಣ್ಣಿನಲ್ಲಿ ಪೊಟ್ಯಾಸಿಯಂ ಅಂಶ ಹೆಚ್ಚಾಗಿರುವುದರಿಂದ , ಇದು ಅಧಿಕ ರಕ್ತದೊತ್ತಡ ಅಥವಾ ಹೈ ಬಿ ಪಿ ಯಲ್ಲಿ ಉಪಯುಕ್ತವಾಗಿದೆ .

ಗರ್ಭಿಣಿ ಸ್ತ್ರೀಯರಿಗೆ

ಗರ್ಭಿಣಿ ಸ್ತ್ರೀಯರು ಇದನ್ನು ಹೇರಳವಾಗಿ ಸೇವಿಸಬಹುದು . ಇದರಿಂದ ಎದೆ ಉರಿ , ವಾಂತಿ , ವಾಕರಿಕೆ ಇವು ಕಡಿಮೆಯಾಗುತ್ತವೆ . ಅಲ್ಲದೆ ಮಲಭದ್ದತೆಯೂ ಕಡಿಮೆಯಾಗುತ್ತದೆ . ಗರ್ಭಿಣಿಯರಿಗೆ ಬೇಕಾದ ಪೌಷ್ಟಿಕಾಂಶಗಳು ಹೇರಳವಾಗಿ ದೊರೆಯುತ್ತವೆ .

ಮುಖದ ಸೌಂದರ್ಯ ಹಾಗು ಕಾಂತಿ

ಈ ಹಣ್ಣು ಮುಖದ ಸೌಂದರ್ಯ ಹಾಗು ಕಾಂತಿಯನ್ನು ವರ್ಧಿಸುವುದಲ್ಲದೆ ಚರ್ಮದ ಆರೋಗ್ಯವನ್ನೂ ವೃದ್ಧಿಸುತ್ತದೆ . ಇದಕ್ಕೆ ಪಕ್ವವಾದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಅದನ್ನು ಮುಖಕ್ಕೆ ಲೇಪಿಸಿ ೨೦ ನಿಮಿಷದ ನಂತರ ಮುಖ ತೊಳೆಯಿರಿ

ಸುಟ್ಟ ಗಾಯ

ಇದೇ ರೀತಿ ಪಕ್ವವಾದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಸುಟ್ಟ ಗಾಯದ ಮೇಲೆ ಹಚ್ಚಿದಾಗ ತಂಪಾಗುವುದಲ್ಲದೆ ಗಾಯವೂ ಬೇಗ ಮಾಯುತ್ತದೆ

ಕೃಶಾಂಗಿಗಳಿಗೆ

ಪಕ್ವವಾದ ಬಾಳೆಹಣ್ಣು ದೇಹದ ತೂಕ ಹೆಚ್ಚಿಸುತ್ತದೆ . ಕೃಶಾಂಗಿಗಳು ತಮ್ಮ ದೇಹದ ತೂಕ ಹೆಚ್ಚಿಸಿಕೊಂಡು ದಪ್ಪಗಾಗಲು ಈ ಹಣ್ಣನ್ನು ಉಪಯೋಗಿಸಬಹುದು . ಆದರೆ ತೂಕ ಇಳಿಸಲು ಹವಣಿಸುತ್ತಿರುವವರು ಇದನ್ನು ಉಪಯೋಗಿಸದಿರುವುದು
ಒಳ್ಳೆಯದು

ಉರಿ ಮೂತ್ರ

ಮೂತ್ರದ ಉರಿ ಹಾಗು ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದ್ದರೆ ಈ ಹಣ್ಣನ್ನು ಉಪಯೋಗಿಸಿದಲ್ಲಿ ಉರಿ ಮೂತ್ರ ಕಡಿಮೆಯಾಗುತ್ತದೆ

ಬಾಳೆ ಹಣ್ಣನ್ನು ಯಾರು ತಿನ್ನಬಾರದು ?

ಪಕ್ವವಾದ ಹಣ್ಣು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ . ಅಲ್ಲದೆ ಇದು ಕಫವನ್ನೂ ಸಹ ಹೆಚ್ಚಿಸುತ್ತದೆ . ಆದ್ದರಿಂದ ಬಾಳೆಹಣ್ಣನ್ನು, ಜೀರ್ಣಶಕ್ತಿ ಕಡಿಮೆ ಇರುವವರು, ಅಸ್ತಮಾ , ಕೆಮ್ಮು , ನೆಗಡಿಗಳಿಂದ ಬಳಲುತ್ತಿರುವವರು ಉಪಯೋಗಿಸಬಾರದು .

ಬಾಳೆಹಣ್ಣನ್ನು ಯಾವ ಆಹಾರಗಳೊಂದಿಗೆ ಉಪಯೋಗಿಸಬಾರದು ?

ಆಯುರ್ವೇದ ನಿಯಮಾನುಸಾರ ಹಲವು ಆಹಾರಗಳು ಪರಸ್ಪರ ವಿರೋಧೀ ಗುಣಗಳನ್ನು ಹೊಂದಿರುತ್ತವೆ . ಇಂತಹ ಆಹಾರಗಳನ್ನು ಒಟ್ಟಿಗೆ ಬೆರೆಸಿ ಸೇವಿಸಿದರೆ ದೇಹದಲ್ಲಿನ ದೋಷಗಳು ಏರುಪೇರಾಗಿ, ಆರೋಗ್ಯ ಹಾಳಾಗುತ್ತದೆ . ಬಾಳೆಹಣ್ಣನ್ನು ಕೆಳಕಂಡ ಆಹಾರ ಪದಾರ್ಥಗಳೊಂದಿಗೆ ಸೇವಿಸಬಾರದು .
• ಹಾಲು
• ಮೊಸರು
• ಮೂಲಂಗಿ
• ಮರಗೆಣಸು
• ಮೊಟ್ಟೆ ಹಾಗು
• ಕಾಳುಗಳು

ಇಮೇಲ್ – drsavithasuri@gmail.com    ವಾಟ್ಸ್ ಅಪ್ – +91 6360108663