ಬೆಂಗಳೂರು ತಂತ್ರಜ್ಞಾನ ಮೇಳ-2020 : ಕೃತಕ ಬುದ್ಧಿಮತ್ತೆ (ಎ.ಐ.) ಕ್ಷೇತ್ರದಲ್ಲಿ ಕರ್ನಾಟಕ-ಫಿನ್ಲೆಂಡ್ ಸಹಯೋಗ

 

ಬೆಂಗಳೂರು, ನ.19, 2020 : (www.justkannada.in news) : ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಭಾರತದ ‘ಸೆಂಟರ್ ಫಾರ್ ಎಕ್ಸೆಲೆನ್ಸ್ ಫಾರ್ ಡೇಟಾ ಸೈನ್ಸ್ ಆಂಡ್ ಎ.ಐ.’ ಹಾಗೂ ಫಿನ್ಲೆಂಡ್ ನ ‘ಬಿಸಿನೆಸ್ ಫಿನ್ಲೆಂಡ್’ ನಡುವೆ ಸಹಯೋಗ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಯಿತು.

‘ಬೆಂಗಳೂರು ತಂತ್ರಜ್ಞಾನ ಮೇಳ-2020’ದ ಮೊದಲ ದಿನ ಕೃತಕ ಬುದ್ಧಿಮತ್ತೆ (ಎಐ) ಕುರಿತ ಸಂವಾದ ಗೋಷ್ಠಿಯಲ್ಲಿ ಇದನ್ನು ಪ್ರಕಟಿಸಲಾಯಿತು. ಈ ಸಹಯೋಗದ ಅನುಸಾರ, ಕರ್ನಾಟಕ ಸರ್ಕಾರ ಹಾಗೂ ನ್ಯಾಸ್‌ಕಾಮ್ ಸಹಭಾಗಿತ್ವದಲ್ಲಿ ರೂಪಿಸಲಾಗಿರುವ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯು ದತ್ತಾಂಶ ವಿಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಕೌಶಲಾಭಿವೃದ್ಧಿ, ಸಂಶೋಧನೆ ಮತ್ತು ಬೆಳವಣಿಗೆಗಾಗಿ ಫಿನ್‌ಲ್ಯಾಂಡ್‌ನ ತಜ್ಞರು ಹಾಗೂ ಸಂಸ್ಥೆಗಳೊಡನೆ ಕೆಲಸಮಾಡಲಿದೆ.

kannada-journalist-media-fourth-estate-under-loss

ಪ್ರಪಂಚದಲ್ಲಿ ನಾವೀನ್ಯತಾ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಹಲವು ದೇಶಗಳೊಂದಿಗೆ ಕರ್ನಾಟಕ ಸರ್ಕಾರವು ‘ಜಾಗತಿಕ ನಾವೀನ್ಯತಾ ಮೈತ್ರಿ’ (ಗ್ಲೋಬಲ್ ಇನೊವೇಶನ್ ಅಲಯನ್ಸ್- ಜಿಐಎ)’ ಯನ್ನು ರೂಪಿಸಿದ್ದು, ಇದರಲ್ಲಿ ಫಿನ್‌ಲ್ಯಾಂಡ್ ದೇಶವು ಪ್ರಮುಖ ಪಾಲುದಾರ ರಾಷ್ಟ್ರಗಳಲ್ಲೊಂದಾಗಿದೆ. ನಾವೀನ್ಯತೆಗಾಗಿ ಹೆಸರಾಗಿರುವ ಫಿನ್‌ಲ್ಯಾಂಡ್ ದೇಶ ಉನ್ನತ ಶಿಕ್ಷಣ, ತರಬೇತಿ, ಆಧುನಿಕ ತಂತ್ರಜ್ಞಾನಗಳ ಲಭ್ಯತೆ ಹಾಗೂ ಎಐ ಬಳಕೆಯ ಸಾಧ್ಯತೆಗಳಲ್ಲಿ ಪ್ರಪಂಚದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. ಈ ರಾಷ್ಟ್ರದೊಂದಿಗಿನ ಸಹಭಾಗವು ನಮ್ಮ ರಾಜ್ಯದಲ್ಲಿನ ಕೃತಕ ಬುದ್ಧಿಮತ್ತೆ ವಲಯದ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಐಟಿ/ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಅಭಿಪ್ರಾಯಪಟ್ಟರು.

ಎಐ ಕ್ಷೇತ್ರದ ಮಹತ್ವವನ್ನು ಅರಿತಿರುವ ನಮ್ಮ ಸರಕಾರವು ಅದರ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಕ್ರಿಯಾಶೀಲ ಕ್ರಮಗಳನ್ನು ಕೈಗೊಂಡಿದೆ. ಈಗ ಏರ್ಪಡಲಿರುವ ಒಪ್ಪಂದವು ಕರ್ನಾಟಕ ಹಾಗೂ ಫಿನ್‌ಲ್ಯಾಂಡ್ ನಡುವಿನ ತಾಂತ್ರಿಕ ಪಾಲುದಾರಿಕೆಯನ್ನು ಇನ್ನಷ್ಟು ಸದೃಢವಾಗಿಸಲಿದೆ ಎಂದು ವೇದಿಕೆಯಲ್ಲಿ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿದ್ದ ಅಶ್ವತ್ಧ ನಾರಾಯಣ ಹೇಳಿದರು.

Stage Set For Bengaluru Tech Summit, 2020; PM Narendra Modi To Inaugurate Event

ಈ ಸಂದರ್ಭದಲ್ಲಿ ಮಾತನಾಡಿದ ಫಿನ್‌ಲ್ಯಾಂಡ್‌ ರಾಯಭಾರಿ ರಿಟ್ವಾ ಕೌಕು ರೋಂಡೆ, ಭಾರತದಂತೆಯೇ ಫಿನ್‌ಲ್ಯಾಂಡ್ ಕೂಡ ನಾವೀನ್ಯತೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ನೈಪುಣ್ಯಕ್ಕೆ ಹೆಸರಾಗಿದೆ ಎಂದರು. ಫಿನ್‌ಲ್ಯಾಂಡ್ ಹಾಗೂ ಕರ್ನಾಟಕದ ನಡುವೆ 2017ರಲ್ಲಿ ಏರ್ಪಟ್ಟ ನಾವೀನ್ಯತಾ ಒಪ್ಪಂದದ ಫಲವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸತನದಿಂದ ಕೂಡಿದ ಅನೇಕ ಚಟುವಟಿಕೆಗಳನ್ನು ಬೆಂಬಲಿಸುವುದು ಸಾಧ್ಯವಾಗಿದೆ ಎಂದ ಅವರು ಪರಸ್ಪರ ಮೈತ್ರಿಯಿಂದಾಗಿ, ಕರ್ನಾಟಕ ಮತ್ತು ಫಿನ್‌ಲ್ಯಾಂಡ್‌ನಲ್ಲಿ ಉತ್ತಮ ತಾಂತ್ರಿಕ ಪರ್ಯಾವರಣ ನಿರ್ಮಾಣವಾಗಲಿದೆ ಎಂದು ಆಶಿಸಿದರು.

ಆರೋಗ್ಯ ಸೇವೆ ಮತ್ತು ಚಿಲ್ಲರೆ ವಹಿವಾಟು ಉದ್ದಿಮೆಗಳಲ್ಲಿ ಎ.ಐ. ವಹಿಸುತ್ತಿರುವ ಪಾತ್ರದ ಬಗ್ಗೆ ಚರ್ಚಿಸಿದ ತಜ್ಞರು ಕೋವಿಡ್-19 ಜಾಗತಿಕ ಸೋಂಕಿನ ಸಂದರ್ಭದಲ್ಲಿ ಎ.ಐ. ಮಹತ್ವ ಇನ್ನಷ್ಟು ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು. ಮನುಷ್ಯರ ಸಾಮರ್ಥ್ಯವನ್ನು ತಂತ್ರಜ್ಞಾನದ ಸಾಧ್ಯತೆಗಳಿಗೆ ಪೂರಕವಾಗಿ ಬಳಸಿಕೊಳ್ಳುವ ‘ಸಂವರ್ಧಿತ ಬುದ್ಧಿಮತ್ತೆ’ಯ (ಆಗ್‌ಮೆಂಟೆಡ್ ಇಂಟೆಲಿಜೆನ್ಸ್ ) ಪರಿಕಲ್ಪನೆ ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಬೆಳೆಯಲಿದೆ ಎಂಬ ಅಭಿಪ್ರಾಯ ಈ ಸಂದರ್ಭದಲ್ಲಿ ವ್ಯಕ್ತವಾಯಿತು.

Bengalore-tech-summit-dcm-cm-karnataka

“ಫಿನ್‌ಲ್ಯಾಂಡ್‌ನಲ್ಲಿರುವ ಸದೃಢ ಹಾಗೂ ಉಚಿತ ಶಿಕ್ಷಣ ವ್ಯವಸ್ಥೆಯು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದ ಬೆಳವಣಿಗೆಗೆ ಪೂರಕವಾಗಿದೆ, ಅದರಿಂದಾಗಿಯೇ ನಮ್ಮ ದೇಶವು ಎ.ಐ. ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ” ಎಂದು ಫಿನ್ನಿಷ್ ಸೆಂಟರ್ ಫಾರ್ ಎ.ಐ‌. ಪ್ರತಿನಿಧಿ ಹೇಳಿದರು.

ಈ ವರ್ಚುಯಲ್ ಕಾರ್ಯಕ್ರಮದಲ್ಲಿ ಫಿನ್‌ಲ್ಯಾಂಡ್‌ನ ವಿಜ್ಞಾನ ಹಾಗೂ ಸಂಸ್ಕೃತಿ ಸಚಿವೆ ಶ್ರೀಮತಿ ಅನ್ನಿಕಾ ಸಾರಿಕ್ಕೋ ನೇತೃತ್ವದ ನಿಯೋಗ ಭಾಗವಹಿಸಿತ್ತು. ಹಲವಾರು ಉದ್ಯಮಿಗಳು ಮತ್ತು ತಜ್ಞರು ಸಂವಾದದಲ್ಲಿ ಪಾಲ್ಗೊಂಡಿದ್ದರು.

KEY WORDS : Bengalore-tech-summit-dcm-cm-karnataka