ನ್ಯೂಯಾರ್ಕ್ ಟೈಮ್ಸ್ ಸ್ಕ್ವಯರ್ ಪರದೆಯ ಮೇಲೆ ಬೆಂಗಳೂರಿನ ವಿದ್ಯಾರ್ಥಿ ಭಾವಚಿತ್ರ..!

 

ಬೆಂಗಳೂರು, ಜೂನ್ ೨೧, ೨೦೨೧ (www.justkannada.in): ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ತೇಜಸ್ವಿನಿ ವಿ ಎಂಬ ವಿದ್ಯಾರ್ಥಿನಿಯ ಭಾವಚಿತ್ರ ಇತ್ತೀಚೆಗೆ ವಿಶ್ವಪ್ರಸಿದ್ಧ ವಾಣಿಜ್ಯ ನಗರಿ ಎನಿಸಿಕೊಂಡಿರುವ ನ್ಯೂ ಯಾರ್ಕ್ನ ಟೈಮ್ಸ್ ಸ್ಕ್ವಯರ್ ನ ಕಟ್ಟಡಗಳ ಮುಂದೆ ಅಳವಡಿಸಿರುವ ಬೃಹತ್ ಎಲ್‌ಇಡಿ ಪರದೆಯ ಮೇಲೆ ಪ್ರಕಟಿಸಲಾಯಿತು.

jk

ಅಷ್ಟಕ್ಕೂ ತೇಜಸ್ವಿನಿ ಸಾಧನೆ ಏನೆಂದಿರಾ? ವಿಶ್ವಖ್ಯಾತಿ ಪಡೆದಿರುವ ಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಬಹುರಾಷ್ಟ್ರೀಯ ಕಂಪನಿ ಮಾರ್ಗನ್ ಸ್ಟ್ಯಾನ್ಲಿ ಯಲ್ಲಿ ಇಂಟೆರ್ನ್ಷಿಪ್ ಪಡೆಯಲು ಭಾರತದಿಂದ ೨೭೭ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಬೆಂಗಳೂರಿನ ತೇಜಸ್ವಿನಿ ಅವರೂ ಒಬ್ಬರಾಗಿದ್ದಾರೆ. ಇವರೆಲ್ಲರ ಭಾವಚಿತ್ರಗಳನ್ನು ನ್ಯೂ ಯಾರ್ಕ್ನಲ್ಲಿರುವ ಮಾರ್ಗನ್ ಸ್ಟ್ಯಾನ್ಲಿ ಕಂಪನಿಯ ಕೇಂದ್ರ ಕಚೇರಿ ಕಟ್ಟಡದ ಮುಂದೆ ಅಳವಡಿಸಿರುವ ಬೃಹತ್ ಎಲ್‌ಇಡಿ ಪರದೆಯ ಮೇಲೆ ಇತ್ತೀಚೆಗೆ ಬಿತ್ತರಿಸಲಾಯಿತು. ಹತ್ತಿರದಲ್ಲೇ ಇರುವ ವಾಲ್ ಸ್ಟ್ರೀಟ್‌ಗೆ ಈ ಪರದೆ ಗೋಚರಿಸುತ್ತದಂತೆ!

ಇದರಿಂದ ತೇಜಸ್ವಿನಿ ಅತ್ಯಂತ ಪುಳಕಿತರಾಗಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ತೇಜಸ್ವಿನಿ “ನನಗೆ ಇದನ್ನು ನಿಜವಾಗಿಯೂ ನಂಬಲಾಗುತ್ತಿಲ್ಲ, ನನ್ನ ಕೆಲವು ಸ್ನೇಹಿತರು ಬೃಹತ್ ಪರದೆಯ ಮೇಲೆ ಗೋಚರಿಸಿದ ಆ ಭಾವಚಿತ್ರವನ್ನು ನೋಡಿ ಅದನ್ನು ನೀನೇ ಎಡಿಟ್ ಮಾಡಿದೆಯಾ ಎಂದು ಕೇಳುತ್ತಿದ್ದಾರೆ,” ಎಂದರು.

times-square

ತೇಜಸ್ವಿನಿ ಮೌಂಟ್ ಕಾರ್ಮೆಲ್ ಕಾಲೇಜಿನ ಎರಡನೆ ವರ್ಷದ ಬಿಬಿಎ ವಿದ್ಯಾರ್ಥಿನಿ ಆಗಿದ್ದು, ‘ರಿಟರ್ನ್ ಟು ವರ್ಕ್ ಇಂಟೆರ್ನ್ಷಿಪ್ ಪ್ರೋಗ್ರಾಂ ಇಂಡಿಯಾ’ದ ಭಾಗವಾಗಿ ೧೦-ವಾರಗಳ ಕಾಲ ಮಾರ್ಗನ್ ಸ್ಟ್ಯಾನ್ಲಿ ಕಂಪನಿಯಲ್ಲಿ ಇಂಟೆರ್ನ್ಷಿಪ್ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ. ಈ ಕಾಲೇಜನಿಂದ ಇಂಟೆರ್ನ್ಷಿಪ್ ಪಡೆಯಲು ಒಟ್ಟು ೧೩ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅದೇ ರೀತಿ ಜೈನ್ ವಿಶ್ವವಿದ್ಯಾಲಯದಿಂದ ೧೬ ಹಾಗೂ ಪಿಇಎಸ್ ವಿಶ್ವವಿದ್ಯಾಲಯದಿಂದ ೧೮ ವಿದ್ಯಾರ್ಥಿಗಳೂ ಸಹ ಆಯ್ಕೆಯಾಗಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳು ಮಾರ್ಗನ್ ಸ್ಟ್ಯಾನ್ಲಿ ಕಂಪನಿಯ ‘ಇಂಡಿಯಾ ಇಂಟೆರ್ನ್ಸ್ ಲೈಟ್ಸ್ ಆನ್ ಬ್ರಾಡ್‌ವೇ’ ಎಂಬ ಶೀರ್ಷಿಕೆಯುಳ್ಳ ಮಾರ್ಕೆಟಿಂಗ್ ಉಪಕ್ರಮದ ಭಾಗವಾಗಿ ಲಭಿಸಿರುವ ಅತ್ಯಂತ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಮುದಾಯದ ಭವನೆಯನ್ನು ಪೋಷಿಸುವ ಒಂದು ವಿಧಾನವಾಗಿದ್ದು, ಇವರೆಲ್ಲರೂ ಸಹ ಕಚೇರಿಯಿಂದ ದೂರದಿಂದಲೇ ಕಾರ್ಯನಿರ್ವಹಿಸಲಿದ್ದಾರೆ.

ಕೃಪೆ : ಡೆಕ್ಕನ್ ಹೆರಾಲ್ಡ್

 

key words : bengaluru-students-make-it-to-screens-at-new-yorks-times-square