2 ಲಕ್ಷ ರೂಪಾಯಿಗಾಗಿ ಅಂಚೆ ಕಚೇರಿಗೆ ಲಗ್ಗೆ!

ಶಿವಮೊಗ್ಗ:ಜೂ-26: ಕೇಂದ್ರ ಸರ್ಕಾರ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆ ಹಾಗೂ ಪ್ರತಿ ಮಹಿಳೆಯ ಬ್ಯಾಂಕ್ ಖಾತೆಗೆ ಎರಡು ಲಕ್ಷ ರೂಪಾಯಿ ಪಾವತಿಸುತ್ತಿದ್ದು, ಸಮೀಪದ ಅಂಚೆ ಕಚೇರಿಗಳಲ್ಲಿ ಫಲಾನುಭವಿಗಳು ಕೇಂದ್ರದ ರಕ್ಷಣಾ ಮಂತ್ರಾಲಯಕ್ಕೆ ‘ರಿಜಿಸ್ಟರ್ಡ್ ಪೋಸ್ಟ್’ ಮಾಡಬೇಕು..!

ಇಂಥದೊಂದು ವದಂತಿ ಕೆಲ ದಿನಗಳಿಂದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಗದಗ, ಹಾವೇರಿ ಮತ್ತಿತರ ಜಿಲ್ಲೆಗಳಲ್ಲಿ ಹರಿದಾಡುತ್ತಿದ್ದು, ಅಂಚೆ ಕಚೇರಿಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ಅಂಚೆ ಕಚೇರಿ ಸಿಬ್ಬಂದಿಯೂ ಪೇಚಿಗೆ ಸಿಲುಕಿದ್ದಾರೆ. ಇಂತಹ ಯಾವುದೇ ಯೊಜನೆ ಇಲ್ಲವೆಂದು ಅಂಚೆ ಸಿಬ್ಬಂದಿ ಹೇಳಿದರೂ ಜನ 50 ರೂ. ಶುಲ್ಕದೊಂದಿಗೆ ರಿಜಿಸ್ಟರ್ಡ್ ಪೋಸ್ಟ್ ಮಾಡುತ್ತಲೇ ಇದ್ದಾರೆ.

ಇಲಾಖೆಗೆ ಲಾಭ, ಅರ್ಜಿದಾರರಿಗೆ ನಷ್ಟ: ಕೇಂದ್ರ ಸರ್ಕಾರದ ಯೋಜನೆ ನೆಪದಲ್ಲಿ ಸಾರ್ವಜನಿಕರು ರಿಜಿಸ್ಟರ್ಡ್ ಪತ್ರದ ಜತೆಗೆ ಸ್ಟಾಂಪ್ ಇತ್ಯಾದಿ ಸೇರಿ 25ರಿಂದ 50 ರೂ. ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಅಂಚೆ ಇಲಾಖೆಗೆ ಆದಾಯ ಬರುತ್ತಿದೆ. ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ವದಂತಿ ನಂಬಿ ಮೋಸ ಹೋಗಿದ್ದು ಅರಿವಾದ ಬಳಿಕ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದೇವೆಂದು ಗಲಾಟೆ ಮಾಡುವ ಸಾಧ್ಯತೆ ಇದೆ ಎಂಬುದು ಅಧಿಕಾರಿಗಳ ಆತಂಕ.

ಅಂತಹ ಯೋಜನೆ ಇಲ್ಲ

ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ಕೇಂದ್ರದಿಂದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಉಚಿತವಾಗಿ 2 ಲಕ್ಷ ರೂ. ಪಾವತಿಸುವ ಯಾವುದೇ ಯೋಜನೆ ಇಲ್ಲ ಎಂದು ಬೆಂಗಳೂರು ಪ್ರಧಾನ ಅಂಚೆ ಕಚೇರಿಯ(ಜಿಪಿಒ) ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್​ನ ಹಿರಿಯ ವ್ಯವಸ್ಥಾಪಕ ಸುರೇಶ್ ತಿಳಿಸಿದ್ದಾರೆ.

ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರಧಾನಿ ನರೇಂದ್ರ ಮೋದಿ ಎರಡು ಲಕ್ಷ ರೂ. ಹಾಕುವ ಯಾವುದೇ ಯೋಜನೆಗಳಿಲ್ಲ. ಈ ಬಗ್ಗೆ ತಿಳಿವಳಿಕೆ ಮೂಡಿಸಿದರೂ ಜನ ಕೇಳುತ್ತಿಲ್ಲ. ಅಂಚೆ ಇಲಾಖೆಗೆ ಆದಾಯ ಬರಲಿದೆಯೇ ಹೊರತು ಜನರಿಗೆ ಪ್ರಯೋಜನವಿಲ್ಲ.

| ನವೀನ್ ಚಂದರ್, ಶಿವಮೊಗ್ಗ ಅಂಚೆ ಇಲಾಖೆ ಅಧೀಕ್ಷಕ

ಕೇಂದ್ರದಿಂದ ಹಣ ನೀಡುವ ಯೋಜನೆಗಳ ಹೆಸರಲ್ಲಿ ಅಂಚೆ ಕಚೇರಿಗೆ ರಿಜಿಸ್ಟರ್ಡ್ ಪೋಸ್ಟ್ ಸಲ್ಲಿಸುತ್ತಿರುವ ಬಗ್ಗೆ ಭದ್ರಾವತಿ ತಾಲೂಕಿನಲ್ಲಿ ಮೂರ್ನಾಲ್ಕು ದೂರುಗಳು ಬಂದಿವೆ. ನಿಮಗೆ ಮಾಹಿತಿ ಕೊಟ್ಟವರು ಯಾರೆಂದು ಪ್ರಶ್ನಿಸಿದರೂ ಜನ ಬಾಯಿಬಿಡುತ್ತಿಲ್ಲ.

| ಆರ್.ಶೇಷಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ
ಕೃಪೆ:ವಿಜಯವಾಣಿ

2 ಲಕ್ಷ ರೂಪಾಯಿಗಾಗಿ ಅಂಚೆ ಕಚೇರಿಗೆ ಲಗ್ಗೆ!
betibachao, beti padavo,central govt,post office