ವಿಜ್ಞಾತಂ 2025: ಅವಧೇಶಾನಂದ ಗಿರಿ ಮಹಾರಾಜರಿಗೆ ಗೌರವ ಪುರಸ್ಕಾರ

Vijnanatam 2025: Awadheshananda Giri Maharaj to be honoured

ಆದಿಚುಂಚನಗಿರಿ, ಫೆ.೨೦,೨೦೨೫: ಇಲ್ಲಿನ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾ ಭವನದಲ್ಲಿ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 12ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ, ಪಟ್ಟಾಭಿಷೇಕ ಮಹೋತ್ಸವ ಮತ್ತು ವಿಜ್ಞಾತಂ ಪ್ರಶಸ್ತಿ ಪುರಸ್ಕಾರ  ಸಮಾರಂಭ ನಡೆಯಿತು.

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಪ್ರತಿವರ್ಷವೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ‘ಚುಂಚಶ್ರೀ’ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಅದೇ ರೀತಿ, ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲು ‘ವಿಜ್ಞಾತಂ’ ಪ್ರಶಸ್ತಿ ನೀಡಲಾಗುತ್ತದೆ.

2025ನೇ ಸಾಲಿನ ವಿಜ್ಞಾತಂ ಪ್ರಶಸ್ತಿಗೆ ಹರಿದ್ವಾರದ ಹರಿಹರ ಆಶ್ರಮ, ಜುನಾ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರರಾದ ಪರಮಪೂಜ್ಯ ಶ್ರೀ ಅವಧೇಶಾನಂದ ಗಿರಿ ಮಹಾರಾಜ್ ಅವರು ಭಾಜನರಾದರು.

ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜರು ಆಧ್ಯಾತ್ಮಿಕ ಸಂತರೂ, ತತ್ವಜ್ಞಾನಿಗಳೂ, ಮತ್ತು ಸಮಾಜ ಸುಧಾರಕರಾಗಿದ್ದಾರೆ. ತನ್ನ 17ನೇ ವಯಸ್ಸಿನಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಅರಸುತ್ತಾ ಪರಿವ್ರಾಜಕರಾದರು. 1985ರಲ್ಲಿ ಅವರು ಸ್ವಾಮಿ ಸತ್ಯಮಿತ್ರಾನಂದಗಿರಿ ಅವರ ಶಿಷ್ಯರಾದರು. ಬಳಿಕ, ಸ್ವಾಮಿ ಅವಧೇಶಾನಂದಗಿರಿ ಎಂಬ ಅಭಿದಾನ ಪಡೆದು, 1998ರಲ್ಲಿ ಜುನಾ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರರನ್ನಾಗಿ ನೇಮಕಗೊಂಡರು. ಅವರು ಒಂದು ಲಕ್ಷಕ್ಕೂ ಹೆಚ್ಚಿನ ಸನ್ಯಾಸಿಗಳಿಗೆ ಆಧ್ಯಾತ್ಮಿಕ, ವೇದಾಂತ, ಯೋಗ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡಿದ್ದಾರೆ.

ಸಮಾರಂಭದ ಅಂಗವಾಗಿ, ವಿಶೇಷ ವಸ್ತುಪ್ರದರ್ಶನವನ್ನು ಆಯೋಜಿಸಲಾಯಿತು. ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಖ್ಯಾತ ವಿಜ್ಞಾನಿಗಳು, ಮಾಜಿ ರಾಷ್ಟ್ರಪತಿ ಹಾಗೂ ಶಿಕ್ಷಣ ತಜ್ಞರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗನಾದ ಡಾ. ಗೌತಮ್ ರಾಧಾಕೃಷ್ಣ ದೇಸಿರಾಜು ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.

ರಕ್ಷಣಾ, ಬಾಹ್ಯಾಕಾಶ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಪಾತ್ರರಾಗಿದ್ದು, ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಮಾರಂಭದ ಅಂಗವಾಗಿ, ಫೆಬ್ರವರಿ 19, ಬುಧವಾರದಂದು ಇಸ್ರೋದ ನಿವೃತ್ತ ಗ್ರೂಪ್ ಡೈರೆಕ್ಟರ್ ಆದ ಡಾ. ಐ ವೇಣುಗೋಪಾಲ್ ಅವರು ‘ರೋಲ್ ಆಫ್ ಇಂಜಿನಿಯರ್ಸ್ ಇನ್ ಸ್ಪೇಸ್ ಆ್ಯಂಡ್ ಚಂದ್ರಯಾನ್ ಮಿಷನ್ ಆ್ಯಂಡ್ ಫ್ಯೂಚರ್ ಹ್ಯುಮನ್ ಹ್ಯಾಬಿಟಾಟ್ಸ್’ ವಿಚಾರದ ಕುರಿತು ಉಪನ್ಯಾಸ ನೀಡಿದರು.

ಬಳಿಕ, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ ಎನ್ ಬಿ ರಾಮಚಂದ್ರ ಅವರು ‘ಜೆನೆಟಿಕ್ಸ್ ಅಂಡ್ ಜೆನಾಮಿಕ್ಸ್ ಡಿಪಾರ್ಟ್ಮೆಂಟ್ಸ್ ಇನ್ ಮೆಡಿಕಲ್ ಸ್ಕೂಲ್’ ವಿಚಾರದಲ್ಲಿ ಉಪನ್ಯಾಸ ನೀಡಿದರು. ಮೂರನೇ ಅವಧಿಯಲ್ಲಿ, ಬೆಂಗಳೂರಿನ ವಿಭು ಅಕಾಡೆಮಿಯ ಮುಖ್ಯಸ್ಥರಾದ ಡಾ. ವಿ ಬಿ ಆರತಿ ಅವರು ಭಾರತೀಯ ಸಾಹಿತ್ಯದಲ್ಲಿ ಮನೋವಿಜ್ಞಾನ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.

ಪ್ರಶಸ್ತಿ ಪುರಸ್ಕೃತರಾದ ಪರಮಪೂಜ್ಯ ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್, ಆರ್ಷ ವಿದ್ಯಾ ಮಂದಿರ ರಾಜ್‌ಕೋಟ್, ಗುಜರಾತಿನ ಪರಮಪೂಜ್ಯ ಶ್ರೀ ಸ್ವಾಮಿ ಪರಮಾತ್ಮಾನಂದ ಸರಸ್ವತೀ ಸ್ವಾಮೀಜಿ, ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಪರಮಪೂಜ್ಯ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ್, ಸಂಸದರಾದ ಡಾ. ಕೆ ಸುಧಾಕರ್, ಶಾಸಕರಾದ ಶ್ರೀ ಶರತ್ ಬಚ್ಚೇಗೌಡ ಮತ್ತಿತರರು ಉಪಸ್ಥಿತರಿದ್ದರು.

key words: Vijnanatam 2025, Awadheshananda Giri Maharaj, honored, BGS

Vijnanatam 2025: Awadheshananda Giri Maharaj to be honoured