ಬೆಂಗಳೂರು, ಸೆಪ್ಟಂಬರ್,27,2021(www.justkannada.in): ಕೇಂದ್ರ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ರೈತರು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಈ ನಡುವೆ ರಾಜ್ಯದಲ್ಲೂ ಸಹ ರೈತರ ಪ್ರತಿಭಟನೆಯ ಕಿಚ್ಚು ಹೆಚ್ಚಾಗಿತ್ತು. ರಾಜ್ಯಾದ್ಯಂತ ಹಲವು ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿ ಭಾರತ್ ಬಂದ್ ಗೆ ಸಹಕರಿಸಿದವು.
ಬೆಂಗಳೂರಿನ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಜಾಥಾ ಬಳಿಕ ಸಭೆ ನಡೆಸಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಮುಕ್ತಾಯವಾಗಿದ್ದು, ಭಾರತ್ ಬಂದ್ ಯಶಸ್ವಿಯಾಗಿದೆ. ಮತ್ತೆ ನವೆಂಬರ್ ನಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಘೋಷಣೆ ಮಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿ ಕೇಂದ್ರ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ನೀತಿ ಖಂಡಿಸಿದ್ದಾರೆ. ಹೆದ್ದಾರಿಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಹತ್ತು ತಿಂಗಳಿಂದ ರೈತರು ದೇಶಾದ್ಯಂತ ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ರೈತರ ಸಂಕಷ್ಟವನ್ನು ಆಲಿಸುತ್ತಿಲ್ಲ. ಕೋವಿಡ್ ಸಂಕಷ್ಟದ ನಡುವೆ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇಂದು ಪ್ರತಿಭಟನೆ ಅಂತ್ಯವಾಗಲಿದೆ. ಆದರೆ ಕೃಷಿ ತಿದ್ದುಪಡಿ ಕಾಯ್ದೆಯನ್ನ ಕೇಂದ್ರ ಸರ್ಕಾರ ವಾಪಸ್ ಪಡೆಯದಿದ್ದರೆ ನವೆಂಬರ್ ನಲ್ಲಿ ಮತ್ತೆ ಬೃಹತ್ ಪ್ರತಿಭಟನಾ ಹೋರಾಟವನ್ನ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
Key words: Bharat Bandh – successful-Huge rally – November-farmer-Kodihalli Chandrasekhar.