ಧರ್ಮಶಾಲಾ,ಮಾರ್ಚ್,9,2024(www.justkannada.in): ಇಂಗ್ಲೆಂಡ್ ವಿರುದ್ದದ 5ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಭರ್ಜರಿ ಜಯ ಸಾಧಿಸಿದ್ದು ಈ ಮೂಲಕ 4-1 ಅಂತರದಿಂದ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ.
ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 64 ರನ್ ಗಳಿಂದ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಝಾಕ್ ಕ್ರಾಲಿ (79) ಅರ್ಧಶತಕ ಬಾರಿಸಿ ಮಿಂಚಿದ್ದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ 218 ರನ್ಗಳಿಗೆ ಆಲ್ ಔಟ್ ಆದರು. ಭಾರತದ ಪರ ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸಿದರೆ, ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು.
ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 104 ರನ್ ಪೇರಿಸಿ ಜೈಸ್ವಾಲ್ (57) ಔಟಾದರು. ಇನ್ನು ರೋಹಿತ್ ಶರ್ಮಾ (103) ಹಾಗೂ ಶುಭ್ಮನ್ ಗಿಲ್ (110) ಭರ್ಜರಿ ಶತಕ ಸಿಡಿಸಿದರು.
ಆ ಬಳಿಕ ಬಂದ ದೇವದತ್ ಪಡಿಕ್ಕಲ್ (65) ಹಾಗೂ ಸರ್ಫರಾಝ್ ಖಾನ್ (56) ಅರ್ಧಶತಕ ಬಾರಿಸಿ ಮಿಂಚಿದರು. ಪರಿಣಾಮ 2ನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಸ್ಕೋರ್ 450 ರನ್ಗಳ ಗಡಿ ದಾಟಿತು. ಮೊದಲ ಇನಿಂಗ್ಸ್ ನಲ್ಲಿ ಭಾರತ 477 ರನ್ ಕಲೆಹಾಕಿ 259 ರನ್ ಗಳ ಮುನ್ನಡೆ ಪಡೆಯಿತು.
259 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ರವಿಚಂದ್ರನ್ ಅಶ್ವಿನ್ ಆಘಾತ ನೀಡಿದರು. ಪರಿಣಾಮ 103 ರನ್ ಕಲೆಹಾಕುವಷ್ಟರಲ್ಲಿ ಇಂಗ್ಲೆಂಡ್ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ನಿಂತು ಆಡಿದ ಜೋ ರೂಟ್ (84) ಅರ್ಧಶತಕ ಬಾರಿಸಿ ಮಿಮಚಿದರು.
ಆದರೆ ಮತ್ತೊಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್ ತಂಡವು 195 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನಿಂಗ್ಸ್ ಹಾಗೂ 64 ರನ್ಗಳಿಂದ ಸೋಲೊಪ್ಪಿಕೊಂಡಿದೆ.
Key words: Big win – India-against -England – 5th Test match- series -win..