ಬೆಂಗಳೂರು,ಜನವರಿ,23,2021(www.justkannada.in): ಸರಕಾರ ಮಾಡುತ್ತಿರುವ ಜನಪರ ಕೆಲಸಗಳನ್ನು ಜನರಿಗೆ ಇನ್ನೂ ಉತ್ತಮವಾಗಿ ಮುಟ್ಟಿಸುವ ಕೆಲಸ ಆಗಬೇಕು. ಇದು ಅತ್ಯಂತ ಡೊಡ್ಡ ಟಾಸ್ಕ್ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಬಿಜೆಪಿ ರಾಜ್ಯ ಘಟಕ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಪಕ್ಷ ಮತ್ತು ಸರಕಾರದ ನಡುವೆ ಸಂಪರ್ಕದ ಅಂತರ ಇರಬಾರದು. ಅದನ್ನು ಹೋಗಲಾಡಿಸಲು ಇಂಥ ಮಾಧ್ಯಮ ಕಾರ್ಯಗಾರಗಳು ಹೆಚ್ಚು ಪೂರಕವಾಗುತ್ತವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಶೈಕ್ಷಣಿಕ, ಕೈಗಾರಿಕೆ, ಕೃಷಿ, ಮಾರುಕಟ್ಟೆ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ಸಾಧ್ಯವಾಗದ ಸುಧಾರಣಾ ಕ್ರಮಗಳನ್ನು ಜಾರಿ ಮಾಡಲಾಗಿದೆ. ಜತೆಗೆ, ಅನೇಕ ಕಾಯ್ದೆಗಳನ್ನು ಕೂಡ ಜಾರಿಗೆ ತರಲಾಗಿದೆ. ಇವೆಲ್ಲ ಅಂಶಗಳ ಬಗ್ಗೆ ಆಳವಾಗಿ ಆಧ್ಯಯನ ಮಾಡಿ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರೆ ಮೊದಲು ನಾವು ಪೂರ್ಣವಾಗಿ ತಿಳಿದುಕೊಳ್ಳಬೇಕು. ಪಕ್ಷದ ಹಾಗೂ ಸರಕಾರದ ವೇದಿಕೆಯಲ್ಲಿ ಕೆಲಸ ಮಾಡುವ ನಾವು ಚೆನ್ನಾಗಿ ಗ್ರಹಿಸಿಕೊಂಡರೆ ಮಾತ್ರ ಜನಸಾಮಾನ್ಯರಿಗೂ ಸುಲಭವಾಗಿ ವಿಷಯ ದಾಟಿಸಬಹುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಮಾಧ್ಯಮಗಳಲ್ಲಿ ಪಕ್ಷದ ನಿಲುವುಗಳು ಹಾಗೂ ಸರಕಾರದ ಕೆಲಸಗಳು ಪರಿಣಾಮಕಾರಿಯಾಗಿ ಧ್ವನಿಸಬೇಕು. ಅದಕ್ಕೆ ಸಾಕಷ್ಟು ಪೂರ್ವಸಿದ್ಧತೆ ಹಾಗೂ ಅಧ್ಯಯನ ಅಗತ್ಯ. ಈ ಕೆಲಸವನ್ನು ಉತ್ತಮವಾಗಿ ಮಾಡಿದರೆ ಪಕ್ಷ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದು ಡಿಸಿಎಂ ಅಭಿಪ್ರಾಯಪಟ್ಟರು.
ಕಾರ್ಯಾಗಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉದ್ಘಾಟನೆ ಮಾಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್, ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪಕ್ಷದ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಮುಂತಾದವರು ಪಾಲ್ಗೊಂಡಿದ್ದರು.
Key words: bigtask – get people – government –plan-reach-people- DCM -Ashwath Narayan