ಮುಂಬೈ, ಸೆಪ್ಟೆಂಬರ್ 2, 2021 (www.justkannada.in): ‘ಕೌನ್ ಬನೇಗಾ ಕರೋಡಪತಿ’ (ಕೆಬಿಸಿ) ಭಾರತದಲ್ಲಿ ಮೊದಲಿಗೆ ಹಿಂದಿಯಲ್ಲಿ ಆರಂಭವಾಯಿತು. ಕೆಬಿಸಿಯ 13ನೇ ಆವೃತ್ತಿ ಆಗಸ್ಟ್ 23ರಂದು ಆರಂಭವಾಯಿತು. ಬಾಲಿವುಡ್ ನ ಬಾದಷಾ ಅಮಿತಾಬ್ ಬಚ್ಚನ್ ೧೨ನೇ ಬಾರಿಗೆ ಈ ಪ್ರಖ್ಯಾತ ಟಿವಿ ಶೋವನ್ನು ನಡೆಸಿಕೊಡುತ್ತಿದ್ದಾರೆ. ಹಲವು ತಪ್ಪಾದ ವ್ಯಾಪಾರ ಹೂಡಿಕೆ ಹಾಗೂ ಇತರೆ ಕಾರಣಗಳಿಂದಾಗಿ ಬಹುತೇಕ ದಿವಾಳಿಯಾಗಿದ್ದ ಅಮಿತಾಬ್ ಬಚ್ಚನ್ಗೆ ಕೆಬಿಸಿ ಪುನರ್ಜನ್ಮ ನೀಡಿದ್ದು ಈಗ ಎಲ್ಲರಿಗೂ ಗೊತ್ತಿರುವ ವಿಷಯ.
ಕೆಬಿಸಿ ಭಾರತದಲ್ಲಿ ಮೊದಲಿಗೆ ಪರಿಚಯವಾದಾಗ ಬಂಪರ್ ಬಹುಮಾನ ರೂ.1 ಕೋಟಿ ಆಗಿತ್ತು. ಹಲವು ಸೀಸನ್ ಗಳ ನಂತರ ಆ ಮೊತ್ತವನ್ನು ರೂ.೫ ಕೋಟಿಗೆ ಏರಿಸಲಾಯಿತು. ೨೦೧೧ರಲ್ಲಿ ಮೊಟ್ಟ ಮೊದಲ ಬಾರಿಗೆ ಬಿಹಾರ ಮೂಲದ ಸುಶಿಲ್ ಕುಮಾರ್ ಕೆಬಿಸಿಯಲ್ಲಿ ರೂ.೫ ಕೋಟಿ ಗೆದ್ದು ದಾಖಲೆ ನಿಮಿಸುವುದರ ಜೊತೆಗೆ ಇಡೀ ದೇಶದ ಗಮನ ಸೆಳೆದಿದ್ದರು. ಭಾರತದ ಯಾವುದೇ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಇಷ್ಟು ಮೊತ್ತದ ಬಹುಮಾನವನ್ನು ಗೆದ್ದ ಇತಿಹಾಸವೇ ಇರಲಿಲ್ಲ. ಸುಶಿಲ್ ಕುಮಾರ್ ಬಿಹಾರದ ಮಧ್ಯಮವರ್ಗದ ಹಿನ್ನೆಲೆಯಿಂದ ಬಂದವರಾಗಿದ್ದರು. ಐದು ಕೋಟಿ ಸುಶಿಲ್ ಕುಮಾರ್ ಪಾಲಿಗೆ ಬಂಪರ್ ಮೊತ್ತವಾಗಿತ್ತು. ಆ ಮೊತ್ತದಲ್ಲಿ ಆತ ಕನಸಿನ ಜೀವನವನ್ನು ನಡೆಸಬಹುದಾಗಿತ್ತು. ಆದರೆ ದುರಾದೃಷ್ಟವಶಾತ್ ಸುಶಿಲ್ ಕುಮಾರ್ ತಾನು ಕೆಬಿಸಿಯಲ್ಲಿ ಗೆದ್ದ ಬೃಹತ್ ಮೊತ್ತವನ್ನು ಬುದ್ದಿವಂತಿಕೆಯೊಂದಿಗೆ ಹೂಡಿಕೆ ಮಾಡದ ಕಾರಣ ಎಲ್ಲವನ್ನೂ ಕಳೆದುಕೊಂಡು ಇದೀಗ ದಿವಾಳಿಯಾಗಿದ್ದಾರೆ. ಕೆಬಿಸಿಯ ಈ ಹಳೆಯ ವಿಜೇತ ತನ್ನ ಕತೆಯನ್ನು ಕಳೆದ ವರ್ಷ ತನ್ನ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಕೆಬಿಸಿಯ ೧೩ನೇ ಆವೃತ್ತಿ ಮೊದಲ ಕಂತು ಬಹಳ ವಿನೋದಭರಿತವಾಗಿತ್ತು. ಆ ಕಂತಿನಲ್ಲಿ ಬಿಗ್ ಬಿ ಸ್ಪರ್ಧಿಗಳನ್ನು ಅತ್ಯುತ್ಸಾಹದಿಂದ ಪರಿಚಯ ಮಾಡಿಕೊಟ್ಟಿದ್ದರು. ೨೦೧೧ರಲ್ಲಿ ಮೂಡಿಬಂದ ಕೆಬಿಸಿ ೧೩ನೇ ಆವೃತ್ತಿಯಲ್ಲಿ ಬಿಗ್ ಬಿ ಬಿಹಾರದ ಸುಶಿಲ್ ಕುಮಾರ್ ಅವರಿಗೆ ರೂ.5 ಕೋಟಿ ಮೊತ್ತದ ಚೆಕ್ ಅನ್ನು ನೀಡಿದ್ದರು. ಸುಶಿಲ್ ಕುಮಾರ್ ಕೆಬಿಸಿಯಲ್ಲಿ ಅಷ್ಟು ಬೃಹತ್ ಮೊತ್ತವನ್ನು ಗೆದ್ದ ನಂತರ ತನ್ನ ಜೀವನದಲ್ಲಿ ಕೆಟ್ಟ ದಿನಗಳು ಹೇಗೆ ಆರಂಭವಾಯಿತು ಎಂಬ ಕುರಿತು ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ.
“೨೦೧೫-೨೦೧೬ನೇ ಇಸವಿ ನನ್ನ ಜೀವನದ ಅತ್ಯಂತ ಸವಾಲಿನ ದಿನಗಳಾಗಿದ್ದವು. ನನಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ಕೆಬಿಸಿಯಲ್ಲಿ ಗೆದ್ದ ನಂತರ ನಾನು ನನ್ನ ಸ್ವಂತ ಊರಿನಲ್ಲಿ ಸೆಲೆಬ್ರಿಟಿ ಆಗಿದ್ದೆ. ಬಿಹಾರ ರಾಜ್ಯದಾದ್ಯಂತ ಒಂದು ತಿಂಗಳಲ್ಲಿ ೧೦, ಕೆಲವು ಬಾರಿ ೧೫ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಆ ಮೂಲಕ ನಾನು ಕಲಿಕೆಯಿಂದ ದೂರವುಳಿದೆ. ಸ್ಥಳೀಯ ಸೆಲೆಬ್ರಿಟಿ ಆಗಿದ್ದ ಕಾರಣ ನಾನು ಮಾಧ್ಯಮವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೆ. ಕೆಲವೊಮ್ಮೆ ಅಲ್ಲಿನ ಪತ್ರಕರ್ತರು ನನ್ನ ಸಂದರ್ಶನ ನಡೆಸಿ ನನ್ನ ಬಗ್ಗೆ ಬರೆಯುತ್ತಿದ್ದರು. ಆಗ ನನಗೆ ಪತ್ರಕರ್ತರೊಂದಿಗೆ ಹೇಗೆ ಮಾತನಾಡಬೇಕು ಎಂದು ಅನುಭವಿರಲಿಲ್ಲ. ಅವರು ಈಗ ಏನು ಮಾಡುತ್ತಿದ್ದೀರಾ ಎಂದು ಕೇಳಿದಾಗ ನಾನು ಆರಂಭಿಸಿದ್ದಂತಹ ಕೆಲವು ವ್ಯಾಪಾರಗಳ ಕುರಿತು ಹೇಳುತ್ತಿದ್ದೆ. ಆದರೆ ನಾನು ಆರಂಭಿಸಿದ ಎಲ್ಲಾ ವ್ಯಾಪಾರಗಳೂ ಕೇವಲ ಕೆಲವೇ ದಿನಗಳ ನಂತರ ಕೈಕೊಡುತ್ತಿದ್ದವು.”
ಸುಶಿಲ್ ಸ್ವಲ್ಪ ಮಟ್ಟಿಗೆ ದಾನ ಮಾಡುವ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ ಸ್ವಲ್ಪ ಸಮಯದ ನಂತರ ಅದೂ ಒಂದು ರೀತಿಯ ಪ್ರಹಸನ ಎಂದು ಮನಗಂಡರು. ಇದರಿಂದಾಗಿ ಪತ್ನಿಯೊಂದಿಗಿನ ಆತನ ಸಂಬಂಧ ಹಳಸಿತು. “ಕೆಬಿಸಿ ನಂತರ ನಾನು ಲೋಕೋಪಕಾರಿಯಾದೆ. ಗೌಪ್ಯವಾಗಿ ದಾನಗಳನ್ನು ಮಾಡತೊಡಗಿದೆ. ಒಂದು ತಿಂಗಳಲ್ಲಿ ಸಾವಿರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಇದರಿಂದಾಗಿ ಬಹುತೇಕರು ನನಗೆ ಮೋಸ ಮಾಡಿದರು. ಆದರೆ ನಾನು ಮೋಸ ಹೋಗುತ್ತಿದ್ದೇನೆ ಎಂಬ ವಿಷಯ ನನಗೆ ಬಹಳ ನಿಧಾನವಾಗಿ, ಅಂದರೆ ದಾನ ನೀಡಿ ಬಹಳ ದಿನಗಳ ನಂತರ ಗೊತ್ತಾಯಿತು. ಇದರಿಂದಾಗಿ ನನ್ನ ಪತ್ನಿಯೊಂದಿಗಿನ ನನ್ನ ಸಂಬಂಧ ಹಳಸಿತು. ನನ್ನ ಪತ್ನಿ, ನಿನಗೆ ಯಾರು ಸರಿ, ಯಾರು ಸರಿಯಿಲ್ಲ ಎಂದು ತಿಳಿಯುವುದಿಲ್ಲ, ನನಗೆ ಭವಿಷ್ಯದ ಬಗ್ಗೆ ಯಾವುದೇ ಚಿಂತೆಯಿಲ್ಲ ಎಂದು ದೂರುತ್ತಿದ್ದಳು. ಇದರಿಂದಾಗಿ ನಾವಿಬ್ಬರೂ ಸಾಕಷ್ಟು ಬಾರಿ ಜಗಳವಾಡುತ್ತಿದ್ದೆವು.”
ಮನಸ್ಸು ಕೆಟ್ಟ ಕಾರಣದಿಂದಾಗಿ ಸುಶಿಲ್ ಮದ್ಯಪಾನದ ಅಭ್ಯಾಸಕ್ಕೂ ಬಿದ್ದರಂತೆ. “ನಾನು ನಡೆಸುತ್ತಿದ್ದಂತಹ ವ್ಯವಹಾರದಿಂದಾಗಿ ಮಾಧ್ಯಮ ಕಲಿಯುತ್ತಿದ್ದಂತಹ ಕೆಲವು ಹುಡುಗರ ಪರಿಚಯವಾಯಿತು. ಜೊತೆಗೆ ಕೆಲವು ರಂಗ ಕಲಾವಿದರ ಪರಿಚಯವೂ ಆಯಿತು. ಆ ವಿದ್ಯಾರ್ಥಿಗಳು ಮತ್ತು ಕಲಾವಿದರು ಯಾವುದಾದರೂ ವಿಷಯವನ್ನು ಮಾತನಾಡುವಾಗ ಭಯವಾಗುತಿತ್ತು. ಏಕೆಂದರೆ ಆ ವಿಷಯಗಳ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ನಿಧಾನವಾಗಿ ಇತರೆ ಅಭ್ಯಾಸಗಳ ಜೊತೆಗೆ ಮದ್ಯಪಾನ ಮತ್ತು ಧೂಮಪಾನ ಅಭ್ಯಾಸವಾಯಿತು. ನಾನು ದೆಹಲಿಯಲ್ಲಿ ಯಾವಾಗಲಾದರೂ ಒಂದು ವಾರದವರೆಗೆ ಉಳಿದುಕೊಳ್ಳಬೇಕಾಗಿ ಬಂದಾಗ ಏಳು ವಿವಿಧ ಗುಂಪಿನ ಜನರೊಂದಿಗೆ ಸೇರಿ ಕುಡಿಯುವುದು, ಧೂಮಪಾನ ಮಾಡುತ್ತಿದ್ದೆ. ನನಗೆ ಅವರ ಮಾತುಗಳು ಬಹಳ ಆಕರ್ಷಿಸುತ್ತಿದ್ದವು. ಅವರ ಸಂಗ ಮಾಡಿ ಮಾಧ್ಯಮವನ್ನು ಬಹಳ ಹಗುರವಾಗಿ ಕಾಣತೊಡಗಿದೆ.
ಕೆಲವು ದಿನಗಳ ನಂತರ ಸುಶಿಲ್ ಕುಮಾರ್ ತಾನು ದಿವಾಳಿ ಆಗಿರುವ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರು. ಇದಾದ ಕೂಡಲೇ ಜನರು ಈತನನ್ನು ಸಂಪರ್ಕಿಸುವುದನ್ನು ನಿಲ್ಲಿಸಿದರಂತೆ. “ನಾನು ದಿವಾಳಿ ಹೇಗೆ ಆದೆ ಎನ್ನುವುದನ್ನು ನೀವು ಕೇಳಿದರೆ, ನಿಮಗೆ ಒಂದು ಚಲನಚಿತ್ರವನ್ನು ನೋಡಿದಂತಾಗುತ್ತದೆ. ಒಂದು ದಿನ ನಾನು ಸುಮ್ಮನೆ ಹಾಗೇ ಸುತ್ತಾಡುತ್ತಿದ್ದೆ. ಆಂಗ್ಲ ಪತ್ರಿಕೆಯ ಓರ್ವ ಪತ್ರಕರ್ತ ನನ್ನನ್ನು ಸಂದರ್ಶಿಸಿದ. ಆತ ಕೇಳಿದ ಒಂದು ಪ್ರಶ್ನೆ ನನಗೆ ಬಹಳ ಸಿಟ್ಟು ತರಿಸಿತು. ಆಗ ನಾನು ನನ್ನ ಬಳಿ ಇರುವ ಎಲ್ಲಾ ಹಣವೂ ಖಾಲಿಯಾಗಿದ್ದು, ಈಗ ನಾನು ಎರಡು ಹಸುಗಳನ್ನು ಸಾಕಿ, ಹಾಲನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇನೆ ಎಂದು ಉತ್ತರಿಸಿದೆ. ನನ್ನ ಈ ಉತ್ತರದಿಂದ, ಮಾಧ್ಯಮದಲ್ಲಿ ಪ್ರಕಟವಾದ ಆ ಸುದ್ದಿ ನನ್ನ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎಂಬುದು ನಿಮಗೆಲ್ಲಾ ಗೊತ್ತೇ ಆಗಿರುತ್ತದೆ.”
ಕೆಲವು ದಿನಗಳ ನಂತರ ಸುಶಿಲ್ ಕುಮಾರ್ ತನ್ನ ಪತ್ನಿಯಿಂದ ದೂರವಾದ. ಆಗ ಆತ ಚಿತ್ರನಿರ್ಮಾಣವನ್ನು ಪ್ರಯತ್ನಿಸಲು ಮುಂಬೈಗೆ ತೆರಳಿದರಂತೆ. “ಚಲನಚಿತ್ರ ನಿರ್ದೇಶಕನಾಗುವ ಬಯಕೆಯೊಂದಿಗೆ ನಾನು ಮುಂಬೈಗೆ ಬಂದೆ. ಚಲನಚಿತ್ರಗಳಿಗೆ ಹಾಡುಗಳನ್ನು ಬರೆಯುತ್ತಿದ್ದ ಓರ್ವ ಸ್ನೇಹಿತನ ಜೊತೆ ವಾಸಿಸಲು ಆರಂಭಿಸಿದೆ. ಆತನಿದ್ದ ಕೊಠಡಿಯಲ್ಲಿ ನಾನು ವಾಸಿಸುತ್ತಿದ್ದೆ. ಪ್ರತಿ ದಿನ ಒಂದು ಚಲನಚಿತ್ರ ನೋಡುವುದು, ಅಥವಾ ನಾನು ನನ್ನ ಜೊತೆ ತಂದಿದ್ದಂತಹ ಪುಸ್ತಕಗಳನ್ನು ಓದುವುದು ನನ್ನ ದಿನಚರಿಯಾಯಿತು. ಇದು ಆರು ತಿಂಗಳವರೆಗೆ ಮುಂದುವರೆಯಿತು. ಆಗ ನಾನು ಒಂದು ದಿನಕ್ಕೆ ಒಂದು ಪ್ಯಾಕೆಟ್ ಸಿಗರೇಟ್ ಸೇದುತ್ತಿದ್ದೆ. ಅಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಕಾರಣದಿಂದಾಗಿ ನನ್ನನ್ನು ನಾನು ಅವಲೋಕಿಸಿಕೊಳ್ಳಲಾರಂಭಿಸಿದೆ. ಆಗ ನನಗೆ ನನ್ನ ಹಲವು ತಪ್ಪುಗಳ ಅರಿವಾಯಿತು. ಈ ನಡುವೆ ನಾನು ಮೂರು ಕತೆಗಳನ್ನೂ ಬರೆದೆ. ನನ್ನ ಕತೆಗಳು ಒಂದು ಚಲನಚಿತ್ರ ನಿರ್ಮಾಣ ಸಂಸ್ಥೆಗೆ ಇಷ್ಟವಾಗಿ ನನಗೆ ರೂ.೨೦,೦೦೦ ನೀಡಿದರು. ನಂತರ ನಾನು ಮುಂಬೈನಿಂದ ನನ್ನ ಸ್ವಂತ ಊರಿಗೆ ಹಿಂದಿರುಗಿ ಶಿಕ್ಷಕನಾಗಲು ತೀರ್ಮಾನಿಸಿದೆ. ಇದರಲ್ಲಿ ಯಶಸ್ವಿಯೂ ಆದೆ.”
ಸುಶಿಲ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವಂತೆ ಪ್ರಸ್ತುತ ಅವರ ಜೀವನ ಸರಿಯಾದ ರೀತಿಯಲ್ಲಿ ಸಾಗುತ್ತಿದೆಯಂತೆ. “ಮುಂಬೈ ನಗರದಲ್ಲಿ ಆರು ತಿಂಗಳು ಕಳೆದ ನಂತರ ನಾನು ಮುಂಬೈಗೆ ಚಲನಚಿತ್ರ ನಿರ್ಮಾಣ ಮಾಡಲು ಬಂದೆ. ಆದರೆ ವಾಸ್ತವದಲ್ಲಿ ನಾನು ನನ್ನ ಎಲ್ಲಾ ಸಮಸ್ಯೆಗಳಿಂದ ದೂರ ಓಡಲು ಪ್ರಯತ್ನಿಸುತ್ತಿದ್ದೇನೆ ಎಂಬ ಅರಿವಾಯಿತು. ನಮ್ಮ ಹೃದಯ ಏನು ಹೇಳುತ್ತದೋ ಆ ಕೆಲಸವನ್ನು ಮಾಡಿದರೆ ಮಾತ್ರ ನಮಗೆ ಸಂತೋಷ ದೊರೆಯುತ್ತದೆ ಎಂಬುದನ್ನು ಆಗ ಅರಿತುಕೊಂಡೆ. ಆಗ ನಾನು ಮನೆಗೆ ಹಿಂದಿರುಗಿ ಶಿಕ್ಷಕನಾಗಲು ತೀರ್ಮಾನಿಸಿ, ಪ್ರಶಿಕ್ಷಣ ಕೋರ್ಸ್ ಗೆ ಸೇರಲು ಸಿದ್ಧತೆ ಆರಂಭಿಸಿದೆ. ಇದರಲ್ಲಿ ಯಶಸ್ವಿಯೂ ಆದೆ. ಈಗ ನಾನು ಸಾಕಷ್ಟು ಪರಿಸರ ಸಂರಕ್ಷಣಾ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದು, ಇದರಿಂದ ನೆಮ್ಮದಿ ಲಭಿಸಿದೆ. ೨೦೧೬ರಲ್ಲಿ ಕೊನೆಯ ಬಾರಿಗೆ ಮದ್ಯಪಾನ ಮಾಡಿದ್ದೆ. ಜೊತೆಗೆ ಈಗ ಧೂಮಪಾನವನ್ನೂ ನಿಲ್ಲಿಸಿದ್ದೇನೆ. ಈಗ ಪ್ರತಿ ದಿನ ನನಗೆ ಒಂದು ಹೊಸ ದಿನಾಚರಣೆಯಂತೆ ಭಾಸವಾಗುತ್ತಿದೆ. ಈಗ ನಾನು ನನಗೆ ಜೀವಿಸಲು ಎಷ್ಟು ಬೇಕೋ ಅಷ್ಟು ಮಾತ್ರ ಸಂಪಾದಿಸಿದರೆ ಸಾಕು ಎನಿಸಿದೆ. ಪರಿಸರ ಸಂರಕ್ಷಣೆಗಾಗಿ ಮತ್ತು ನನ್ನ ಉಳಿವಿಗೆ ಎಷ್ಟು ಬೇಕೋ ಅಷ್ಟು ಸಂಪಾದಿಸಿದರೆ ಸಾಕು,” ಎಂದು ಬರೆದುಕೊಂಡಿದ್ದಾರೆ.
ಸುದ್ದಿ ಮೂಲ: ಇಂಡಿಯಾ ಟುಡೆ
Key words: Bihar- Sushil Kumar- won – Rs 5 crore – first time –KBC- went-bankrupt.