ಬೆಂಗಳುರು:ಜೂ-18:(www.justkannada.in) ಸಾಲ ವಸೂಲಿ ಏಜೆಂಟರ ಸೋಗಿನಲ್ಲಿ ಬಂದ ಖದೀಮರಿಬ್ಬರು, ವ್ಯಕ್ತಿಯೊಬ್ಬನಿಂದ ಬೈಕ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಆಸಿಫ್ ಇಬ್ರಾಹಿಂ ಬೈಕ್ ಕಳೆದುಕೊಂಡ ವ್ಯಕ್ತಿ. ರಂಜಾನ್ ಆಚರಿಸಲು ಮಂಗಳೂರಿಗೆ ಹೋಗಬೇಕೆಂದು ಬೈಕ್ ಅನ್ನು ಸ್ನೇಹಿತ ರಷೀದ್ಗೆ ನೀಡಿದ್ದ ಇಬ್ರಾಹಿಂ. ಆತ ಮುರುಗೇಶಪಾಳ್ಯದಲ್ಲಿ ಮೊಬೈಲ್ ಶಾಪ್ ನಡೆಸುತ್ತಿದ್ದು, ತಮ್ಮ ಕೆಲಸಗಳಿಗಾಗಿ ರಷೀದ್, ಬೈಕ್ನ್ನು ಕೆಲಸಗಾರ ಮೃದುಲ್ನಿಗೆ ಕೊಟ್ಟಿದ್ದ. ಆತ ಜೂ.8ರಂದು ಬೆಳಗ್ಗೆ 11.30ರ ಸುಮಾರಿಗೆ ಕೋರಮಂಗಲ ಸೋನಿ ಸಿಗ್ನಲ್ ಬಳಿ ನಿಂತಿದ್ದಾಗ ಬಂದ ಖದೀಮರಿಬ್ಬರು ಬೈಕ್ ನಿಲ್ಲಿಸಿ ಕೀ ಕೊಡುವಂತೆ ಕೇಳಿದ್ದಾರೆ. ಆತಂಕಗೊಂಡ ಮೃದುಲ್, ಬೈಕ್ ನಿಲ್ಲಿಸಿದ್ದ. ಕಾರಣವೇನೆಂದು ಕೇಳಿದಾಗ, ಈ ಬೈಕ್ನ ಮೇಲೆ ಸಾಲ ಇದ್ದು 8 ತಿಂಗಳಿಂದ ಪಾವತಿಸಿಲ್ಲ. ಹೀಗಾಗಿ, ವಶಕ್ಕೆ ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ತಕ್ಷಣ ಮೃದುಲ್, ರಷೀದ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆತ ಬೈಕ್ ಮಾಲೀಕ ಆಸಿಫ್ ಇಬ್ರಾಹಿಂಗೆ ಕರೆ ಮಾಡಿ ಬೈಕ್ ಮೇಲೆ ಸಾಲವಿದೆಯೇ ಎಂದು ವಿಚಾರಿಸಿದ್ದಾನೆ. ಅಷ್ಟರಲ್ಲೇ ಖದೀಮರು, ಮೃದುಲ್ನಿಂದ ಕೀ ಕಸಿದುಕೊಂಡು ಬೈಕ್ನೊಂದಿಗೆ ಪರಾರಿಯಾಗಿದ್ದಾರೆ.
ಈ ಕುರಿತು ಇಬ್ರಾಹಿಂ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರು ತಿಂಗಳ ಹಿಂದೆ ಅಶೋಕ್ ಎಂಬುವರಿಂದ ಬೈಕ್ ಖರೀದಿಸಿದ್ದು, ಬೈಕ್ ಮೇಲೆ ಯಾವುದೇ ಸಾಲ ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.