ಬೆಂಗಳೂರು:ಮೇ-2: ಉತ್ತರ ಕರ್ನಾಟಕದ ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಸಂಗಮವಾದ ಚಿಕ್ಕಸಂಗಮದಲ್ಲಿ ಪಕ್ಷಿಧಾಮ ನಿರ್ವಿುಸುವ ಯೋಜನೆಯನ್ನು ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ಅರಣ್ಯ ವಲಯ ವ್ಯಾಪ್ತಿಯ ಚಿಕ್ಕಸಂಗಮಕ್ಕೆ ಬರುವ ಪಕ್ಷಿಗಳ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವಿದೆ.
ಆದ್ದರಿಂದ ಈ ಸ್ಥಳವನ್ನು ಪಕ್ಷಿಧಾಮವನ್ನಾಗಿ ಮಾರ್ಪ ಡಿಸಲು ಅಧಿಕಾರಿಗಳು ಹಲವು ಕ್ರಮಗಳನ್ನು ರೂಪಿಸಿದ್ದಾರೆ.
ಕಾವಲುಗಾರರ ನೇಮಕ: ಚಿಕ್ಕ ಸಂಗಮಕ್ಕೆ 100ಕ್ಕೂ ಅಧಿಕ ಪ್ರಭೇದಗಳಿರುವ 4 ಸಾವಿರ ಪಕ್ಷಿಗಳು ವಲಸೆ ಬರುತ್ತದೆ. ಪ್ರತಿ ವರ್ಷ ಡಿಸೆಂಬರ್ನಲ್ಲಿ ಬರುವ ಪಕ್ಷಿಗಳು ಮೊಟ್ಟೆ ಇಟ್ಟು ಮೇ ಅಂತ್ಯದವರೆಗೂ ಈ ಸ್ಥಳದಲ್ಲೇ ನೆಲೆಸಿರುತ್ತವೆ. ನಂತರ ಇಲ್ಲಿಂದ ಬೇರೆ ಸ್ಥಳಕ್ಕೆ ಮರಳುತ್ತವೆ. ಪಕ್ಷಿಗಳಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಲಸೆ ಬರುವ ಪಕ್ಷಿಗಳ ಸಂರಕ್ಷಣೆಗಾಗಿ ಕಾವಲುಗಾರರನ್ನು ನೇಮಕ ಮಾಡಲಾಗಿದೆ.
ಪಕ್ಷಿಗಳ ಅಧ್ಯಯನ: ಬೇಸಿಗೆ ಆರಂಭವಾಗಿರು ವುದರಿಂದ ಆಲಮಟ್ಟಿ ನದಿಯ ಹಿನ್ನೀರಿನ ಪ್ರಮಾಣ ಕಡಿಮೆಯಾಗಲಿದೆ. ಋತುಮಾನಕ್ಕೆ ತಕ್ಕಂತೆ ವಲಸೆ ಬರುವ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಿದ ನಂತರವಷ್ಟೇ ಚಿಕ್ಕಸಂಗಮ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪಕ್ಷಿಧಾಮವೆಂದು ಘೊಷಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾನಾಡಿಗಳ ಸಂತತಿ
ಫ್ಲೆಮಿಂಗ್, ಲೇಸರ್ ವ್ಹಿಸ್ಲಿಂಗ್ ಡಕ್, ರೂಡಿ ಶೆಲ್ಡಕ್, ಸ್ಪಾಟ್ ಬಿಲ್ಡ್ ಡಕ್, ನಾರ್ಥನ್ ಶಾವೆಲ್ಲರ್, ನಾರ್ಥನ್ ಪಿಂಟೈಲ್, ಬ್ಲ್ಯಾಕ್ ಟೈಲ್ಡ್ ಗಾಡ್ವಿತ್, ಗಾರ್ಗೆನಿ, ವಾರ್ ಹೆಡೆಡ್ಗಲ್, ಲಿಟ್ಲ್ ಗ್ರಿಲ್, ಬ್ರೌನ್ ಹೆಡೆಡ್ ಗಲ್, ಗ್ರೆಹೆರಾನ್, ಪರ್ಪ್ಲ್ ಹೆರಾನ್, ರೆಡ್ ನೆಪಡ್ ಐಬಿಸ್, ಬ್ಲ್ಯಾಕ್ ಹೆಡೆಡ್ ಐಬಿಸ್, ಗ್ಲಾಸಿ ಐಬಿಸ್, ಓರಿಯಂಟಲ್ ಪ್ರಾಟಿನ್ಕೋಲ್, ರೆಡ್ಶಾಕ್, ಸ್ಯಾಂಡ್ಪೆಪ್ಪರ್, ಬ್ಲ್ಯಾಕ್ ವಿಂಗಡ್ ಸ್ಟಿಲ್ಟ್ ಮತ್ತಿತರ ಪ್ರಭೇದಗಳ ಪಕ್ಷಿಗಳು ಚಿಕ್ಕಸಂಗಮಕ್ಕೆ ಪ್ರತಿ ವರ್ಷ ಬರುತ್ತವೆ.
ಪಕ್ಷಿಧಾಮಕ್ಕಾಗಿ ಗುರುತಿಸಲಾಗಿರುವ ಚಿಕ್ಕಸಂಗಮದಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅನುಮತಿ ದೊರೆತ ನಂತರವಷ್ಟೇ ಈ ಯೋಜನೆ ಜಾರಿಗೊಳಿಸಲಾಗುವುದು .
| ಬಸವರಾಜಯ್ಯ ವಿಭಾಗೀಯ ಅರಣ್ಯಾಧಿಕಾರಿ, ಬಾಗಲಕೋಟೆ
ಕೃಪೆ:ವಿಜಯವಾಣಿ