ಬಿಟ್ ಕಾಯಿನ್ ಆರೋಪಿ ಜೀವಕ್ಕೆ ಅಪಾಯ ಇದ್ದರೆ ಸರಕಾರ ರಕ್ಷಣೆ ಕೊಡಲಿ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ನವೆಂಬರ್,16,2021(www.justkannada.in): ಬಿಟ್ ಕಾಯಿನ್ ಆರೋಪಿ ಜೀವಕ್ಕೆ ಅಪಾಯ ಇದ್ದರೆ ಸರಕಾರ ರಕ್ಷಣೆ ಕೊಡಲಿ. ಆತನ ಜೀವಕ್ಕೆ ಅಪಾಯ ಇರುವ ವಿಷಯ ಕಾಂಗ್ರೆಸ್ ನಾಯಕರಿಗೆ ಗೊತ್ತಿರಬಹುದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಮುಂದಿನ ಪಾಲಿಕೆ ಚುನಾವಣೆ ಹಾಗೂ 2023ರ ವಿಧಾನಸಭೆ ಚುನಾವಣೆಗೆ ರಾಜಧಾನಿಯ  ಮುಖಂಡರು, ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ನಗರದಲ್ಲಿ ಜೆಡಿಎಸ್ ಸಂಘಟನಾ ಕಾರ್ಯಾಗಾರ ಜನತಾ ಸಂಗಮ ನಡೆಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಕಾರ್ಯಗಾರದಲ್ಲಿ ಭಾಗಿಯಾಗುವುದಕ್ಕೆ ಮುನ್ನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ  ಮಾತನಾಡಿದ  ಅವರು, ಬೆಂಗಳೂರು ನಗರಕ್ಕೆ ಜೆಡಿಎಸ್ ಪಕ್ಷವು ಅನೇಕ  ಅಭಿವೃದ್ಧಿ ಯೋಜನೆಗಳನ್ನು ನೀಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪಕ್ಷದ ಜವಾಬ್ದಾರಿ ಏನಿದೆ ಎಂಬ ಬಗ್ಗೆಯೂ ಇಂದಿನ ಕಾರ್ಯಗಾರದಲ್ಲಿ ಚರ್ಚೆ ನಡೆಸಲಾಗುವುದು. ಜತೆಗೆ, ಪಕ್ಷದ ಸಂಘಟನೆಯಲ್ಲಿ ಎಲ್ಲೆಲ್ಲಿ ಲೋಪ ಆಗಿದೆ ಎನ್ನುವುದನ್ನು ಚರ್ಚೆ ಮಾಡಿ ಸರಿಪಡಿಸಲಾಗುವುದು ಎಂದು ಅವರು ಹೇಳಿದರು.

ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ ಹಾಗೂ ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ನಗರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರು, ಐಟಿ ಬಿಟಿ, ಮೆಟ್ರೋ, ಮೂಲಸೌಕರ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ನಗರಕ್ಕೆ ಸಾಕಷ್ಟು ಕೆಲಸ ಮಾಡಿದ್ದಾಗ್ಯೂ ಆ ಬಗ್ಗೆ ಜನರಿಗೆ ಪೂರ್ಣ ಮಾಹಿತಿ ಇಲ್ಲ. ಪಕ್ಷದ ಸಾಧನೆಗಳನ್ನು ಜನತೆಗೆ ತಲುಪಿಸುವ ಕೆಲಸ ಮಾಡುವ ವಿಚಾರವಾಗಿ ಕಾರ್ಯಗಾರದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದರು.

ಬಿಬಿಎಂಪಿ ಚುನಾವಣೆಗೆ ತಯಾರಿ:

ನಮ್ಮ ಪಕ್ಷವನ್ನು ಪಾಲಿಕೆ ಚುನಾವಣೆಗೆ ಸಜ್ಜು ಮಾಡುತ್ತಿದ್ದೇವೆ. ಫೆಬ್ರವರಿಯಲ್ಲಿ ಬಿಬಿಎಂಪಿ ಚುನಾವಣೆ ಎನ್ನುವ ಸುದ್ದಿ ಇದೆ. ಹೀಗಾಗಿ ಪಕ್ಷದ ಸಂಘಟನೆಗೆ ಹೆಚ್ಚು ಗಮನ ಕೊಡಲಾಗುತ್ತದೆ. ವಾರ್ಡ್ ವಿಂಗಡಣೆ ಕೆಲಸ ನಡೆಯುತ್ತಿದೆ. ನಗರದ ಏಳೆಂಟು ವಿಧಾನಸಭೆ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಉತ್ತಮ ಶಕ್ತಿ ಹೊಂದಿದೆ. ಉಳಿದ ಕ್ಷೇತ್ರಗಳಲ್ಲಿ ಬಲ ಹೆಚ್ಚಿಸಿಕೊಳ್ಳುವ ಬಗ್ಗೆಯೂ ಚರ್ಚೆ ಮಾಡುತ್ತಿದ್ದೇವೆ ಎಂದು ಹೆಚ್.ಡಿಕೆ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಆ ಮಾತನ್ನು ಈಗಾಗಲೇ ಹೇಳಿದ್ದೇವೆ ಎಂದು ಅವರು ತಿಳಿಸಿದರು.

ಬಿಟ್ ಕಾಯಿನ್ ಬರೀ ಗೊಂದಲ:

ಬಿಟ್ ಕಾಯಿನ್ ವಿಚಾರದಲ್ಲಿ ಬರೀ ಗೊಂದಲ ಎಬ್ಬಿಸಲಾಗುತ್ತಿದೆ. ತನಿಖೆಯನ್ನು ಇಡಿಗೆ (ಜಾರಿ ನಿರ್ದೇಶನಾಲಯ) ಕೊಡಲಾಗಿದೆ ಅಂತಿದ್ದಾರೆ. ನಿಖರ ಮಾಹಿತಿ ಯಾರ ಬಳಿಯೂ ಇಲ್ಲ. ಮುಖ್ಯ ಆರೋಪಿಯನ್ನು ಏಳೆಂಟು ಬಾರಿ ಅರೆಸ್ಟ್ ಮಾಡಿ ತನಿಖೆಗೆ ಒಳಪಡಿಸಲಾಗಿದೆ. ಸರ್ಕಾರವು ಈ ಹಗರಣದ  ಬಗ್ಗೆ ನುರಿತ ತಜ್ಞರ ಸಹಕಾರ ಪಡೆದು ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಅವರು ಸರಕಾರಕ್ಕೆ ಸಲಹೆ ಮಾಡಿದರು.

ಆರೋಪಿ ಶ್ರೀಕಿ ಜೀವಕ್ಕೆ ಅಪಾಯ ಇದೆ. ಆತನಿಗೆ ಪೊಲೀಸ್ ರಕ್ಷಣೆ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒತ್ತಾಯ ಮಾಡಿದ್ದರಲ್ಲಾ ಎಂದು ಗಮನ ಸೆಳೆದಾಗ ಇದಕ್ಕೆ ಉತ್ತರಿಸಿದ ಹೆಚ್ ಡಿ ಕುಮಾರಸ್ವಾಮಿ, ಇಷ್ಟು ವರ್ಷ ಆತನ ಜೀವಕ್ಕೆ ಅಪಾಯ ಇರಲಿಲ್ಲ. ಈಗ ಅವನಿಗೆ ಜೀವ ಬೆದರಿಕೆ ಇದೆ ಎಂದರೆ ಹೇಗೆ? ಕಾಂಗ್ರೆಸ್ ಪಕ್ಷಕ್ಕೆ ಈ ಬಗ್ಗೆ ನಿಖರ ಮಾಹಿತಿ ಇರಬೇಕು. ರಕ್ಷಣೆ ಕೊಡೋದು ತಪ್ಪಲ್ಲ, ಕೊಡಲಿ. ಇದುವರೆಗೆ ಎಂಥೆಂತವರಿಗೋ ರಕ್ಷಣೆ ನೀಡಲಾಗಿದೆ. ಇವರಿಗೂ ಕೊಡಲಿ, ಬೇಡ ಅಂದವರು ಯಾರು?” ಎಂದು ಹೆಚ್.ಡಿಕೆ ತಿಳಿಸಿದರು.

ಯಾರನ್ನೋ ಮೆಚ್ಚಿಸಲಿಕ್ಕೆ ನಾನು ಗ್ರಾಮ ವಾಸ್ತವ್ಯ ಮಾಡಲಿಲ್ಲ: ನನ್ನ ಗ್ರಾಮ ವಾಸ್ತವ್ಯಕ್ಕೆ ಗಾಂಧಿ ಸ್ಪೂರ್ತಿ

ಪೇಜಾವರ ಶ್ರೀಗಳ ಬಗ್ಗೆ ಹಾಗೂ ತಮ್ಮ ಗ್ರಾಮ ವಾಸ್ತವ್ಯದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು; “ಮುಖ್ಯಮಂತ್ರಿ ಆಗಿದ್ದಾಗ ನಾನು ಮಾಡಿದ ಗ್ರಾಮ ವಾಸ್ತವ್ಯಕ್ಕೆ ಮಹಾತ್ಮ ಗಾಂಧೀಜಿ ಅವರೇ ಸ್ಪೂರ್ತಿ ಮತ್ತು ಆದರ್ಶ. ಗ್ರಾಮ ವಾಸ್ತವ್ಯ ಅನ್ನೋದು ನಾಟಕೀಯವಾಗಿ ಮಾಡಿಲ್ಲ. ಆತ್ಮತೃಪ್ತಿಗಾಗಿ, ಜನರ ಕೆಲಸ ಮಾಡುವುದಕ್ಕೆ ನಾನು ಆ ಕಾರ್ಯಕ್ರಮ ಮಾಡಿದ್ದು” ಎಂದರು.

ನನ್ನ ಗ್ರಾಮ ವಾಸ್ತವ್ಯದಿಂದ ಅನೇಕರಿಗೆ ಅನುಕೂಲವಾಗಿದೆ. ಯಾರನ್ನೋ ಮೆಚ್ಚಿಸಲಿಕ್ಕೆ ನಾನು ಗ್ರಾಮ ವಾಸ್ತವ್ಯ ಮಾಡಲಿಲ್ಲ ಎಂದ ಅವರು; ಆ ವಿಚಾರಗಳ ಬಗ್ಗೆ ಚರ್ಚೆ ಮಾತನಾಡುವುದು ಅಗತ್ಯ ಇರಲಿಲ್ಲ. ಮುಖ್ಯವಾಗಿ ಧರ್ಮ ಹಾಗೂ ಧಾರ್ಮಿಕ ಗುರುಗಳ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ ಎಂದರು. ಮಾಧ್ಯಮಗೋಷ್ಟಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಸರವಣ, ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್ ಇದ್ದರು.

Key words: BitCoin – accused- life- threatening- protection- former CM-H.D. Kumaraswamy

ENGLISH SUMMARY…

Village Stay program was not conducted to please someone: If the life of the BitCoin accused, let the give protection- HDK
Bengaluru, November 16, 2021 (www.justkannada.in): “If the life of the BitCoin case accused is under threat, let the government give him protection. Maybe the Congress leaders are aware of it,” opined former Chief Minister H.D. Kumaraswamy.
Speaking in Bengaluru today, he opined that the JDS has organized a workshop under the title “Janata Sangama” to prepare the party leaders to face the next BBMP elections and the 2023 assembly elections.
He addressed a press meet at the J.P. Bhavan before participating in the workshop. “The JDS has contributed several development programs in Bengaluru. In today’s workshop, we will discuss the future responsibilities of the party and the drawbacks in organizing the party.”
“When H.D. Devegowda was the Prime Minister, and when I was the Chief Minister, several development programs were done in Bengaluru City. We have done considerable work in various developmental works including drinking water facility, IT, BT, Metro, infrastructure development, etc.,” he added.
Though we have done so much work, the people are not aware of it. Hence in the workshop, we will discuss educating the people about our achievements, he said.
In his reply to a question, he said “several people benefitted from my ‘Village Stay’ program. I don’t think it should be discussed now. Above all, it is incorrect to speak against a religious head and a seer.”
Former MLC Saravana, JDS Bengaluru Urban President R. Prakash were present.
Keywords: JDS/ H.D. Kumaraswamy/ village stay