ಸಿದ್ದರಾಮಯ್ಯ ವಿರುದ್ದ ಬಿಜೆಪಿ ಹುನ್ನಾರ ವಿರೋಧಿಸಿ ಹೋರಾಟ: ‘ಕೈ’ ಮುಖಂಡರ ದುಂಡು ಮೇಜಿನ ಸಭೆಯಲ್ಲಿ ತೀರ್ಮಾನ

ಮೈಸೂರು,ಜುಲೈ,13,2024 (www.justkannada.in): ಸಿಎಂ ಸಿದ್ದರಾಮಯ್ಯ ಅವರ ಏಳಿಗೆ ಸಹಿಸಲಾರದೆ ಸಿಎಂ ಕುರ್ಚಿಯಿಂದ ಅವರನ್ನ ಕೆಳಗಿಸಲು ಬಿಜೆಪಿ ಹುನ್ನಾರ ಮಾಡುತ್ತಿದೆ ಎಂದು ಹಿಂದುಳಿದ ವರ್ಗದ ಜಾಗೃತ ವೇದಿಕೆ ಅಧ್ಯಕ್ಷ  ಕೆ.ಶಿವರಾಮು ವಾಗ್ದಾಳಿ  ನಡೆಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹುನ್ನಾರ ಖಂಡಿಸಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಮುಖಂಡರು ದುಂಡು ಮೇಜಿನ ಸಭೆ ನಡೆಸಿದರು. ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ದಲಿತ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಸಹಯೋಗದೊಂದಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಸಭೆ ನಡೆಯಿತು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ ವಿಜಯ್ ಕುಮಾರ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಶಿವರಾಮು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಮುಂದಿನ‌ ಹೋರಾಟದ ರೂಪುರೇಷೆಗಳ ಕುರಿತು  ಚರ್ಚೆಯಾಯಿತು.

ಸಿಎಂ ಸಿದ್ದರಾಮಯ್ಯ ಹಿಂದುಳಿದ ನಾಯಕರಾಗಿದ್ದು ಅವರು ಎರಡನೇ  ಬಾರಿ ಮುಖ್ಯಮಂತ್ರಿಯಾಗಿರುವ ಕಾರಣ ಸಹಿಸಿಕೊಳ್ಳಲಾಗದೆ ಅವರ ಮೇಲೆ ಇಲ್ಲ ಸಲ್ಲದ ಆರೋಪವನ್ನ ಮಾಡುತ್ತಿದ್ದಾರೆ. ಇದೆಲ್ಲ ಸತ್ಯಕ್ಕೆ ದೂರವಾದದ್ದು, ಸಿಎಂ ಧರ್ಮ ಪತ್ನಿ ಪಾರ್ವತಿ ಅವರಿಗೆ ಮುಡಾ ನಿವೇಶನ ಹಂಚಿಕೆ ಮಾಡಿರುವುದು ಕಾನೂನು ಬದ್ದವಾಗಿದೆ. ಬಿಜೆಪಿ, ಜೆಡಿಎಸ್ ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ. ಬಿಜೆಪಿಯವರ ಒಂದೇ ಒಂದು ಅಜೆಂಡಾ ಅಂದರೆ, ಸಿದ್ದರಾಮಯ್ಯಾವರನ್ನ ಕೆಳಗೆ ಇಳಿಸುವುದಾಗಿದೆ. ಹಿಂದುಳಿದ, ದಲಿತ ,ಅಲ್ಪಸಂಖ್ಯಾತರ ಸಮುದಾಯಗಳ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಹಾಗಾಗಿ ನಾವೆಲ್ಪ ಇಂತಹ ಸಮಯದಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ನಿಂತು ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಿದೆ. ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧಿ ಅಲೆ ಸೃಷ್ಟಿಸುವ ಪ್ರಯತ್ನ ಮಾಡುತ್ತಾರೆ. ಬಿಜೆಪಿಯವ ಷಡ್ಯಂತ್ರ ವಿರುದ್ಧ ನಾವೆಲ್ಲ ಹೋರಾಟ ಮಾಡಬೇಕಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಶಿವರಾಮು, ಮುಡಾ ಹಗರಣದ ನಿಜವಾದ ಪಿತಾಮಹ ಬಿ. ವೈ ವಿಜಯೇಂದ್ರ ಮತ್ತು ಅವರ ತಂದೆ ಯಡಿಯೂರಪ್ಪ. ಇದೆಲ್ಲಾ ನಡೆದಿರುವುದು ಬಿಜೆಪಿ ಅವರ ಸರ್ಕಾರದ ಕಾಲದಲ್ಲಿ. ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿಯಾಗಿದ್ದ ನಟೇಶ್ ಅವರನ್ನ ಮುಡಾ ಆಯುಕ್ತರನ್ನಾಗಿ ನೇಮಕ ಮಾಡಿ ಅವರಿದ್ದ ಸಂದರ್ಭದಲ್ಲಿ ಸಾಕಷ್ಟು ಅಕ್ರಮಗಳು ನಡೆದವು. ಈಗ ಸಿಎಂ ಸಿದ್ದರಾಮಯ್ಯ ಅವರ ಧರ್ಮ ಪತ್ನಿಯ ಹೆಸರಿಗೆ ಕಾನೂನು ಬದ್ದವಾಗಿ ನಿವೇಶನ ಹಂಚಿಕೆ ಮಾಡಿದ್ದು ಅವರ ಕಾಲದಲ್ಲೇ. ಈಗ ಸಿದ್ದರಾಮಯ್ಯ ಅವರ ಏಳಿಗೆ ಸಹಿಸಲಾರದೆ ಸಿಎಂ ಕುರ್ಚಿಯಿಂದ ಕೆಳಗಿಸುವ ಹುನ್ನಾರವನ್ನ ಬಿಜೆಪಿ ಮಾಡುತ್ತಿದೆ. ಇದೆಲ್ಲದರ ವಿರುದ್ಧ ನಾವು ಹೋರಾಟದ ರೂಪುರೇಷೆ ತಯಾರಿಸಲು ಇಂದು ಸಭೆ ಕರೆದಿದ್ದೇವೆ. ಸಭೆಯಲ್ಲಿ ಎಲ್ಲಾ ಅಹಿಂದ ವರ್ಗಗಳ ಮುಖಂಡರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

Key words: BJP, against, Siddaramaiah, mysore, congress, leader