ಯಡಿಯೂರಪ್ಪ ರಾಜೀನಾಮೆ ಹೇಳಿಕೆ : ಅಡಕತ್ತರಿಯಲ್ಲಿ ಬಿಜೆಪಿ ಹೈಕಮಾಂಡ್..!

 

ಮೈಸೂರು, ಜೂ.08, 2021 : (www.justkannada.in news) ಹೈಕಮಾಂಡ್ ಹೇಳಿದ್ರೆ ರಾಜೀನಾಮೆಗೆ ಸಿದ್ಧ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ ಯಡಿಯೂರಪ್ಪನವರ ದಿಢೀರ್ ಹೇಳಿಕೆಯಿಂದ ಕಳೆದ ಒಂದು ವರ್ಷದಿಂದ ದೆಹಲಿ ನಾಯಕರ ಭೇಟಿಗೆ ಕದ್ದು ಮುಚ್ಚಿ ತೆರಳುತ್ತಿದ್ದ ಕೆಲ ಆಕಾಂಕ್ಷಿಗಳಿಗೆ ‘ಬೆಲ್ಲ’ ಸವಿದಂತಾಗಿದೆ.

ಕೊನೆಗೂ ಯಡಿಯೂರಪ್ಪ ಖುರ್ಚಿ ಬಿಟ್ಟು ಮೇಲೇಳುವ ಮಾತಾಡಿರೋದು ಕೆಲ ನಾಯಕರಲ್ಲಿ ಆಸೆಯ ಹಕ್ಕಿ ಮತ್ತೊಮ್ಮೆ ಗರಿಬಿಚ್ಚುವಂತೆ ಮಾಡಿದೆ. ಅಷ್ಟಕ್ಕೂ ಈ ಹೊತ್ತಲ್ಲಿ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಮಾತನಾಡೀರೋ ಹಿಂದೆ ಕೆಲ ಕಾರಣಗಳೂ ಇವೆ.

ಹಲವು ದಿನಗಳಿಂದ ಪಕ್ಷದ ಒಳಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಸಿಎಂ ಬೇಸತ್ತಿದ್ದಾರೆ. ಕೊರೊನಾ ವೇಳೆ ಆರೋಗ್ಯದ ಬಗ್ಗೆ ಚಿಂತಿಸದೆ ಇಳಿ ವಯಸ್ಸಿನಲ್ಲಿಯೂ ಯಡಿಯೂರಪ್ಪ ಸೋಂಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಂಪುಟದಲ್ಲಿರುವ ಸಚಿವರು ಅಷ್ಟಾಗಿ ಆಸಕ್ತಿ ತೋರಿಸದೆ ಇದ್ದರೂ ಯಡಿಯೂರಪ್ಪನವರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಏಕಾಂಗಿ ಹೋರಾಟದಲ್ಲಿದ್ದಾರೆ. ಸ್ವಪಕ್ಷೀಯರೇ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪವಾಗುತ್ತಿದೆ ಎಂದು ರಾಜ್ಯಪಾಲರಿಗೆ ಪತ್ರ ಬರೆದರೂ ಯಡಿಯೂರಪ್ಪ ವಿಚಲಿತರಾಗಲಿಲ್ಲ. ಪುತ್ರ ವಿಜಯೇಂದ್ರ ವಿರುದ್ಧ ಟೀಕೆ-ಟಿಪ್ಪಣಿಗಳು ಬರುತ್ತಿದ್ದರೂ ಅವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಾವು ಮಾಡಬೇಕಾದ ಕೆಲಸಗಳ ಬಗ್ಗೆ ಮಾತ್ರ ಗಮನ ಹರಿಸಿದ್ರು.

jk

ಹೀಗೆ ತಮ್ಮ ಪಾಡಿಗ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದ ಯಡಿಯೂರಪ್ಪನವರನ್ನು ಡಿಸ್ಟರ್ಬ್ ಮಾಡಲೆಂದೇ ಒಂದು ವರ್ಗ ಕೆಲಸ ಮಾಡುತ್ತಿದೆ. ಪದೇ ಪದೆ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬರುವಂತೆ ನೋಡಿಕೊಂಡು ಯಡಿಯೂರಪ್ಪನವರ ವೇಗಕ್ಕೆ ಬ್ರೇಕ್ ಹಾಕೋದೇ ಈ ತಂಡದ ಕೆಲಸ. ಪಕ್ಷದಲ್ಲಿ ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಟ್ಟು ಮುಖ್ಯಮಂತ್ರಿಗಳಿಗೆ ಮುಜುಗರ ಉಂಟು ಮಾಡುವುದು, ತಮ್ಮ ಇಲಾಖೆಯಲ್ಲಿ ಸಿಎಂ ಪುತ್ರನ ಹಸ್ತಕ್ಷೇಪದ ಕುರಿತು ಹೈಕಮಾಂಡ್ ಗೆ ದೂರು ಕೊಡುವುದು ಇವೆಲ್ಲವೂ ಕಳೆದ ಕೆಲ ದಿನಗಳಿಂದ ನಡೆಯುತ್ತಲೇ ಇದೆ. ಇದೆಲ್ಲದರಿಂದ ಬೇಸತ್ತಿರುವ ಸಿಎಂ ಮೊನ್ನೆ ಇದ್ದಕ್ಕಿದ್ದಂತೆ ರಾಜೀನಾಮೆ ವಿಚಾರವನ್ನು ಮಾಧ್ಯಮಗಳ ಮುಂದೆ ತಾವೇ ಪ್ರಸ್ತಾಪ ಮಾಡಿದ್ರು. ಈ ಮೂಲಕ ತಾವು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂಬ ಸಂದೇಶವನ್ನು ಕೆಲ ನಾಯಕರಿಗೆ ರವಾನಿಸಿದ್ರು. ಈ ಮೂಲಕ ಆಯ್ಕೆಯನ್ನು ಹೈಕಮಾಂಡ್ ಗೆ ಬಿಟ್ರು.

ಕಳೆದ ವಾರ ದೆಹಲಿ ನಾಯಕರ ಭೇಟಿಗೆ ತೆರಳಿದ ‘ಸೈನಿಕ’ನಿಗೆ ವರಿಷ್ಠರಿಂದ ಸಿಕ್ಕ ಉತ್ತರದ ಬಗ್ಗೆ ಸಿಎಂಗೆ ಅರಿವಿತ್ತು. ಕೊರೊನಾ ಮುಗಿಯುವವರೆಗೂ ಇತ್ತ ತಲೆ ಹಾಕದಂತೆ ಅತೃಪ್ತ ಆತ್ಮಗಳಿಗೆ ಹೈಕಮಾಂಡ್ ಖಡಕ್ ವಾರ್ನಿಂಗ್ ಕೊಟ್ಟಿದ್ದು ಕೂಡ ಎಲ್ಲ ಭಿನ್ನಮತೀಯ ಚಟುವಟಿಕೆಗಳಿಗೆ ಬ್ರೇಕ್ ಬೀಳುವಂತೆ ಮಾಡಿತ್ತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಯಡಿಯೂರಪ್ಪ ರಾಜೀನಾಮೆ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟಿದ್ರು. ಪ್ರವಾಹ ವೇಳೆ ರಾಜ್ಯಕ್ಕೆ ಬರಬೇಕಿದ್ದ ಪರಿಹಾರ ಸರಿಯಾಗಿ ಕೊಡದೆ ಸತಾಯಿಸಿದ್ದು, ರಾಜ್ಯದ ಪಾಲಿನ ತೆರಿಗೆ ವಿಚಾರದಲ್ಲಿ ಆದ ಅನ್ಯಾಯ, ಕೊವಿಡ್ ವೇಳೆ ಆಕ್ಸಿಜನ್ ಪಡೆಯಲು ನ್ಯಾಯಾಲಯದ ಮೊರೆ ಹೋಗುವಂತೆ ಮಾಡಿದ್ದು.

tomorrow-decision-lockdown-extension-cm-bs-yeddyurappa

ಇದೆಲ್ಲದರಿಂದಲೂ ಯಡಿಯೂರಪ್ಪನವರಿಗೆ ಕೇಂದ್ರದ ಧೋರಣೆ ಬಗ್ಗೆ ಅಸಧಾನವಿದೆ. ಯಡಿಯೂರಪ್ಪನವರೇ ಕೆಳಗಿಳಿಯಲಿ ಎಂದು ಕಾಯುತ್ತಿರುವ ಕೇಂದ್ರ ಹಾಗೂ ರಾಜ್ಯದ ಕೆಲ ನಾಯಕರಿಗೆ ಒಂದು ಸ್ಪಷ್ಟ ಸಂದೇಶ ಈ ಹೇಳಿಕೆಯಿಂದ ರವಾನೆಯಾಗಿದೆ.

ಕೆಲ ದಿನಗಳಿಂದ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಮಾನಸಿಕ ಹಿಂಸೆ ಆಗುತ್ತಿದೆ. ಹೀಗಾಗಿ ನನ್ನ ನಿರ್ಧಾರ ತಿಳಿಸಿದ್ದೇನೆ ಎಂದು ಆಪ್ತರ ಬಳಿ ಸಿಎಂ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿಎಂ ಖುರ್ಚಿಗೆ ಅಂಟಿಕೊಂಡಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನನಗಿಂತಲೂ ಬೇರೆ ನಾಯಕರಿದ್ದಾರೆ ಎಂಬ ಮಾರ್ಮಿಕ ನುಡಿ ಯಾರಿದ್ದಾರೆ ನೀವೇ ಹೇಳಿ ಎಂದು ಪರೋಕ್ಷವಾಗಿ ಪ್ರಶ್ನೆ ಮಾಡಿದಂತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಕಟ್ಟಲು ಯಡಿಯೂರಪ್ಪ ಹಗಲು ರಾತ್ರಿ ಶ್ರಮಿಸಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಅವರ ಕೊಡುಗೆ ಅಪಾರ. ರಾಜ್ಯದ ಲಿಂಗಾಯಿತರು, ಮಠ ಮಾನ್ಯಗಳು ಯಡಿಯೂರಪ್ಪನವರ ಬೆನ್ನಿಗಿದ್ದಾರೆ. ಇಂದಿಗೂ ಲಿಂಗಾಯಿತರು ತಮ್ಮ ಸಮುದಾಯದ ಪ್ರಬಲ ನಾಯಕ ಅಂತಾ ಒಪ್ಪಿಕೊಳ್ಳೋದು ಯಡಿಯೂರಪ್ಪನವರನ್ನ ಮಾತ್ರ.

ಇಲ್ಲಿಯವರೆಗೂ ಈ ಸಮುದಾಯದಲ್ಲಿ ಯಡಿಯೂರಪ್ಪನವರಿಗೆ ಸರಿಸಮಾನವಾಗಿ ಯಾವ ನಾಯಕರೂ ಇಲ್ಲ. ಬೇರೆ ನಾಯಕರನ್ನು ಬೆಳೆಸುವ ಪ್ರಯತ್ನಕ್ಕೆ ಯಡಿಯೂರಪ್ಪ ಕೈ ಹಾಕಲೂ ಇಲ್ಲ! ಹೀಗಾಗಿ ಲಿಂಗಾಯಿತರೆಲ್ಲರೂ ಒಪ್ಪಕೊಳ್ಳುವ ಏಕೈಕ ನಾಯಕ ಯಡಿಯೂರಪ್ಪ. ಪ್ರಬಲ ಸಮುದಾಯದ ನಾಯಕನನ್ನು ಬಲವಂತವಾಗಿ ಕೆಳಗಿಳಿಸಿದರೆ ಮುಂಬರುವ ಚುನಾವಣೆಯಲ್ಲಿ ಏನಾಗಬಹುದು ಎಂಬ ಕಲ್ಪನೆ ಹೈಕಮಾಂಡ್ ಗಿದೆ. ಹೀಗಾಗಿಯೇ ಬಿಜೆಪಿ ಪಕ್ಷದಲ್ಲಿ ೭೫ರ ನಂತರ ಅಧಿಕಾರವಿಲ್ಲ ಎಂಬ ನಿಯಮವಿದ್ದರೂ ಹೈಕಮಾಂಡ್ ಯಡಿಯೂರಪ್ಪನವರ ಬದಲಾವಣೆಗೆ ಮುಂದಾಗಲಿಲ್ಲ.

jk

ಚುನಾವಣೆಗಳಲ್ಲಿ ಜನ ಪಕ್ಷಕ್ಕಿಂತ ಸ್ಥಳೀಯ ನಾಯಕತ್ವಕ್ಕೆ, ವ್ಯಕ್ತಿಯ ವರ್ಚಸ್ಸಿಗೆ ಮಣೆ ಹಾಕುತ್ತಾರೆ ಎಂದು ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳ ಚುನಾವಣೆಯಲ್ಲಿ ಸಾಬೀತಾಗಿದೆ. ಹೈಕಮಾಂಡ್ ಏನಾದ್ರೂ ಯಡಿಯೂರಪ್ಪನವರ ಸವಾಲನ್ನು ಒಪ್ಪಿಕೊಂಡು ರಾಜೀನಾಮೆ ಕೇಳಿದರೆ ಅದರಿಂದ ಆಗುವ ನಷ್ಟದ ಬಗ್ಗೆ ಹೈಕಮಾಂಡ್ಗೆ ಅರಿವಿದೆ ಹೀಗಾಗಿ ಸದ್ಯದ ಮಟ್ಟಿಗೆ ಆ ಪ್ರಯತ್ನ ತೀರಾ ವಿರಳ. ಯಡಿಯೂರಪ್ಪನವರ ಮಾತಿನ ಹಿಂದಿರುವ ನಿಗೂಢವನ್ನು ಅರಿಯದೆ ಸಿಎಂ ರೇಸ್ ನಲ್ಲಿರುವ ಕೆಲ ನಾಯಕರು ಸಿಎಂ ಖುರ್ಚಿ ಮೇಲೆ ಆದಾಗಲೇ ಟವೆಲ್ ಹಾಸಿದ್ದಾರೆ. ಸಿಎಂ ಪರ ಹಾಗೂ ವಿರುದ್ಧ ಇರುವವರಿಂದ ಸಹಿ ಸಂಗ್ರಹವೂ ನಡೆದಿದೆ.

ಅದೇನೇ ಇರಲಿ, ಕಣ್ಣಿಗೆ ಕಾಣದ ವೈರಸ್ ಇಡೀ ಜಗತ್ತನ್ನೇ ತಲ್ಲಣಿಸುವಂತೆ ಮಾಡಿದೆ. ಇಂಥಹ ಸ್ಥಿತಿಯಲ್ಲಿ ಯಾವ ರಾಜ್ಯದ ಮುಖ್ಯಮಂತ್ರಿಯೇ ಆಗಲಿ ಪರಿಸ್ಥಿತಿ ನಿಭಾಯಿಸುವುದು ಸವಾಲಿನ ಕೆಲಸವೇ ಸರಿ. ರಾಜ್ಯದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಎಷ್ಟೋ ಕಡೆ ಇಂದಿಗೂ ಆಕ್ಸಿಜನ್ ಸಮಸ್ಯೆ, ಬೆಡ್ ಸಮಸ್ಯೆ ನೀಗಿಲ್ಲ. ಉದ್ಯೋಗ ಕಡಿತಗಳಾಗವೆ. ಆರ್ಥಿಕತೆ ಕುಸಿದು ಬಿದ್ದಿದೆ. ಜನ ಮುಂದೇನು ಎಂದು ಯೋಚನೆಗೆ ಬಿದ್ದಿದ್ದಾರೆ. ಆದ್ರೆ ಇದ್ಯಾವುದರ ಪರಿವೆಯೇ ಇಲ್ಲದ ನಮ್ಮನ್ನಾಳುವ ನಾಯಕರು ಮಾತ್ರ ಖುರ್ಚಿ ಬಗ್ಗೆ ಚಿಂತಿಸುತ್ತಿದ್ದಾರೆ. ಇದನ್ನ ವಿಪರ್ಯಾಸ ಅನ್ನಬೇಕೋ.. ಕೊವಿಡ್ ಗಿಂತ ದೊಡ್ಡ ಖಾಯಿಲೆ ಎನ್ನಬೇಕೋ.. ರಾಜ್ಯದ ದುರಂತ ಎನ್ನಬೇಕೋ ಗೊತ್ತಿಲ್ಲ.

sahithya, jk, mysore

 

 

 

 

– ಸಾಹಿತ್ಯ ಯಜಮಾನ್, ಹಿರಿಯ ಪತ್ರಕರ್ತರು.

 

key words : bjp-bsy-yadiyurappa-resignation-statement-high-commend-dilemma-Delhi