ಬಿಜೆಪಿ ಮುಖ್ಯಮಂತ್ರಿ ಸ್ಥಾನ ಪೇಮೆಂಟ್ ಸೀಟಾ..? – ಶಾಸಕ ಯತ್ನಾಳ್ ಹೇಳಿಕೆ ಕುರಿತು ಸಿದ್ಧರಾಮಯ್ಯ ಟಾಂಗ್..

ಬೆಂಗಳೂರು,ಮೇ,7,2022(www.justkannada.in): ನಿಮ್ಮನ್ನ ಸಿಎಂ ಮಾಡುತ್ತೇವೆ 2500 ಕೋಟಿ ರೂಪಾಯಿ ಕೊಡಿ ಎಂದು ದೆಹಲಿಯಿಂದ ಬಂದು ಕೇಳಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಉಲ್ಲೇಖಿಸಿ ರಾಜ್ಯ ಬಿಜೆಪಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟಾಂಗ್ ನೀಡಿದ್ದು, ಬಿಜೆಪಿ ಮುಖ್ಯಮಂತ್ರಿ ಸ್ಥಾನ ಪೇಮೆಂಟ್ ಸೀಟಾ..? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮನ್ನು ಮುಖ್ಯಮಂತ್ರಿ ಮಾಡಲು 2500 ಕೋಟಿ ರೂಪಾಯಿ ದೆಹಲಿಯವರು ಕೇಳಿದ್ದರು ಎಂಬ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಅವರ ಆರೋಪ ಗಂಭೀರ ಸ್ವರೂಪದ್ದಾಗಿದ್ದು ಸೂಕ್ತ ತನಿಖೆಯಿಂದ ಮಾತ್ರ ಇದರ ಹಿಂದಿನ ಸತ್ಯಾಸತ್ಯತೆ ಬಹಿರಂಗವಾಗಲು ಸಾಧ್ಯ. ಯತ್ನಾಳ್ ಆರೋಪದ ಬಗ್ಗೆ ತನಿಖೆ ನಡೆಸದೆ ಇದ್ದರೆ ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ರೂಪಾಯಿ ತೆತ್ತು ಮುಖ್ಯಮಂತ್ರಿಯಾಗಿರುವುದನ್ನು ಬಸವರಾಜ ಬೊಮ್ಮಾಯಿ ಅವರೇ ಒಪ್ಪಿಕೊಂಡಂತಾಗುತ್ತದೆ. ಅದರ ನಂತರ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವ ಯಾವ ನೈತಿಕತೆ ಇರುವುದಿಲ್ಲ.

ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡುತ್ತಿರುವುದನ್ನು ಕೇಳಿದರೆ ಅವರ ಬಳಿ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಅಗಾಧವಾದ ಮಾಹಿತಿ ಇದ್ದಂತೆ ಕಾಣುತ್ತಿದೆ.  ಅವರನ್ನು ತನಿಖೆ ನಡೆಸಿ ಆ ಮಾಹಿತಿಯನ್ನು ಪಡೆದರೆ ತನಿಖೆಯೂ ಸಲೀಸಾಗುತ್ತದೆ, ಸತ್ಯವೂ ಹೊರಬರುತ್ತದೆ.

ಬಿಜೆಪಿಯಲ್ಲಿ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಆಯ್ಕೆ ಮಾಡುತ್ತದೆ ಎಂದು ಜನ ತಿಳಿದುಕೊಂಡಿದ್ದರು. ಇದು ಹರಾಜಿನ ಮೂಲಕ ಮಾರಾಟವಾಗುವ ‘ಪೇಮೆಂಟ್ ಸೀಟು’ ಎನ್ನುವುದು ಶಾಸಕ ಯತ್ನಾಳ್ ಆರೋಪದಿಂದ ಬಯಲಾಗಿದೆ. ಈ ಸೀಟಿಗಾಗಿ ಹಿಂದಿನ ಮತ್ತು ಈಗಿನ ಮುಖ್ಯಮಂತ್ರಿಗಳು ಎಷ್ಟು ದುಡ್ಡು ಕೊಟ್ಟಿದ್ದಾರೆ ಎನ್ನುವುದೂ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಈ “ಪೇಮೆಂಟ್ ಸೀಟುಗಳು” ಕೇವಲ ಮುಖ್ಯಮಂತ್ರಿ ಕುರ್ಚಿಗೆ ಸೀಮಿತವಾಗಿಲ್ಲ, ಸಚಿವ ಸ್ಥಾನಗಳನ್ನೂ ಈ ರೀತಿ ಹರಾಜು ಕೂಗಲಾಗಿದೆ ಎನ್ನುವ ಆರೋಪ ಇದೆ. ಬಿಜೆಪಿಗೆ ಪಕ್ಷಾಂತರ ಮಾಡಿದ ಶಾಸಕರು ಯಾರಿಗೆ ಮತ್ತು ಎಷ್ಟು ದುಡ್ಡು ಸಂದಾಯ ಮಾಡಿದ್ದಾರೆ ಎನ್ನುವುದೂ ತನಿಖೆಯಾಗಬೇಕು.  ಗುತ್ತಿಗೆದಾರರಿಂದ 40% ಕಮಿಷನ್ ವಸೂಲಿ, ಪಿಎಸ್ ಐ ಮತ್ತಿತರ ಹುದ್ದೆಗಳ ನೇಮಕದ ಅಕ್ರಮ ವ್ಯವಹಾರ, ಆರೋಗ್ಯ ಇಲಾಖೆಯ ಭ್ರಷ್ಟಾಚಾರವೂ ಸೇರಿದಂತೆ ಎಲ್ಲ ಹಗರಣಗಳಿಗೂ ಯತ್ನಾಳ್ ಮಾಡಿರುವ ಆರೋಪಕ್ಕೂ ನೇರವಾದ ಸಂಬಂಧ ಇದೆ. ಇವೆಲ್ಲವುಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಮತ್ತು ಸಚಿವರಾಗಲು ಪೇಮೆಂಟ್ ಮಾಡಿದವರು ಅದರ ವಸೂಲಿಗಾಗಿಯೇ ಈಗ ಕಮಿಷನ್ ದಂಧೆ ಮತ್ತು ಅಕ್ರಮ ವ್ಯವಹಾರಕ್ಕೆ ಇಳಿದಿದ್ದಾರೆ. ಇದರಿಂದ ಒಬ್ಬ ಅಮಾಯಕ ಜೀವ ಕಳೆದುಕೊಂಡ, ಸಾವಿರಾರು ಅಮಾಯಕರು ಭವಿಷ್ಯ ಕಳೆದುಕೊಂಡರು.

ಬಸವನಗೌಡ ಪಾಟೀಲ್ ಯತ್ನಾಳ್ ಆರೋಪ ಹೊಸದೇನಲ್ಲ. ಕಳೆದ ಎರಡು ವರ್ಷಗಳಿಂದ ಇವರು ತಮ್ಮದೇ ಪಕ್ಷದ ಮುಖ್ಯಮಂತ್ರಿಗಳು, ಸಚಿವರು ಮತ್ತು ನಾಯಕರ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಮೌನವಾಗಿರುವುದು ಸಮ್ಮತಿಯ ಸೂಚನೆಯೇ? ಎಂದು ಸಿದ್ಧರಾಮಯ್ಯ ಚಾಟಿ ಬೀಸಿದರು.

Key words: BJP -CM – position-Payment seat-former CM-Siddaramaiah

ENGLISH SUMMARY….

Is the BJP CM post a paid one? Siddaramaiah ridicules BJP following Yatnal’s statement
Bengaluru, May 7, 2022 (www.justkannada.in): Leader of the Opposition in the Assembly, Siddaramaiah, today ridiculed the BJP, following BJP MLA Basanagouda Patil Yatnal’s recent statement that he was approached by a few people from Delhi that he would be made CM if he could pay them Rs. 2500 crores. Siddaramaiah has questioned whether the BJP CM post is a paid one?!
In a press release, the opposition leader mentioned that Yatnal’s statement is a serious one and the reality would expose only through a thorough probe. “If an investigation is not conducted over Yatnal’s allegations then it will prove that Basavaraj Bommai has become a Chief Minister by paying thousands of crores to the BJP leaders. After that Bommai will not have any moral rights to continue in the post,” he observed.
“If we look at BJP MLA Yatnal’s allegations and statements it appears that he has huge information about the BJP’s corruption. Hence, an investigation should be conducted and efforts should be made to extract the truth,” he added.
Keywords: BJP MLA/ Basanagouda Patil Yatnal/ allegations/ BJP/ 2500 crore/ CM/ Siddaramaiah