ಬೆಂಗಳೂರು,ಜನವರಿ,14,2025 (www.justkannada.in): ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳಲ್ಲೂ ಅಸಮಾಧಾನದ ಹೊಗೆ ಆವರಿಸಿದ್ದು, ಮೂರು ಪಕ್ಷಗಳಲ್ಲೂ, ಬಣ ರಾಜಕೀಯ, ಸಭೆಗಳು ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದೊಂದು ಪಕ್ಷದಲ್ಲೂ ಒಂದೊಂದು ರೀತಿಯ ಗೊಂದಲ, ಬಂಡಾಯದ ಕಾರ್ಮೋಡ ಕವಿದಿದ್ದು, ಉಂಟಾಗಿರುವ ಅಸಮಾಧಾನಕ್ಕೆ ಬ್ರೇಕ್ ಹಾಕಲು ಅಯಾ ಪಕ್ಷದ ಹಿರಿಯ ನಾಯಕರು ಮುಂದಾಗಿದ್ದಾರೆ. ಬಿಜೆಪಿಯಲ್ಲಿ ಹೇಳುವುದಾದರೆ ಬಿವೈ ವಿಜಯೇಂದ್ರ ವಿರುದ್ದ ರೆಬಲ್ಸ್ ನಾಯಕರು ಸಿಡಿದೆದ್ದು ಸಭೆಗಳನ್ನ ನಡೆಸುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಯತ್ನಾಳ್ ಟೀಮ್ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಪುತ್ರನ ಪರ ಅಖಾಡಕ್ಕಿಳಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಶಾಸಕರು, ಪರಿಷತ್ ಸದಸ್ಯರ ಜೊತೆ ಸಭೆ ನಡೆಸಿದ್ದಾರೆ.
ಇತ್ತ ಜೆಡಿಎಸ್ ನಲ್ಲೂ ನಾಯಕತ್ವ ಬದಲಾವಣೆಗೆ ದಳಪತಿಗಳು ಮುಂದಾಗಿದ್ದು, ನಿಖಿಲ್ ಕುಮಾರಸ್ವಾಮಿಗೆ ಪಟ್ಟ ಕಟ್ಟಲು ಚಿಂತನೆ ನಡೆಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ಈ ಕುರಿತು ಸಭೆ ನಡೆಸಿರುವ ಹೆಚ್ ಡಿ ಕುಮಾರಸ್ವಾಮಿ ಚುನಾವಣೆ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ ಮುಂದೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಲ್ಲಲು ಜೆಡಿಎಸ್ ನಾಯಕರು ಹಿಂದೇಟು ಹಾಕುವ ಸಾಧ್ಯತೆ ಇದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ದಳಪತಿಗಳ ವಿರುದ್ಧ ಶಾಸಕ ಜಿಟಿ ದೇವೇಗೌಡರು ಅಸಮಾಧಾನ ಮುಂದುವರೆಸಿದ್ದು, ಪಕ್ಷ ಹಾಗೂ ಪಕ್ಷದ ನಾಯಕರ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಜಿಟಿ ದೇವೇಗೌಡರ ನಡೆ ಹೈಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿದೆ
ಕಾಂಗ್ರೆಸ್ ನಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಮೂಲ ಕಾಂಗ್ರೆಸ್ಸಿಗರ ನಡುವೆ ತಿಕ್ಕಾಟ ಉಂಟಾಗಿದ್ದು, ಸಿಎಂ ಖುರ್ಚಿಗಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಪೈಪೋಟಿ ಉಂಟಾಗಿದೆ. ಇತ್ತ ಸದ್ದಿಲ್ಲದೇ ದಲಿತ ನಾಯಕತ್ವ ವಿಚಾರ ಮುನ್ನಲೆಗೆ ಬರುತ್ತಿದೆ.
ಕಾಂಗ್ರೆಸ್ ನಲ್ಲಿನ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದ್ದು, ಈ ನಿಟ್ಟಿನಲ್ಲಿ ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸಮ್ಮುಖದಲ್ಲಿ ನಿನ್ನೆ ಶಾಸಕಾಂಗ ಪಕ್ಷದ ಸಭೆ ನಡೆದಿದೆ.
ಸಭೆಯಲ್ಲಿ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲೆ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿರುವ ರಣದೀಪ್ ಸಿಂಗ್ ಸುರ್ಜೇವಾಲ, ಅಸಮಾಧಾನ ಬೇಸರ ಇದ್ದರೆ ಹೈಕಮಾಂಡ್ ಗೆ ಜೊತೆ ಹಂಚಿಕೊಳ್ಳಲು ಸೂಚನೆ ನೀಡಿದ್ದಾರೆ. ಸಮುದಾಯಗಳ ಸಭೆಯನ್ನು ಪಕ್ಷದ ವೇದಿಕೆಯಲ್ಲೇ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ.
Key words: BJP, Congress, JDS, Dissatisfaction, brake