ಮೈಸೂರು,ಏಪ್ರಿಲ್,28,2023(www.justkannada.in): ವರುಣಾ ಕ್ಷೇತ್ರದ ಸಿದ್ದರಾಮನಹುಂಡಿ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಲ್ಲಿನ ಗ್ರಾಮಸ್ಥರು, ಇದು ಸಿದ್ಧರಾಮಯ್ಯ ಮತ್ತು ಗ್ರಾಮಕ್ಕೆ ಕೆಟ್ಟ ಹೆಸರು ತರಲು ನಡೆಸಿರುವ ಕುತಂತ್ರ ಎಂದು ಆರೋಪಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಸಿದ್ದರಾಮನಹುಂಡಿ ಗ್ರಾಮಸ್ಥರು, ನಮ್ಮ ಗ್ರಾಮದ ಮೇಲೆ ಕೆಟ್ಟ ಹೆಸರು ತರಲು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ನಿನ್ನೆ ನಮ್ಮ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿರುವುದು. ನಮ್ಮ ಗ್ರಾಮಸ್ಥರು ಯಾರು ಸಹ ಗಲಾಟೆಯಲ್ಲಿ ಭಾಗಿಯಾಗಿಲ್ಲ. ಕೆಲವರು ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಈ ಎಲ್ಲಾ ಘಟನೆಗಳಿಗೆ ಸಂಸದ ಪ್ರತಾಪ್ ಸಿಂಹ ಅವರೇ ಕಾರಣ. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹರಿಗೆ ಇಲ್ಲೇನು ಕೆಲಸ..? ತಾಕತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಅವರೇ ಸ್ಪರ್ಧೆ ಮಾಡಬೇಕಿತ್ತು ಎಂದು ಕಿಡಿಕಾರಿದರು.
ನಮ್ಮ ಕ್ಷೇತ್ರಕ್ಕೆ ಗೂಂಡಾಗಳು,ರೌಡಿಗಳನ್ನ ಕರೆಸಿ, ತಾವೇ ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಗಲಭೆ ಎಬ್ಬಿಸಿ ಚುನಾವಣೆ ಗೆಲ್ಲಲು ಪ್ರತಾಪ್ ಸಿಂಹ ಮುಂದಾಗಿದ್ದಾರೆ. ಪ್ರತಾಪ್ ಸಿಂಹ, ಸೋಮಣ್ಣನವರ ಆಟ ಇಲ್ಲಿ ನಡೆಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲಲಿ. ಸೋಮಣ್ಣನವರು ಮತ ಕೇಳಲು ಬಂದಾಗ ನಾವೇ ಸ್ವಾಗತ ಕೊರಿದ್ದೇವೆ. ಪ್ರಚಾರದ ವೇಳೆ ಸಾಕಷ್ಟು ಪೊಲೀಸರಿದ್ದರು. ಗಲಾಟೆಗೂ ನಮ್ಮ ಗ್ರಾಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸಿದ್ದರಾಮನಹುಂಡಿ ಗ್ರಾಮಸ್ಥರು ಸ್ಪಷ್ಟನೆ ನೀಡಿದರು.
Key words: bjp-congress-Siddaramanahundi- villagers – Outrage