ಬೆಂಗಳೂರು,ಫೆಬ್ರವರಿ,28,2025 (www.justkannada.in): ಇಂದು ಬಿಜೆಪಿ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿತು.
ಇಂದು ಕಾವೇರಿ ನಿವಾಸದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನ ಬಿಜೆಪಿ ನಿಯೋಗ ಭೇಟಿ ಮಾಡಿತು. ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ರಾಮಮೂರ್ತಿ, ಭೈರತಿ ಬಸವರಾಜ, ಕೆ.ಗೋಪಾಲಯ್ಯ, ಎಂ.ಕೃಷ್ಣಪ್ಪ, ಎಸ್.ಆರ್.ವಿಶ್ವನಾಥ್, ಮುನಿರತ್ನ, ಉದಯ ಗರುಡಾಚಾರ್, ಎಸ್.ರಘು, ರವಿಸುಬ್ರಮಣ್ಯ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಕೇಶವಪ್ರಸಾದ್ ಉಪಸ್ಥಿತರಿದ್ದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಜೊತೆ ಮೆಟ್ರೋ ಪ್ರಯಾಣದ ದರ ಇಳಿಕೆ ಕುರಿತಾಗಿ ಬಿಜೆಪಿ ನಿಯೋಗ ಮಾತುಕತೆ ನಡೆಸಿತು. ಮೆಟ್ರೋ ಪ್ರಯಾಣ ದರ ಸಂಬಂಧ ದರ ನಿಗದಿ ಸಮಿತಿಗೆ ನೀವು ಮತ್ತೊಂದು ಪತ್ರ ಬರೆಯಿರಿ. ನಾವು ಮೂರೂ ಜನ ಸಂಸದರು ಸೇರಿಕೊಂಡು ಮೂರು ದಿನಗಳಲ್ಲಿ ಇಳಿಕೆ ಮಾಡಿಸುತ್ತೇವೆ” ಎಂದು ಸಿಎಂ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಈ ಬಗ್ಗೆ ಬಿಎಂಆರ್ಸಿಎಲ್ ಎಂಡಿ ಜೊತೆ ಮಾತಾಡುತ್ತೇನೆ. ದರ ನಿಗದಿ ಸಮಿತಿಗೆ ಮತ್ತೊಂದು ಪತ್ರ ಬರೆಯುವ ಬಗ್ಗೆ ಹೇಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಹಾಗೆಯೇ ಪ್ರತಿ ಕ್ಷೇತ್ರಕ್ಕೆ 150 ಕೋಟಿ ರೂ. ಅನುದಾನ ನೀಡುವಂತೆ ಬಿಜೆಪಿ ನಿಯೋಗ ಮನವಿ ಮಾಡಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಅನುದಾನ ಹಂಚಿಕೆ ಬಗ್ಗೆ ಪರಿಶೀಲಿಸುತ್ತೇನೆ. ಈಗಾಗಲೇ ಪ್ರತಿ ಕ್ಷೇತ್ರಕ್ಕೂ ಗ್ಯಾರಂಟಿ ಯೋಜನೆಗಳಿಗೆ 250 ಕೋಟಿ ರೂ. ಒದಗಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Key words: CM, Siddaramaiah, meets, BJP, delegation