ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಿಜೆಪಿ ದ್ವಂದ್ವ ನೀತಿ: ಅಶೋಕ್‌ ಗೆ ಸುಳ್ಳು ಹೇಳುವುದರಲ್ಲಿ ಪಿಎಚ್‌ ಡಿ ನೀಡಬೇಕು- ಎಂ.ಲಕ್ಷ್ಮಣ್

ಮೈಸೂರು,ನವೆಂಬರ್,21,2024 (www.justkannada.in): ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗೊಂದಲ ವಿಚಾರ  ಸಂಬಂಧ, ಬಿಜೆಪಿ ದ್ವಂದ್ವ ನೀತಿಯಿಂದ ಈ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಹೊರಟಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್ , ನಾವು ಒಂದು ಕಾರ್ಡ್‌ ಅನ್ನು ರದ್ದು ಮಾಡಿಲ್ಲ ಎಪಿಎಲ್‌ ಗೆ ಬದಲಾಯಿಸಿದ್ದೇವೆ. ವಿರೋಧ ಪಕ್ಷದ ಸ್ಥಾನಕ್ಕೆ ಧಕ್ಕೆ ತರುವ ವ್ಯಕ್ತಿ ಅಶೋಕ್. ಪರಿಜ್ಞಾನವಿಲ್ಲದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದಲ್ಲಿ 12,80,540 ಹೆಚ್ಚುವರಿ ಬಿಪಿಎಲ್ ಕಾರ್ಡ್  ಹೆಚ್ಚುವರಿಯಾಗಿ ನೀಡಲಾಗಿದೆ ಈ ಹಿನ್ನೆಲೆಯಲ್ಲಿ  ರಾಷ್ಟ್ರೀಯ ಆಹಾರ ಇಲಾಖೆಯಿಂದ ನಮಗೆ ನೋಟಿಸ್ ಬಂದಿದ್ದು, ಇದನ್ನು ರದ್ದುಪಡಿಸುವಂತೆ ನೋಟಿಸ್ ಹಿನ್ನೆಲೆ ಕ್ರಮ ವಹಿಸಲಾಗಿದೆ. ಇದು ಬಿಜೆಪಿಯ ಡಬಲ್ ಸ್ಟ್ಯಾಂಡರ್ಡ್ ಎಂದು ಟೀಕಿಸಿದರು.

ಬಿಪಿಎಲ್‌ ಕಾರ್ಡ್ ಬದಲಾದರೆ ಅಕ್ಕಿ ಮಾತ್ರ ಸಿಗುವುದಿಲ್ಲ. ಬಿಪಿಎಲ್ ಕಾರ್ಡ್‌ನಿಂದ ಗೃಹಲಕ್ಷ್ಮಿ ನಿಲ್ಲುವುದಿಲ್ಲ. ತೆರಿಗೆ ಪಾವತಿ ಮಾಡುತ್ತಿದ್ದರೆ ಮಾತ್ರ ಗೃಹಲಕ್ಷ್ಮಿ ಸಿಗುವುದಿಲ್ಲ. ಆರ್ ಅಶೋಕ್‌ಗೆ ಸುಳ್ಳು ಹೇಳುವುದರಲ್ಲಿ ಪಿಎಚ್‌ಡಿ ನೀಡಬೇಕು. ನೋಟಿಸ್ ಕೊಟ್ಟು ಈಗ ನಾಟಕ ಆಡುತ್ತಿದ್ದೀರಾ ? ನಿಮಗೆ ನಾಚಿಕೆ ಆಗುವುದಿಲ್ಲವಾ   ಎಂದು ಹರಿಹಾಯ್ದರು.

ತೆರಿಗೆ ಪಾವತಿದಾರರಾಗಿರಬಾರದು ಮೂರು ಹೆಕ್ಟೇರ್ ಜಮೀನು ಇರಬಾರದು. ವಾಣಿಜ್ಯ ವಾಹನ ಇರಬಾರದು. 150 ಯೂನಿಟ್ ವಿದ್ಯುತ್ ಬಳಕೆ ಮಾಡುವ ಕುಟುಂಬ. ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ಮೀರಬಾರದು ಇದು ಬಿಪಿಎಲ್ ಕಾರ್ಡ್‌ಗೆ ಮಾನದಂಡವಾಗಿದೆ. ಕೇಂದ್ರ 12 ಲಕ್ಷ ಬಿಪಿಎಲ್ ತೆಗೆಯಿರಿ ಅಂತಾ ಹೇಳಿದ್ದರು. ನಾವು 70 ಸಾವಿರ ಮಾತ್ರ ಬಿಪಿಎಲ್‌ನಿಂದ ಎಪಿಎಲ್‌ ಗೆ ಬದಲಾಯಿಸಿದ್ದೇವೆ. ಕೇಂದ್ರದವರೇ ಇದಕ್ಕಾಗಿ ಅಪ್ಲಿಕೇಶನ್ ಸಹ ನೀಡಿದ್ದಾರೆ. ಎರಡೆರೆಡು ಕಾರು ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಇವರ ಬಿಪಿಎಲ್ ಕಾರ್ಡ್ ರದ್ದು ಮಾಡಬೇಕಾ ಬೇಡವಾ ? ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.

ವಕ್ಫ ಬಗ್ಗೆ ಮಾಜಿ ಸಂಸದ ಪ್ರತಾಪಸಿಂಹ ದಾಖಲೆ ಬಿಡುಗಡೆ ಮತ್ತು ಸಿಎಂ ಇಬ್ರಾಹಿಂ ಹೇಳಿಕೆಗೆ  ಮಾಜಿ ಸಂಸದ ಪ್ರತಾಪಸಿಂಹ ವಾಗ್ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ನಿಮ್ಮ ಬಿಜೆಪಿ ಮೂಲ ವಂಶಸ್ಥರು ಯಾವ ದೇಶದವರು ಹೇಳಿ. ಮಾಜಿ ಸಂಸದ ಪ್ರತಾಪಸಿಂಹ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಭಾರತದ ಮುಸ್ಲಿಂ ಈ ದೇಶದ ಮಣ್ಣಿನ ಮಕ್ಕಳು. ನಮಗೆ ಇರುವಷ್ಟೇ ಹಕ್ಕು ಅವರಿಗೂ ಇದೆ ಎಂದರು.

ಈಗಲಾದರೂ ಬನ್ನಿ ನಾವು ಫ್ರೆಂಡ್ಲಿ ಫೈಟ್ ಮಾಡೋಣ

ಮೈಸೂರು ಚಾ.ನಗರದಲ್ಲಿ ವಕ್ಫ ಆಸ್ತಿ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಪ್ರತಾಪ ಸಿಂಹ ಈ ಬಗ್ಗೆ ಚರ್ಚೆಗೆ ಬರಲಿ. ಸಂಸದರಾಗಿದ್ದಾಗ ಚರ್ಚೆಗೆ ಬರಲಿಲ್ಲ ಈಗ ಆಚೆ ತಳ್ಳಿದ್ದಾರೆ. ಈಗಲಾದರೂ ಬನ್ನಿ ನಾವು ಫ್ರೆಂಡ್ಲಿ ಫೈಟ್ ಮಾಡೋಣ. ಬ್ರಿಟಿಷರ ಕಾಲದಲ್ಲಿ ವಕ್ಫ ಕಾಯ್ದೆ ಬಂದಿರುವುದು. ಅದು ಕಾಲ ಕಾಲಕ್ಕೆ ತಿದ್ದುಪಡಿಯಾಗಿದೆ ಎಂದು ಹೇಳಿ 2010ರ ಸುತ್ತೋಲೆ ಬಿಡುಗಡೆ ಮಾಡಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ವಕ್ಫ್ ಪರವಾಗಿ ಹೊರಡಿಸಿದ್ದ ಸುತ್ತೋಲೆ  ರಿಲೀಸ್ ಮಾಡಿ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್,  ಮಾನ ಮರ್ಯಾದೆ ಇದ್ದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ  ಆಗ ಯಾರು ಸಿಎಂ ಆಗಿದ್ದರು ಹೇಳಿ ಎಂದು ಪ್ರಶ್ನಿಸಿದರು.

ಈ ಭಾಗದ ಮಾಜಿ ಸಂಸದ ಪ್ರತಾಪಸಿಂಹರಿಂ‍ದ ಕೆಲ ಸರ್ವೇ ನಂಬರ್ ಬಿಡುಗಡೆ ವಿಚಾರ, ಹುಣಸೂರು ಗಾವಡಗೆರೆ ಸ್ಮಶಾನ ವಕ್ಫ್ ಬೋರ್ಡ್ ಹೆಸರಿಗೆ ಬದಲಾಗಿರುವ ದಾಖಲೆ. ಸಿದ್ದರಾಮಯ್ಯರಿಂದ ವಕ್ಫ ಬದಲಾವಣೆ ಅಂತಾ ಆರೋಪ ಕೇಳಿ ಬಂದಿದೆ.  ಆದರೆ ಯಾಕೆ ಯಾರು ಈ ಬಗ್ಗೆ ಪ್ರಶ್ನೆ ಮಾಡಿಲ್ಲ ? ರೈತರು ಏಕೆ ನಾವು ಉಳುತ್ತಿದ್ದ ಜಮೀನು ಅಂತಾ ಬಂದು ಕೇಳುತ್ತಿಲ್ಲ ? 869 ಎಕರೆ ಮೈಸೂರು ಜಿಲ್ಲೆಯಲ್ಲಿ ವಕ್ಫ್ ಗೆ ಸೇರಿದ್ದಾಗಿದೆ 1965ರ ಗೆಜೆಟ್ ನೋಟಿಫಿಕೇಷನ್‌ನಿಂದಲೂ ಇದು ಇದೆ. ಬಿಜೆಪಿಯವರು ಬೇರೆ ಅವರ ಆಸ್ತಿ ಕಬಳಿಸುತ್ತಿದ್ದಾರೆ ಯಾರ ಆಸ್ತಿ ಕಬಳಿಕೆ ಆಗಿದೆ ಕರೆದುಕೊಂಡು ಬನ್ನಿ ಎಂದು  ಎಂ ಲಕ್ಷ್ಮಣ್ ಹೇಳಿದರು.

Key words: BJP, double standard, BPL card, issue, M. Laxman